
33 ಇಲಾಖೆಗಳಲ್ಲಿ 5,431 FDA, SDA ಹುದ್ದೆಗಳ ಭರ್ತಿಗೆ KEA ಅಧಿಸೂಚನೆ ಪ್ರಕಟ
ಉಳಿಕೆ ಮೂಲ ವೃಂದದಲ್ಲಿ ಎಫ್‌ಡಿಎ 2,163 ಹುದ್ದೆಗಳು, ಎಸ್‌ಡಿಎ 2,070 ಹುದ್ದೆಗಳು ಸೇರಿ 4,233 ಆಗಿವೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಎಫ್‌ಡಿಎ 563 ಹುದ್ದೆಗಳು, ಎಫ್‌ಡಿಎ 635 ಹುದ್ದೆಗಳು ಸೇರಿ 1,198 ಆಗಿವೆ.
ಸರ್ಕಾರಿ ಉದ್ಯೋಗದ ಕನಸು ಹೊತ್ತು ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿರುವ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರದ ಒಟ್ಟು 33 ವಿವಿಧ ಆಡಳಿತ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 5,431 ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ವಿವಿಧ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನತೆಯಲ್ಲಿ ಹೊಸ ಭರವಸೆ ಹಾಗೂ ಉತ್ಸಾಹವನ್ನು ಮೂಡಿಸಿದೆ.
ಕೆಇಎ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಒಟ್ಟು 5,431 ಹುದ್ದೆಗಳನ್ನು ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದ ಎಂದು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಉಳಿಕೆ ಮೂಲ ವೃಂದದಲ್ಲಿ ಪ್ರಥಮ ದರ್ಜೆ ಸಹಾಯಕರು 2,163 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 2,070 ಹುದ್ದೆಗಳು. ಒಟ್ಟು ಹುದ್ದೆಗಳು 4,233 ಆಗಿವೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಪ್ರಥಮ ದರ್ಜೆ ಸಹಾಯಕರು 563 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 635 ಹುದ್ದೆಗಳು ಸೇರಿ ಒಟ್ಟು ಹುದ್ದೆಗಳು 1,198 ಆಗಿವೆ. ಈ ಎರಡೂ ವೃಂದಗಳು ಸೇರಿ ಒಟ್ಟಾರೆಯಾಗಿ 2,726 ಎಫ್‌ಡಿಎ ಹಾಗೂ 2,705 ಎಸ್‌ಡಿಎ ಹುದ್ದೆಗಳು ಭರ್ತಿಯಾಗಲಿವೆ.
ಶೈಕ್ಷಣಿಕ ವಿದ್ಯಾರ್ಹತೆ
ಹುದ್ದೆಗಳ ಸ್ವರೂಪಕ್ಕೆ ತಕ್ಕಂತೆ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಪ್ರಥಮ ದರ್ಜೆ ಸಹಾಯಕ ಹುದ್ದೆ ಭಾರತದಲ್ಲಿ ಕಾನೂನುಬದ್ಧವಾಗಿ ಸ್ಥಾಪಿತವಾದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪದವಿಪೂರ್ವ ಶಿಕ್ಷಣ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರದ ಮೀಸಲಾತಿ ನಿಯಮಾವಳಿಗಳ ಅನ್ವಯ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ:
ಸಾಮಾನ್ಯ ವರ್ಗ : ಗರಿಷ್ಠ 35 ವರ್ಷ
ಪ್ರವರ್ಗ 2A, 2B, 3A, 3Bಗೆ ಗರಿಷ್ಠ 38 ವರ್ಷ (3 ವರ್ಷ ಸಡಿಲಿಕೆ) ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಗರಿಷ್ಠ 40 ವರ್ಷ (5 ವರ್ಷ ಸಡಿಲಿಕೆ) ಇದ್ದು, ಮಾಜಿ ಸೈನಿಕರು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಈ ನೇಮಕಾತಿಗೆ ಯಾವುದೇ ಸಂದರ್ಶನ ಇರುವುದಿಲ್ಲ. ಕೆಇಎ ನಡೆಸುವ ರಾಜ್ಯಮಟ್ಟದ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್ ಆಧಾರದ ಮೇಲೆ, ರೋಸ್ಟರ್ ನಿಯಮಾವಳಿಗಳನ್ನು ಪಾಲಿಸಿ ಅಭ್ಯರ್ಥಿಗಳನ್ನು ನೇರ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿದ್ದು, ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರಲಿದೆ. ಸಾಮಾನ್ಯ ಜ್ಞಾನ, ಸಂವಿಧಾನ, ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಹಾಗೂ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳು ಇರಲಿವೆ.
ಪ್ರಮುಖ ದಿನಾಂಕಗಳು
ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ ಆಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 25 ಆಗಿದೆ. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ನವೆಂಬರ್ 26 ಆಗಿದೆ. ಜನವರಿ 8, 9, 10, 16 ಮತ್ತು 17ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ದಿನಾಂಕಗಳಾಗಿವೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ಯಾವುದೇ ಆಫ್‌ಲೈನ್ ಅರ್ಜಿಗಳಿಗೆ ಅವಕಾಶವಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವಾದ cetonline.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
