ಮಾವಿನ ಬೆಲೆ ಕುಸಿತ; ನಾಳೆ ಕೋಲಾರ ಬಂದ್‌ ಎಚ್ಚರಿಕೆ ಕೊಟ್ಟ ಬೆಳೆಗಾರರು
x
ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರು ಮಾವಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಮಾವಿನ ಬೆಳೆಯನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು

ಮಾವಿನ ಬೆಲೆ ಕುಸಿತ; ನಾಳೆ ಕೋಲಾರ ಬಂದ್‌ ಎಚ್ಚರಿಕೆ ಕೊಟ್ಟ ಬೆಳೆಗಾರರು

ಮಾವು ಮಾರಾಟಗಾರರು, ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಸೋಮವಾರದಂದು ಜಿಲ್ಲಾದ್ಯಂತ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.


ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿಗೆ ಮಾರುಕಟ್ಟೆಯಲ್ಲಿ ದಿನೇ ದಿನೇ ಬೇಡಿಕೆ ಹಾಗೂ ಬೆಲೆ ಕುಸಿಯುತ್ತಿದೆ. ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಮಾವು ಬೆಳೆಗಾರರು ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸತತ ನಾಲ್ಕು ವಾರಗಳಿಂದ ದರ ಕುಸಿದಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮಾವಿನ ಬೆಳೆಗೆ ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಜೂ. 22ರಂದು ಸೋಮವಾರ ಕೋಲಾರ ಜಿಲ್ಲಾ ಬಂದ್ಗೆ ಕರೆ ನೀಡುವುದಾಗಿ ಮಾವು ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.

ಮಾವು ಮಾರಾಟಗಾರರು, ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಸೋಮವಾರದಂದು ಜಿಲ್ಲಾದ್ಯಂತ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಟನ್ ಮಾವು ಕೇವಲ 3-4 ಸಾವಿರ!

ಕಳೆದ ಒಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಮಾವಿನ ದರ ತೀವ್ರ ಕುಸಿತ ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಟನ್ ಮಾವು ಕೇವಲ 3ರಿಂದ 4 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ. ಅಂದರೆ ಕೆಜಿಗೆ ಕೇವಲ 3 ರಿಂದ 4 ರೂಪಾಯಿ ಸಿಗುತ್ತಿದ್ದು, ಕನಿಷ್ಠ ಕೂಲಿ ಹಾಗೂ ಸಾಗಾಣಿಕೆ ವೆಚ್ಚವೂ ಕೈಗೆ ಸಿಗದಂತಾಗಿದೆ.

ಆದ್ದರಿಂದ ಪ್ರತಿ ಟನ್ ಮಾವಿಗೆ ಕನಿಷ್ಠ 8 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು. ಬೆಳೆಗಾರರ ನಷ್ಟಕ್ಕೆ ತಕ್ಕಂತೆ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆಂಧ್ರ ಮಾದರಿ ಪರಿಹಾರಕ್ಕೆ ಆಗ್ರಹ

ಆಂಧ್ರಪ್ರದೇಶದಲ್ಲಿ ಮಾವಿನ ಬೆಲೆ ಕುಸಿದಾಗ ಅಲ್ಲಿನ ಸರ್ಕಾರವು ತಕ್ಷಣ ಸ್ಪಂದಿಸಿ, ರೈತರ ಹಿತದೃಷ್ಟಿಯಿಂದ ಪ್ರತಿ ಕೆಜಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಅದೇ ಮಾದರಿಯನ್ನು ಕರ್ನಾಟಕ ಸರ್ಕಾರ ಅಳವಡಿಸಿಕೊಳ್ಳಬೇಕು. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ, ಆಡಳಿತ ವರ್ಗ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಸುಮಾರು 45,565 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ತೋತಾಪುರಿ, ಬಾದಾಮಿ, ಮಲ್ಲಿಕಾ, ರಾಜಗಿರ, ಬೇನಿಶಾ (ಬಂಗನಪಲ್ಲಿ), ರಸಪುರಿ, ನೀಲಂ, ದಶೇರಿ, ಸಕ್ಕರೆ ಗುತ್ತಿ ತಳಿಗಳು ಸೇರಿದಂತೆ ಅಂದಾಜು 5,50,190 ಟನ್‌ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರಕ್ಕೆ ಅಂತಿಮ ಎಚ್ಚರಿಕೆ

"ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಭಾನುವಾರದೊಳಗೆ ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಸೋಮವಾರ ಬೆಳಿಗ್ಗೆ ಶ್ರೀನಿವಾಸಪುರ ಹಾಗೂ ಕೋಲಾರ ಜಿಲ್ಲೆಯಾದ್ಯಂತ ಹೆದ್ದಾರಿ ತಡೆ ನಡೆಸಿ, ಬಂದ್ ಆಚರಿಸಲಾಗುವುದು. ಇದಕ್ಕೆ ಆಗುವ ಸಾರ್ವಜನಿಕ ತೊಂದರೆಗೆ ಸರ್ಕಾರವೇ ನೇರ ಹೊಣೆ" ಎಂದು ರೈತ ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.

Read More
Next Story