ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ: 4 ದಿನಗಳಾದರೂ ಸಿಗದ ಶರಣ್ಯ ಸುಳಿವು
x

ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ: 4 ದಿನಗಳಾದರೂ ಸಿಗದ ಶರಣ್ಯ ಸುಳಿವು

ಮೂಲತಃ ಕೇರಳದ ಕೋಯಿಕ್ಕೋಡ್ ನಿವಾಸಿಯಾಗಿರುವ ಶರಣ್ಯ (35) ನಾಪತ್ತೆಯಾದ ದುರ್ದೈವಿ. ಇವರು ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.


Click the Play button to hear this message in audio format

ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು (Trekking) ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ದಟ್ಟ ಕಾನನದ ನಡುವೆ ಯುವತಿಗಾಗಿ ಹಗಲಿರುಳು ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.

ಮೂಲತಃ ಕೇರಳದ ಕೋಯಿಕ್ಕೋಡ್ ನಿವಾಸಿಯಾಗಿರುವ ಶರಣ್ಯ (35) ನಾಪತ್ತೆಯಾದ ದುರ್ದೈವಿ. ಇವರು ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದ ಇವರು, ಅಲ್ಲಿಂದಲೇ ಚಾರಣಕ್ಕೆಂದು ತೆರಳಿದ್ದರು.

ಎಲ್ಲಿಂದ ತೆರಳಿದ್ದಳು?

ಬೆಳಿಗ್ಗೆ 8.30ರ ಸುಮಾರಿಗೆ ಚಾರಣ ಆರಂಭಿಸಲು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ಶರಣ್ಯ ಬಂದಿದ್ದರು. ನಿಯಮಾವಳಿ ಪ್ರಕಾರ ಒಂಟಿಯಾಗಿ ಚಾರಣಕ್ಕೆ ತೆರಳಲು ಅವಕಾಶವಿಲ್ಲದ ಕಾರಣ, ಬಳಿಕ ಬಂದ ಬೇರೊಂದು ಗುಂಪಿನೊಂದಿಗೆ ಅವರನ್ನು ಟ್ರೆಕ್ಕಿಂಗ್‌ಗೆ ಕಳುಹಿಸಿಕೊಡಲಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಅವರು ವಾಪಸ್ ಬರಬೇಕಿತ್ತು. ಆದರೆ, ನಿಗದಿತ ಸಮಯ ಕಳೆದರೂ ಶರಣ್ಯ ವಾಪಸ್​ ಬಂದಿರಲಿಲ್ಲ.

ಕೊನೆಯ ಕರೆ ಮತ್ತು ಹೆಚ್ಚಿದ ಆತಂಕ

ಯುವತಿಯನ್ನು ಕರೆದೊಯ್ಯಲು ಹೋಂಸ್ಟೇ ಮಾಲೀಕರು ಸ್ಕೂಟರ್ ಸಮೇತ ಚೆಕ್‌ಪೋಸ್ಟ್ ಬಳಿ ಬಂದಿದ್ದರು. ಶರಣ್ಯ ಬಾರದಿದ್ದಾಗ ಅವರಿಗೆ ಕರೆ ಮಾಡಿದ್ದಾರೆ. ಮೊದಲು 'ನಾಟ್ ರೀಚೇಬಲ್' ಬಂದಿದ್ದರೂ, ಆ ನಂತರ ಕರೆ ಸ್ವೀಕರಿಸಿದ ಶರಣ್ಯ "ನಾನು ದಾರಿ ತಪ್ಪಿದ್ದೇನೆ" ಎಂದು ಹೇಳಿದ್ದಾರೆ. ಅಷ್ಟರಲ್ಲೇ ಕಾಲ್ ಕಟ್ ಆಗಿದ್ದು, ಆ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸಂಜೆಯೇ ಶೋಧ ನಡೆಸಿದರೂ ಯುವತಿಯ ಸುಳಿವು ಲಭ್ಯವಾಗಿಲ್ಲ.

ಗೊಂದಲವೇನು?

ಶರಣ್ಯ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಮಾಡುತ್ತಿರುವ ಅನುಭವಿ ಚಾರಣಿಗಳು. ತಡಿಯಂಡಮೋಳ್ ಬೆಟ್ಟದ ದಾರಿ ಅತ್ಯಂತ ಸ್ಪಷ್ಟವಾಗಿದ್ದು, ಅನುಭವಿಗಳು ದಾರಿ ತಪ್ಪುವ ಸಾಧ್ಯತೆ ತೀರಾ ವಿರಳ. ಹೀಗಿದ್ದರೂ ಯುವತಿ ದಾರಿ ತಪ್ಪಿದ್ದು ಹೇಗೆ? ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಇದರ ನಡುವೆ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪ್ರಕರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ದೇವರ ಮೊರೆ ಹೋದ ಗ್ರಾಮಸ್ಥರು

ಸದ್ಯ ಪೊಲೀಸ್, ಅರಣ್ಯ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆ (ANF) ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ, ಸ್ಥಳೀಯ ಯುವಕರೊಂದಿಗೆ ಸೇರಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಾರ್ಯಾಚರಣೆಗೆ ಡ್ರೋನ್ ಹಾಗೂ ಶ್ವಾನದಳವನ್ನೂ (Dog Squad) ಬಳಸಿಕೊಳ್ಳಲಾಗಿದೆ. ದಟ್ಟವಾದ ಕಾಡು, ದುರ್ಗಮ ರಸ್ತೆ, ಕಾಡಾನೆಗಳ ಹಾವಳಿ ಹಾಗೂ ಮಳೆಯ ನಡುವೆಯೂ ಸರ್ಚಿಂಗ್ ಆಪರೇಷನ್ ಮುಂದುವರಿದಿದೆ. ಇನ್ನೊಂದೆಡೆ, ಶರಣ್ಯ ಸುರಕ್ಷಿತವಾಗಿ ಮರಳಲಿ ಎಂದು ಬೆಟ್ಟದ ತಪ್ಪಲಿನ ಗ್ರಾಮಸ್ಥರು ಕುಡಿಯ ಜನಾಂಗದ 'ಮಲೆ ತಮ್ಮಚ್ಚ' ದೇವರಿಗೆ ಹರಕೆ ಹೊತ್ತು ಪ್ರಾರ್ಥಿಸಿದ್ದಾರೆ.

Read More
Next Story