
ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಕೊಡುಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ: ಕಾಫಿ ಬೆಳೆಗಾರ ಸಾವು
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರ ಗಣಪತಿ (49) ಆನೆ ದಾಳಿಗೆ ಬಲಿಯಾಗಿದ್ದಾರೆ.
ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಾಲು ಸಾಲು ಪ್ರಾಣಹಾನಿಗಳು ಸಂಭವಿಸುತ್ತಿವೆ. ಕಾಫಿ ತೋಟಗಳು ಮತ್ತು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವ ಗಜಪಡೆಗಳು ಜನಸಾಮಾನ್ಯರ ನೆಮ್ಮದಿ ಕಸಿದುಕೊಂಡಿವೆ. ಇದೀಗ ಕೊಡಗಿನಲ್ಲಿ ಕಾಫಿ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಬಲಿಯಾಗುವ ಮೂಲಕ ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ ಮುಂದುವರಿದಿರುವುದು ದೃಢಪಟ್ಟಿದೆ.
ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಬೆಳೆಗಾರ ಗಣಪತಿ (49) ಎಂಬುವವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಲು ಸಾಲು ಸಾವು ನೋವುಗಳ ನಡುವೆಯೇ ನಡೆದಿರುವ ಈ ಘಟನೆಯು ಸ್ಥಳೀಯರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ಇತ್ತೀಚೆಗಷ್ಟೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ (53) ಅವರು ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದರು. ಈ ಸಾವಿನ ಆಘಾತ ಮಾಸುವ ಮುನ್ನವೇ ಗಣಪತಿಯವರ ಸಾವು ಸಂಭವಿಸಿದೆ.
ಇದಕ್ಕೂ ಕೆಲ ದಿನಗಳ ಹಿಂದೆ, ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಕಾಡಾನೆಗೆ ಬಲಿಯಾಗಿದ್ದಳು. ಸಂಜೆ ಹೆತ್ತವರೊಂದಿಗೆ ಬೈಕ್‌ನಲ್ಲಿ ಬಂದು ಇಳಿದ ಕೆಲವೇ ಕ್ಷಣಗಳಲ್ಲಿ, ಕತ್ತಲಿನಲ್ಲಿ ಹಿಂದಿನಿಂದ ಬಂದ ಆನೆ ಭೀಕರ ದಾಳಿ ನಡೆಸಿ ಆಕೆಯ ಪ್ರಾಣ ಕಸಿದಿತ್ತು.
ಹಾಸನದಲ್ಲೂ ಕಾಡಾನೆಗಳ ಭೀತಿ: ಕಾರ್ಮಿಕ ಮಹಿಳೆ ಶೋಭಾ ಸಾವು
ಆನೆಗಳ ಹಾವಳಿ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ ಜನವರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿಯೂ ಇಂತಹುದೇ ಭೀಕರ ಘಟನೆ ನಡೆದಿತ್ತು. ಕಾರ್ಮಿಕ ಮಹಿಳೆ ಶೋಭಾ (40) ಅವರು ತಮ್ಮ ತಾಯಿ ರಾಜಮ್ಮ ಹಾಗೂ ಸಹೋದರಿ ರಾಗಿಣಿ ಅವರೊಂದಿಗೆ ಕಾಫಿ ತೋಟದಲ್ಲಿ ಮರಗಳಿಗೆ ಸುಣ್ಣ ಹಚ್ಚುತ್ತಿದ್ದಾಗ ಆನೆ ಏಕಾಏಕಿ ದಾಳಿ ಮಾಡಿತ್ತು. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಮೂವರೂ ದಿಕ್ಕಾಪಾಲಾಗಿ ಓಡಿದರೂ, ಶೋಭಾ ಅವರನ್ನು ಬೆನ್ನಟ್ಟಿದ ಸಲಗ ತುಳಿದು ಸಾಯಿಸಿತ್ತು.
ಹಾಡಹಗಲೇ ಆನೆಗಳ ದರ್ಶನ: ಅರಣ್ಯ ಇಲಾಖೆ ಪರಿಶೀಲನೆ
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿಯ ಕಾಫಿ ತೋಟದಲ್ಲಿ ಹಾಡಹಗಲೇ ಕಾಡಾನೆಗಳು ಕಾಣಿಸಿಕೊಂಡಿವೆ. ಇದರಿಂದ ಬೆಚ್ಚಿಬಿದ್ದಿರುವ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲು ಸಾಲು ಪ್ರಾಣಹಾನಿಗಳು ಸಂಭವಿಸುತ್ತಿದ್ದರೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಸಿಗದಿರುವುದು ಮಲೆನಾಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

