Satish Jarkiholi visits,  K.N. Rajannas house, ministers move arouses intense curiosity
x

ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಶಾಸಕ ಕೆ.ಎನ್‌. ರಾಜಣ್ಣ

ಸತೀಶ್ ಜಾರಕಿಹೊಳಿ ಸಂಭಾವಿತ; ಅವರ ಜೊತೆ ನಿಲ್ಲುವೆ ಎಂದ ಕೆ.ಎನ್.ರಾಜಣ್ಣ

ಕೇಂದ್ರ ಸರ್ಕಾರವು ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾವೆಲ್ಲರೂ ಶೂದ್ರರು, ಶೂದ್ರರಿಗೆ ಬುದ್ಧಿ ಕಡಿಮೆ ಎಂದುಕೊಂಡು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆ.ಎನ್‌.ರಾಜಣ್ಣ ಆರೋಪಿಸಿದ್ದಾರೆ.


ಸಚಿವ ಸತೀಶ್ ಜಾರಕಿಹೊಳಿ ಅವರು ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿಯಾಗಿದ್ದು, ಯಾವುದೇ ತಪ್ಪು ಮಾಡುವುದಿಲ್ಲ. ಕಳೆದ ನಾಲ್ಕು ದಶಕಗಳಿಂದ ಅವರನ್ನು ಬಲ್ಲೆ, ಅತ್ಯಂತ ಸಂಭಾವಿತ ವ್ಯಕ್ತಿ ಎಂದು ಶಾಸಕ ಕೆ.ಎನ್. ರಾಜಣ್ಣ ಅವರು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯದ ದಾಳಿಯನ್ನು ಖಂಡಿಸಿದ ಅವರು, ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿ ಎಂದು ದೂರಿದ್ದಾರೆ.

"ಸತೀಶ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ, ಆದರೆ ಅವರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಅವರ ಕುಟುಂಬ ಹಾಗೂ ಅಭಿಮಾನಿಗಳ ಜತೆ ಮಾತನಾಡಿದ್ದು, ನಾನು ಸತೀಶ್ ಜತೆಗೆ ಗಟ್ಟಿಯಾಗಿ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.

"ಇ.ಡಿ ಅಧಿಕಾರಿಗಳು ಸಚಿವರ ಸರ್ಕಾರಿ ಬಂಗಲೆಗೆ ಹೋಗಿ ಕೂರಿಸಿಕೊಂಡು ತನಿಖೆ ಮಾಡುವುದು ಏನಿತ್ತು?, ಅವರದ್ದು ವಾರ್ಷಿಕ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ವ್ಯವಹಾರವಿದೆ. ಅಂತಹವರ ಮನೆಯಲ್ಲಿ 2 ಕೋಟಿ ರೂ. ಸಿಕ್ಕರೆ ಅದೇನು ದೊಡ್ಡದೇ?, ಇದು ಕೇವಲ ಜನಪ್ರಿಯತೆ ಕುಗ್ಗಿಸುವ ಕುತಂತ್ರ" ಎಂದು ಕಿಡಿಕಾರಿದ್ದಾರೆ.

"ಕೇಂದ್ರ ಸರ್ಕಾರವು ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾವೆಲ್ಲರೂ ಶೂದ್ರರು, ಶೂದ್ರರಿಗೆ ಬುದ್ಧಿ ಕಡಿಮೆ ಎಂದುಕೊಂಡು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನೂ ನಾಲ್ಕೈದು ಸಚಿವರ ಮೇಲೆ ರೇಡ್ ಆಗಬಹುದು ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ನೀವು ಅವರನ್ನೇ ಕೇಳಬೇಕು, ಈ ರೀತಿಯ ರೇಡ್ಗಳಲ್ಲಿ ಅವರು ಪರಿಣತರು. ಇದರ ಹಿಂದೆ ಯಾರದ್ದಾದರೂ ಕೈವಾಡವಿರಬಹುದು" ಎಂದು ಹೇಳಿದ್ದಾರೆ.

ಅಪೆಕ್ಸ್ ಬ್ಯಾಂಕ್ ಚುನಾವಣೆ ಬಗ್ಗೆ ಸ್ಪಷ್ಟನೆ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಕುರಿತು ಮಾತನಾಡಿದ ಶಾಸಕ ರಾಜಣ್ಣ, ರಾಜಕೀಯದಲ್ಲಿ ಸ್ಥಿತ್ಯಂತರಗಳು ಯಾವಾಗ ಬೇಕಾದರೂ ಬರಬಹುದು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ನಾನು ಆಕಾಂಕ್ಷಿಯಲ್ಲ. ನನ್ನನ್ನು ಮನವೊಲಿಸಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಅಸತ್ಯ ಕ್ಷಣಿಕ, ಸತ್ಯಕ್ಕೆ ಆಯಸ್ಸು ಜಾಸ್ತಿ, ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ. ಅಧಿಕಾರವೆಂಬುದು ನಮ್ಮಪ್ಪನ ಆಸ್ತಿಯಲ್ಲ, ಬರುತ್ತದೆ ಹೋಗುತ್ತದೆ. ಈಗ ಆಯ್ಕೆಗಿಂತ ಸಮರ್ಥರು ಬಂದಿದ್ದಾರೆ, ಅವರಿಗೆ ಒಳ್ಳೆಯದಾಗಲಿ." ಎಂದು ಹೇಳಿದ್ದಾರೆ.

ಯಾವ ಪಕ್ಷಕ್ಕೂ ಹೋಗಲ್ಲ

ತಮ್ಮ ಬಗ್ಗೆ ಹರಿದಾಡುತ್ತಿರುವ ಪಕ್ಷಾಂತರ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ ಅವರು, "ಕೆ.ಎನ್. ರಾಜಣ್ಣ ಜೆಡಿಎಸ್ ಅಥವಾ ಬಿಜೆಪಿಗೆ ಹೋಗುತ್ತಾರೆ ಎಂಬುದು ಸುಳ್ಳು. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಮುಂದಿನ ಚುನಾವಣೆಗೆ ನಿಲ್ಲುವುದೋ ಅಥವಾ ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ಒಂದು ವೇಳೆ ಸ್ಪರ್ಧಿಸುವುದಾದರೆ ಕಾಂಗ್ರೆಸ್ನಿಂದ ಮಾತ್ರ ಸ್ಪರ್ಧಿಸುವೆ. ಎಲ್ಲ ಜಾತಿಯ ನಾಯಕರಿಗೆ ಗೌರವ ನೀಡುವ ಪಕ್ಷ ಕಾಂಗ್ರೆಸ್" ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಬದುಕಿನಲ್ಲಿ ತಮಗೆ ಯಾವ ಅಧಿಕಾರವೂ ಸುಲಭವಾಗಿ ಸಿಕ್ಕಿಲ್ಲ, ಕಷ್ಟಪಟ್ಟು ಜನರ ವಿಶ್ವಾಸ ಗಳಿಸಿದ್ದೇನೆ ಎಂದು ತಿಳಿಸಿದ್ದಾರೆ.

Read More
Next Story