ಬೆಂಗಳೂರಿನಲ್ಲಿ ಜೋರು ಮಳೆ, ಮತ್ತೆ ನಾಲ್ಕು ದಿನ ವರುಣನ ಆಗಮನ ಸಾಧ್ಯತೆ
x

ಬೆಂಗಳೂರಿನಲ್ಲಿ ಜೋರು ಮಳೆ, ಮತ್ತೆ ನಾಲ್ಕು ದಿನ ವರುಣನ ಆಗಮನ ಸಾಧ್ಯತೆ

ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ


Click the Play button to hear this message in audio format

ಬಿಸಿಲಿನ ತಾಪದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ. ಗುರುವಾರದಿಂದ ಆರಂಭವಾಗಿ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಗುಡುಗು ಹಾಗೂ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಂತೆಯೇ ಬುಧವಾರ ಸಂಜೆ ವೇಳೆ ಬೆಂಗಳೂರಿನಲ್ಲಿ ಜೋರು ಮಳೆಯಾಗಿದೆ.

ಮಳೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು 'ಯೆಲ್ಲೊ ಅಲರ್ಟ್' ಘೋಷಣೆ ಮಾಡಿದ್ದು, ಸಾರ್ವಜನಿಕರು ಹಾಗೂ ರೈತರು ಅಗತ್ಯ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಬುಧವಾರ ಸಂಜೆ ರಾಜಧಾನಿ ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆಯಾಗುತ್ತಿದ್ದಂತೆ ದಿಢೀರ್ ಎಂದು ಕವಿದ ಕಾರ್ಮೋಡಗಳಿಂದ ಶುರುವಾದ ಮಳೆಯು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ವಾಹನ ಸವಾರರು ಹಾಗೂ ಸಾರ್ವಜನಿಕರನ್ನು ಪರದಾಡುವಂತೆ ಮಾಡಿತು. ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆಗೆ ತಂಪೆರೆದ ವರುಣ, ಮತ್ತೊಂದೆಡೆ ಹಲವೆಡೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ.

ಈ ಅನಿರೀಕ್ಷಿತ ಮಳೆಯಿಂದಾಗಿ ರಾಜ್ಯದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಶಿವಮೊಗ್ಗ ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಭಾರೀ ಗಾಳಿ-ಮಳೆಗೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಸ್ತೆ ಸಂಚಾರ ಹಾಗೂ ವಿದ್ಯುತ್ ಪೂರೈಕೆಗೆ ಅಡಚಣೆಯುಂಟಾಗಿದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮಾವು ಸೇರಿದಂತೆ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿ ರೈತರು ಆತಂಕಕ್ಕೊಳಗಾಗಿದ್ದಾರೆ. ಬೆಂಗಳೂರಿನ ಹಲವು ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಮುನ್ಸೂಚನೆ

ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದೇ ವೇಳೆ ದಕ್ಷಿಣ ಒಳನಾಡಿನ ಮಲೆನಾಡು ಹಾಗೂ ಬಯಲುಸೀಮೆ ಭಾಗಗಳಾದ ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧೆಡೆ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಲಿದೆ. ಈ ಭಾಗಗಳಲ್ಲಿ ಗಂಟೆಗೆ ಸುಮಾರು 30ರಿಂದ 40 ಕಿಲೋಮೀಟರ್ ವೇಗದಲ್ಲಿ ರಭಸದ ಗಾಳಿ ಬೀಸುವ ಜೊತೆಗೆ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ವರದಿ ಎಚ್ಚರಿಸಿದೆ.

ಕರಾವಳಿ ಭಾಗದಲ್ಲಿಯೂ ಮಳೆಯ ಸಿಂಚನ

ಒಳನಾಡಿನ ಜೊತೆಗೆ ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಪ್ರದೇಶಗಳಲ್ಲಿಯೂ ಹವಾಮಾನದಲ್ಲಿ ಬದಲಾವಣೆಯಾಗಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಮಾರ್ಚ್ 21 ಹಾಗೂ 22ರ ಅವಧಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯ ಸಿಂಚನವಾಗಲಿದ್ದು, ಬೇಸಿಗೆಯ ಬಿಸಿಲಿನಿಂದ ಏರಿಕೆಯಾಗಿದ್ದ ತಾಪಮಾನದಲ್ಲಿ ಕೊಂಚ ಇಳಿಕೆಯಾಗುವ ನಿರೀಕ್ಷೆಯಿದೆ. ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿರುವ ರೈತರಿಗೆ ಈ ಬೇಸಿಗೆ ಮಳೆ ಸ್ವಲ್ಪ ಮಟ್ಟಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಗಳಿವೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನ ಹವಾಮಾನದಲ್ಲಿಯೂ ಗಣನೀಯ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ಇಲಾಖೆ ವರದಿ ನೀಡಿದೆ. ಗುರುವಾರ ಮತ್ತು ಶುಕ್ರವಾರದಂದು ನಗರದಾದ್ಯಂತ ಸಂಪೂರ್ಣವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಇದರ ಬೆನ್ನಲ್ಲೇ ಭಾರಿ ಬಿರುಗಾಳಿಯೊಂದಿಗೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಿಲಿಕಾನ್ ಸಿಟಿಯ ನಿವಾಸಿಗಳು ಸಂಜೆಯ ವೇಳೆಗೆ ಮಳೆಯ ಅಬ್ಬರವನ್ನು ಎದುರಿಸುವ ಸಾಧ್ಯತೆಗಳಿದ್ದು, ವಾಹನ ಸವಾರರು ಹಾಗೂ ದೈನಂದಿನ ಕೆಲಸಗಳಿಗೆ ತೆರಳುವವರು ಮುಂಜಾಗ್ರತೆ ವಹಿಸುವುದು ಸೂಕ್ತವಾಗಿದೆ.

Read More
Next Story