
ಕೆಪಿಎಸ್ಸಿ, ಕೆಇಎ ಪರೀಕ್ಷೆಗಳಿಗೆ ಹೈಟೆಕ್ ಸರ್ಪಗಾವಲು – ಸಚಿವ ಪ್ರಿಯಾಂಕ್ ಖರ್ಗೆ
ಪರೀಕ್ಷೆಗೆ ಸಂಬಂಧಿಸಿದ ಅತಿಸೂಕ್ಷ್ಮ, ಗೌಪ್ಯ ದಾಖಲೆಗಳು ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಸಿಬ್ಬಂದಿಗೆ ವರ್ಗಾವಣೆಯಾಗುವ ಸಂದರ್ಭದಲ್ಲೇ ಸೋರಿಕೆ ಅಥವಾ ಅಕ್ರಮ ನಡೆಯುವ ಸಾಧ್ಯತೆ ಹೆಚ್ಚಿರುತ್ತವೆ.
ರಾಜ್ಯದಲ್ಲಿ ಸಾರ್ವಜನಿಕ ಮತ್ತು ನೇಮಕಾತಿ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪಿಡುಗುಗಳನ್ನು ಬುಡಸಮೇತ ಕಿತ್ತೊಗೆಯಲು ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಲು ಪರೀಕ್ಷಾ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ತಂತ್ರಜ್ಞಾನ ಆಧಾರಿತ ಸುರಕ್ಷತಾ ಚೌಕಟ್ಟು ಅಳವಡಿಸಿಕೊಳ್ಳಲು ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಮಹತ್ವಾಕಾಂಕ್ಷಿ ಯೋಜನೆಯ ಅಂಗವಾಗಿ, ಜಾಗತಿಕ ಮಟ್ಟದ ಪ್ರಮುಖ ಐಟಿ ಮೂಲಸೌಕರ್ಯ ಸೇವಾ ಸಂಸ್ಥೆಯಾದ 'ಕೈಂಡ್ರಿಲ್' ಪ್ರತಿನಿಧಿಗಳು, ರಾಜ್ಯ ಇ-ಆಡಳಿತ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉನ್ನತ ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನಲ್ಲಿ ಸುದೀರ್ಘ ಹಾಗೂ ಮಹತ್ವದ ಸಮಾಲೋಚನಾ ಸಭೆ ನಡೆಸಿದರು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇವಲ ಪೊಲೀಸ್ ಕಣ್ಗಾವಲು ಸಾಕಾಗುವುದಿಲ್ಲ, ಬದಲಿಗೆ ತಂತ್ರಜ್ಞಾನವೇ ಮೊದಲ ರಕ್ಷಣಾ ಕವಚವಾಗಬೇಕು ಎಂಬ ದೂರದೃಷ್ಟಿಯೊಂದಿಗೆ ಈ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಪರೀಕ್ಷೆಯ ಆರಂಭಿಕ ಹಂತದಿಂದ ಹಿಡಿದು ಅಂತಿಮವಾಗಿ ಅಭ್ಯರ್ಥಿಯ ಆಯ್ಕೆ ಪಟ್ಟಿ ಪ್ರಕಟವಾಗುವವರೆಗಿನ ಎಂಡ್-ಟು-ಎಂಡ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಚರ್ಚಿಸಲಾಯಿತು. ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಲ್ಲಿ ಯಾವ್ಯಾವ ಹಂತಗಳಲ್ಲಿ ಲೋಪದೋಷಗಳು ಸಂಭವಿಸಬಹುದು ಮತ್ತು ಭ್ರಷ್ಟರು ಆ ವ್ಯವಸ್ಥೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದರ ಕುರಿತು ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಯಿತು.
ಸುರಕ್ಷತೆಯ ಬಗ್ಗೆ ತಜ್ಞರ ನೀಲನಕ್ಷೆ
ಪ್ರಶ್ನೆಗಳನ್ನು ಆಯ್ಕೆ ಮಾಡುವಾಗ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಯಾದೃಚ್ಛಿಕ ಸಾಫ್ಟ್‌ವೇರ್ ಬಳಕೆ. ಪ್ರಶ್ನೆಪತ್ರಿಕೆಗಳ ಮುದ್ರಣಾಲಯಗಳ ಆಯ್ಕೆ, ಮುದ್ರಣದ ವೇಳೆ ಕಟ್ಟುನಿಟ್ಟಾದ ಡಿಜಿಟಲ್ ಕಣ್ಗಾವಲು ಮತ್ತು ಅನಧಿಕೃತ ಪ್ರವೇಶ ತಡೆ. ಮುದ್ರಣಾಲಯದಿಂದ ಪರೀಕ್ಷಾ ಕೇಂದ್ರದ ಬಾಗಿಲಿಗೆ ತಲುಪುವವರೆಗಿನ ಭೌತಿಕ ಪೆಟ್ಟಿಗೆಗಳಿಗೆ ಜಿಪಿಎಸ್ ಟ್ರ್ಯಾಕಿಂಗ್, ಬಯೋಮೆಟ್ರಿಕ್/ಸ್ಮಾರ್ಟ್ ಲಾಕಿಂಗ್ ವ್ಯವಸ್ಥೆ. ನಕಲಿ ಅಭ್ಯರ್ಥಿಗಳ ತಡೆಗೆ ತಂತ್ರಜ್ಞಾನ ಬಳಕೆ. ಒಎಂಆರ್ ಶೀಟ್‌ಗಳ ತ್ವರಿತ ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಯಾವುದೇ ಮಾನವ ಹಸ್ತಕ್ಷೇಪವಿಲ್ಲದ ತ್ವರಿತ ಕಂಪ್ಯೂಟರೀಕೃತ ಮೌಲ್ಯಮಾಪನ. ದುರುಪಯೋಗ ತಡೆಗೆ ‘ಜೀರೋ ಟ್ರಸ್ಟ್’ ಮಾದರಿ.
ಸಭೆಯ ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪರೀಕ್ಷಾ ಅಕ್ರಮಗಳಿಗೆ ಪ್ರಮುಖ ಕಾರಣವಾಗುತ್ತಿರುವುದು 'ಮಾನವ ಹಸ್ತಕ್ಷೇಪ' ಎಂದು ಸ್ಪಷ್ಟವಾಗಿ ಗುರುತಿಸಿದರು. "ಪರೀಕ್ಷೆಗೆ ಸಂಬಂಧಿಸಿದ ಅತಿಸೂಕ್ಷ್ಮ ಮತ್ತು ಗೌಪ್ಯ ದಾಖಲೆಗಳು ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಸಿಬ್ಬಂದಿಗೆ ವರ್ಗಾವಣೆಯಾಗುವ ಸಂದರ್ಭದಲ್ಲೇ ಸೋರಿಕೆ ಅಥವಾ ಅಕ್ರಮ ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಹಂತದಲ್ಲಿ ನಂಬಿಕಸ್ಥರೇ ದ್ರೋಹ ಬಗೆಯುವ ನಿದರ್ಶನಗಳನ್ನು ನಾವು ಕಂಡಿದ್ದೇವೆ. ಹೀಗಾಗಿ, ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮಾನವ ಸಂಪರ್ಕವನ್ನು ಕನಿಷ್ಠಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಯಾರೊಬ್ಬರೂ ಏಕವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅಥವಾ ಗೌಪ್ಯ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಾಗದಂತಹ 'ಜೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ' ಮಾದರಿಯನ್ನು ರೂಪಿಸಲು ತಜ್ಞರೊಂದಿಗೆ ಚರ್ಚಿಸಿದ್ದೇವೆ" ಎಂದು ವಿವರಿಸಿದರು.
ಜಾಗತಿಕ ಐಟಿ ದಿಗ್ಗಜ 'ಕೈಂಡ್ರಿಲ್' ಜತೆಗಿನ ಸಮಾಲೋಚನೆಯ ಮಹತ್ವ
ಐಬಿಎಂನಿಂದ ಬೇರ್ಪಟ್ಟು ವಿಶ್ವದ ಅತಿದೊಡ್ಡ ಐಟಿ ಮೂಲಸೌಕರ್ಯ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿರುವ 'ಕೈಂಡ್ರಿಲ್', ಜಾಗತಿಕ ಮಟ್ಟದಲ್ಲಿ ಬ್ಯಾಂಕಿಂಗ್, ರಕ್ಷಣೆ ಮತ್ತು ಆಡಳಿತಾತ್ಮಕ ವಲಯಗಳಲ್ಲಿ ಅತಿ ಕ್ಲಿಷ್ಟಕರವಾದ ಸೈಬರ್ ಭದ್ರತೆ ಮತ್ತು ದತ್ತಾಂಶ ನಿರ್ವಹಣೆಯನ್ನು ನಿಭಾಯಿಸಿದ ಅನುಭವ ಹೊಂದಿದೆ.
ರಾಜ್ಯ ಸರ್ಕಾರದ ಈ ಸಭೆಯಲ್ಲಿ ಕೈಂಡ್ರಿಲ್ ತಜ್ಞರು, ಕ್ಲೌಡ್ ಸೆಕ್ಯುರಿಟಿ, ಎಐ ಆಧಾರಿತ ಮುನ್ಸೂಚನಾ ವಿಶ್ಲೇಷಣೆ ಹಾಗೂ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪರೀಕ್ಷಾ ಪ್ರಕ್ರಿಯೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಪ್ರಾತ್ಯಕ್ಷಿಕೆಯನ್ನು ಹಂಚಿಕೊಂಡರು. ಪ್ರಶ್ನೆಪತ್ರಿಕೆಗಳ ಪ್ಯಾಕಿಂಗ್ ಬಾಕ್ಸ್‌ಗಳು ನಿಗದಿತ ಸಮಯಕ್ಕಿಂತ ಒಂದು ಸೆಕೆಂಡ್ ಮುಂಚಿತವಾಗಿ ತೆರೆದರೂ ನೇರವಾಗಿ ಮುಖ್ಯ ಸರ್ವರ್‌ಗೆ ಅಲಾರಾಂ ರವಾನೆಯಾಗುವಂತಹ 'ಸ್ಮಾರ್ಟ್ ಐಓಟಿ ಲಾಕ್' ತಂತ್ರಜ್ಞಾನದ ಬಗ್ಗೆಯೂ ಗಂಭೀರ ಚರ್ಚೆಗಳು ನಡೆದವು.
ಪರೀಕ್ಷಾ ಕೇಂದ್ರಗಳಲ್ಲಿ ಆಧುನಿಕ ಸುರಕ್ಷತಾ ವ್ಯವಸ್ಥೆ
ಕೇವಲ ಪ್ರಶ್ನೆಪತ್ರಿಕೆ ರಕ್ಷಣೆ ಮಾತ್ರವಲ್ಲದೆ, ಪರೀಕ್ಷಾ ದಿನದಂದು ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳನ್ನು ಮಟ್ಟಹಾಕಲು ತಂತ್ರಜ್ಞಾನದ ನೆರವು ಪಡೆಯಲು ನಿರ್ಧರಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲೇ ಅಭ್ಯರ್ಥಿಗಳ ಮುಖಚಹರೆ ಚಹರೆ ಗುರುತಿಸುವಿಕೆ ಮತ್ತು ಆಧಾರ್ ಬೆರಳಚ್ಚು ಪರಿಶೀಲನೆ ಕಡ್ಡಾಯಗೊಳಿಸಿ, ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಶೇ. 100 ರಷ್ಟು ತಡೆಯುವುದು. ಪರೀಕ್ಷಾ ಕೊಠಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಎಐ ತಂತ್ರಜ್ಞಾನ ಜೋಡಿಸಿ, ಅಭ್ಯರ್ಥಿಗಳು ಪರಸ್ಪರ ಮಾತನಾಡುವುದು ಅಥವಾ ಅನುಮಾನಾಸ್ಪದ ಚಲನವಲನ ತೋರಿದರೆ ಕಂಟ್ರೋಲ್ ರೂಂಗೆ ಸ್ವಯಂಚಾಲಿತವಾಗಿ ಎಚ್ಚರಿಕೆ ರವಾನೆಯಾಗುವ ವ್ಯವಸ್ಥೆ. ಹೈಟೆಕ್ ಮೈಕ್ರೋ ಬ್ಲೂಟೂತ್ ಸಾಧನಗಳನ್ನು ಬಳಸುವ ಕಿಡಿಗೇಡಿಗಳನ್ನು ಮಟ್ಟಹಾಕಲು ಅತ್ಯಾಧುನಿಕ ಸಿಗ್ನಲ್ ಜಾಮರ್‌ಗಳ ಅಳವಡಿಕೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ
"ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಸರ್ಕಾರಿ ನೌಕರಿ ಪಡೆಯುವ ಪ್ರಕ್ರಿಯೆಯಲ್ಲ; ಅವು ಲಕ್ಷಾಂತರ ಬಡ, ಪ್ರತಿಭಾವಂತ ಯುವಕ-ಯುವತಿಯರ ಜೀವನದ ಕನಸು. ಹಳ್ಳಿಗಳಲ್ಲಿ ರಾತ್ರಿ-ಹಗಲು ಎನ್ನದೆ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯ ಮೇಲೆ ವಿಶ್ವಾಸವಿರಬೇಕು. ಯಾರೋ ಕೆಲ ಭ್ರಷ್ಟರು ಹಣದ ಬಲದಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅರ್ಹರ ಬದುಕನ್ನು ಹಾಳುಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ" ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು. "ವಿದ್ಯಾರ್ಥಿಗಳ ಕಣ್ಣೀರಿಗೆ ಕೊನೆ ಹಾಡಲು ಮತ್ತು ಪರೀಕ್ಷಾ ವ್ಯವಸ್ಥೆಯ ಕಳೆದುಹೋದ ಘನತೆಯನ್ನು ಮರಳಿ ತರಲು ತಂತ್ರಜ್ಞಾನವೇ ರಾಮಬಾಣ. ಇದರಲ್ಲಿ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ರಾಜಿ ಮಾಡಿಕೊಳ್ಳುವುದಿಲ್ಲ. ಅತ್ಯಂತ ಪಾರದರ್ಶಕ, ನಿಖರ ಹಾಗೂ ಯಾರೂ ಭೇದಿಸಲಾಗದ ಪರೀಕ್ಷಾ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸುವುದೇ ನಮ್ಮ ಸರ್ಕಾರದ ಅಂತಿಮ ಗುರಿ" ಎಂದು ತಿಳಿಸಿದರು.
