
ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲೂ ಕೇರಳದ ಯುವತಿ ನಾಪತ್ತೆ:ಬಾಬಾ ಬುಡನ್ಗಿರಿಯಲ್ಲಿ ಕಣ್ಮರೆ
ನಾಪತ್ತೆಯಾದ ಯುವತಿಯನ್ನು ಕೇರಳದ ಪಾಲಕ್ಕಾಡ್ ಮೂಲದ ನಂದನ ಎಂದು ಗುರುತಿಸಲಾಗಿದೆ. ಕುಟುಂಬ ಸೇರಿದಂತೆ 40 ಜನರ ತಂಡದೊಂದಿಗೆ ಅವರು ಈ ಪರ್ವತವೇರಲು ಬಂದಿದ್ದರು.
ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ನಾಪತ್ತೆಯಾಗಿ, ನಾಲ್ಕು ದಿನಗಳ ಬಳಿಕ ಪತ್ತೆಯಾದ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹುದೇ ಪ್ರಕರಣ ವರದಿಯಾಗಿದೆ. ಚಿಕ್ಕಮಗಳೂರಿನ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಗೆ (ಬಾಬಾ ಬುಡನ್ಗಿರಿ) ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಯುವತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಯುವತಿಯನ್ನು ಕೇರಳದ ಪಾಲಕ್ಕಾಡ್ ಮೂಲದ ನಂದನ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಕುಟುಂಬದವರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ
ಕೇರಳದಿಂದ ಆಗಮಿಸಿದ್ದ 40 ಜನರ ಪ್ರವಾಸಿಗರ ತಂಡದಲ್ಲಿ ನಂದನ ಕೂಡ ಇದ್ದರು. ಈ ತಂಡವು ಚಂದ್ರದ್ರೋಣ ಪರ್ವತ ಶ್ರೇಣಿಗೆ ಚಾರಣಕ್ಕೆ ತೆರಳಿತ್ತು. ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಾ ಸಾಗುತ್ತಿದ್ದಾಗ, ನಂದನ ತಮ್ಮ ಕುಟುಂಬ ಸದಸ್ಯರು ಹಾಗೂ ಪ್ರವಾಸಿಗರ ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದಾರೆ.
ತಂಡದ ಇತರೆ ಸದಸ್ಯರು ಪರ್ವತದ ಮೇಲ್ಭಾಗ ತಲುಪಿದ ಬಳಿಕ ನಂದನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಗೆ ಅಡ್ಡಿಯಾದ ಹವಾಮಾನ
ಯುವತಿ ನಾಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ, ಪೊಲೀಸರು ಹಾಗೂ ಸ್ಥಳೀಯರನ್ನೊಳಗೊಂಡ ತಂಡವು ದಟ್ಟ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದೆ. ಆದರೆ, ಚಂದ್ರದ್ರೋಣ ಪರ್ವತ ಪ್ರದೇಶವು ದಟ್ಟ ಕಾಡಿನಿಂದ ಕೂಡಿದ್ದು, ಕತ್ತಲು ಹಾಗೂ ಮಂಜು ಮುಸುಕಿದ ವಾತಾವರಣವು ಶೋಧ ಕಾರ್ಯಕ್ಕೆ ಭಾರೀ ಅಡ್ಡಿಯುಂಟುಮಾಡುತ್ತಿದೆ. ಇಲ್ಲಿ ಒಮ್ಮೆ ದಾರಿ ತಪ್ಪಿದರೆ ಅಪಾಯದ ಸಾಧ್ಯತೆಗಳು ಹೆಚ್ಚಿರುವುದರಿಂದ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಶರಣ್ಯ ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದರು. ಇದೀಗ ನಂದನ ಕೂಡ ಶೀಘ್ರವೇ ಸುರಕ್ಷಿತವಾಗಿ ಪತ್ತೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

