ಉತ್ತಮ ಕೆಲಸಗಳಿಗೆ ಅನಗತ್ಯವಾಗಿ ಮಸಿ ಬಳಿಯುವುದು ಸರಿಯಲ್ಲ : ಕೃಷ್ಣ ಬೈರೇಗೌಡ ಕಿಡಿ
x

ಉತ್ತಮ ಕೆಲಸಗಳಿಗೆ ಅನಗತ್ಯವಾಗಿ ಮಸಿ ಬಳಿಯುವುದು ಸರಿಯಲ್ಲ : ಕೃಷ್ಣ ಬೈರೇಗೌಡ ಕಿಡಿ

ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸುತ್ತಿಲ್ಲ. ಬದಲಿಗೆ, ಅತ್ಯಾಧುನಿಕ ವೈಜ್ಞಾನಿಕ ಕ್ರಮಗಳ ಅನುಸಾರ ನೀರನ್ನು ದ್ವಿತೀಯ ಮತ್ತು ತೃತೀಯ ಹಂತಗಳಲ್ಲಿ ಶುದ್ಧೀಕರಿಸಲಾಗುತ್ತಿದೆ.


Click the Play button to hear this message in audio format

ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಪಾಲಿಗೆ ಸಂಜೀವಿನಿಯಾಗಿರುವ 'ಕೆ.ಸಿ. ವ್ಯಾಲಿ' (ಕೋರಮಂಗಲ-ಚಲ್ಲಘಟ್ಟ) ಮತ್ತು 'ಎಚ್.ಎನ್. ವ್ಯಾಲಿ' (ಹೆಬ್ಬಾಳ-ನಾಗವಾರ) ಯೋಜನೆಗಳ ಬಗ್ಗೆ ರಾಜಕೀಯ ಕಾರಣಗಳಿಗಾಗಿ ಅಪಪ್ರಚಾರ ಮಾಡುವುದು ಸರಿಯಲ್ಲ. ಈ ಯೋಜನೆಯು ಸಂಪೂರ್ಣ ವೈಜ್ಞಾನಿಕವಾಗಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಸಮೃದ್ಧಿ ವಿ. ಮಂಜುನಾಥ್ ಅವರು ಕೇಳಿದ ಪ್ರಶ್ನೆಗೆ ಸುದೀರ್ಘ ಉತ್ತರ ನೀಡಿದ ಸಚಿವರು, ಈ ಮಹತ್ವಾಕಾಂಕ್ಷಿ ಯೋಜನೆಯ ವಿಶ್ವಾಸಾರ್ಹತೆ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು.

ಪಾತಾಳದಿಂದ ಮೇಲಕ್ಕೆದ್ದ ಅಂತರ್ಜಲ

"ದಶಕಗಳಿಂದ ಮಳೆಯಿಲ್ಲದೆ, ನದಿ ಮೂಲಗಳಿಲ್ಲದೆ ಕಂಗಾಲಾಗಿದ್ದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿತ್ತು. ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ಹನಿ ನೀರು ಸಿಗುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ, ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಜಾರಿಗೆ ತರಲಾಯಿತು. ಇದರ ಪರಿಣಾಮವಾಗಿ ಇಂದು ನೂರಾರು ಕೆರೆಗಳು ತುಂಬಿದ್ದು, ಅಂತರ್ಜಲ ಮಟ್ಟ ವೃದ್ಧಿಸಿದೆ. ಸಾವಿರಾರು ರೈತರ ಬದುಕು ಹಸನಾಗಿದೆ," ಎಂದು ಸಚಿವರು ವಿವರಿಸಿದರು.

ಐಐಎಸ್‌ಸಿ ವಿಜ್ಞಾನಿಗಳಿಂದ ನಿರಂತರ ಅಧ್ಯಯನ

ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವರು, "ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದ್ವಿತೀಯ ಮತ್ತು ತೃತೀಯ ಹಂತಗಳಲ್ಲಿ (Secondary and Tertiary) ನೀರನ್ನು ಶುದ್ಧೀಕರಿಸಲಾಗುತ್ತಿದೆ. ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ 'ಐಐಎಸ್‌ಸಿ' (IISc) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2017-18ರಿಂದಲೂ ವಿಜ್ಞಾನಿಗಳು ನೀರು, ಮಣ್ಣು ಮತ್ತು ಬೆಳೆಗಳ ಮೇಲಾಗುವ ಪರಿಣಾಮಗಳ ಬಗ್ಗೆ ನಿರಂತರ ಅಧ್ಯಯನ ನಡೆಸಿ, ಪ್ರತಿ 3 ತಿಂಗಳಿಗೊಮ್ಮೆ ವರದಿ ನೀಡುತ್ತಿದ್ದಾರೆ. ಈ ಯಶಸ್ವಿ ಅಧ್ಯಯನದ ಒಪ್ಪಂದವನ್ನು ಸರ್ಕಾರ ಈಗ ಮತ್ತೊಂದು 5 ವರ್ಷಗಳಿಗೆ ವಿಸ್ತರಿಸಿದ್ದು, ಇದು ನಮ್ಮ ಬದ್ಧತೆಗೆ ಸಾಕ್ಷಿ," ಎಂದರು.

ವಿಶ್ವಬ್ಯಾಂಕ್, ವಿಶ್ವಸಂಸ್ಥೆಯಿಂದಲೂ ಭಾರಿ ಮೆಚ್ಚುಗೆ

ತ್ಯಾಜ್ಯನೀರನ್ನು ಮರುಬಳಕೆ ಮಾಡಿ ಅಂತರ್ಜಲ ಹೆಚ್ಚಿಸುತ್ತಿರುವ ಈ ವಿಶಿಷ್ಟ ಮಾದರಿಯನ್ನು ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್ ಪ್ರತಿನಿಧಿಗಳು ಖುದ್ದಾಗಿ ಭೇಟಿ ನೀಡಿ ಪ್ರಶಂಸಿಸಿದ್ದಾರೆ. ಯೋಜನೆಯ ಯಶಸ್ಸು ಕಂಡು ವಿಶ್ವಬ್ಯಾಂಕ್ ಇದರ ವಿಸ್ತರಣೆಗೆ ಸಾಲದ ನೆರವನ್ನೂ ಒದಗಿಸಿದೆ. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರದ ಸಂಸದೀಯ ಸಮಿತಿ ಹಾಗೂ ಕೇಂದ್ರದ ಪರಿಸರ, ಜಲ ಸಂಪನ್ಮೂಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೂಡ ಈ ಯೋಜನೆಯ ಕಟ್ಟುನಿಟ್ಟಾದ ನಿಯಮಪಾಲನೆಯನ್ನು ಶ್ಲಾಘಿಸಿ, ದೇಶಾದ್ಯಂತ ಅಳವಡಿಸಿಕೊಳ್ಳಲು ಶಿಫಾರಸು ಮಾಡಿವೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಒಳ್ಳೆಯ ಕೆಲಸಕ್ಕೆ ಮಸಿ ಬಳಿಯುವುದು ಸರಿಯಲ್ಲ

ಯೋಜನೆಯ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, "2006ರಲ್ಲಿ ಅಂದಿನ ಸರ್ಕಾರ ಕೋಲಾರಕ್ಕೆ ಭದ್ರಾ ನದಿಯಿಂದ ನೀರು ತರುತ್ತೇವೆ ಎಂದು ಕೇವಲ ಗುದ್ದಲಿ ಪೂಜೆ ಮಾಡಿ ಕೈತೊಳೆದುಕೊಂಡಿತ್ತು. ಆ ಯೋಜನೆ ಕಾರ್ಯಗತವಾಗಲೇ ಇಲ್ಲ. ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದವರು, ಇಂದು ಯಶಸ್ವಿಯಾಗಿ ನಡೆಯುತ್ತಿರುವ ಯೋಜನೆಯ ಬಗ್ಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ

"ಬೆಳೆಗಳಿಗೆ ಬರುವ ಕೀಟಬಾಧೆ ಅಥವಾ ರೋಗಗಳಿಗೆ ನೀರಿನ ಗುಣಮಟ್ಟವೇ ಕಾರಣ ಎಂದು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ದೂಷಿಸುವುದು ಸರಿಯಲ್ಲ. ಯಾವುದೇ ಗೊಂದಲಗಳಿದ್ದರೂ ತಜ್ಞರ ವರದಿಯ ಆಧಾರದಲ್ಲಿ ಚರ್ಚಿಸೋಣ. ಇಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಕಟ್ಟುನಿಟ್ಟಿನ ಮಾನದಂಡಗಳನ್ನೇ ಪಾಲಿಸಲಾಗುತ್ತಿದೆ. ನೀರಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ವೈಜ್ಞಾನಿಕ ಸಮಿತಿಗಳು ನೀಡುವ ಯಾವುದೇ ಸಲಹೆಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಸದಾ ಸಿದ್ಧವಿದೆ," ಎಂದು ಸಚಿವರು ಭರವಸೆ ನೀಡಿದರು.

Read More
Next Story