ಕರ್ನಾಟಕದಲ್ಲಿ ಎಸ್‌ಐಆರ್ : ಜೂ.30ರಿಂದ  ಬಿಎಲ್‌ಒಗಳು ಮನೆ ಮನೆಗೆ ಭೇಟಿ
x

ಕರ್ನಾಟಕದಲ್ಲಿ ಎಸ್‌ಐಆರ್ : ಜೂ.30ರಿಂದ ಬಿಎಲ್‌ಒಗಳು ಮನೆ ಮನೆಗೆ ಭೇಟಿ

ಅ.1ರಂದು 18 ವರ್ಷ ತುಂಬುವ ಪ್ರತಿಯೊಬ್ಬ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವು ಜೂ.20ರಿಂದ ಆರಂಭವಾಗಲಿದೆ.


Click the Play button to hear this message in audio format

ಮುಂಬರುವ ಚುನಾವಣೆಗಳು ನಡೆಯುವ ರಾಜ್ಯಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಕೇಂದ್ರ ಚುನಾವಣಾ ಆಯೋಗವು ಚಾಲನೆ ನೀಡಿದೆ. ಇದರಲ್ಲಿ ಕರ್ನಾಟಕ ರಾಜ್ಯವು ಸೇರಿದ್ದು, ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯದಲ್ಲಿ ಅ.1ರಂದು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದ್ದು, 18 ವರ್ಷ ತುಂಬುವ ಪ್ರತಿಯೊಬ್ಬ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವು ಜೂ.20ರಿಂದ ಆರಂಭವಾಗಲಿದೆ. ಜೂ.20 ರಿಂದ 29ರವರೆಗೆ ಬಿಎಲ್‌ಒಗಳಿಗೆ (ಮತಗಟ್ಟೆ ಮಟ್ಟದ ಅಧಿಕಾರಿಗಳು) ಅಗತ್ಯ ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಪಟ್ಟಿಯ ಮುದ್ರಣ ಮತ್ತು ಸಾಫ್ಟ್‌ವೇರ್ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತದೆ.

ಮನೆ ಮನೆ ಭೇಟಿ

ಜೂ.30 ರಿಂದ ಜು.29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಸತ್ಯಾಸತ್ಯತೆ, ಮೃತಪಟ್ಟವರು, ಬೇರೆಡೆಗೆ ಸ್ಥಳಾಂತರಗೊಂಡವರು ಮತ್ತು ಹೊಸದಾಗಿ ಸೇರ್ಪಡೆಯಾಗಬೇಕಾದವರ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಸಾರ್ವಜನಿಕರು ಈ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ಒದಗಿಸುವ ಮೂಲಕ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಜು.29ರಿಂದ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಕಾರ್ಯ ನಡೆಯಲಿದೆ. ಮತಗಟ್ಟೆಗಳ ಭೌಗೋಳಿಕ ವ್ಯಾಪ್ತಿ ಮತ್ತು ಮತದಾರರ ಸಂಖ್ಯೆಯನ್ನು ಆಧರಿಸಿ, ಅಗತ್ಯವಿದ್ದಲ್ಲಿ ಮತಗಟ್ಟೆಗಳನ್ನು ತರ್ಕಬದ್ಧಗೊಳಿಸಲಾಗುತ್ತದೆ. ಮತದಾರರಿಗೆ ಹತ್ತಿರದಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಈ ಬದಲಾವಣೆಗಳನ್ನು ಮಾಡಲಾಗುತ್ತದೆ.

ಆ.5ರಂದು ಕರಡು ಪಟ್ಟಿ ಬಿಡುಗಡೆ

ಪರಿಷ್ಕರಣೆಯ ಪ್ರಮುಖ ಹಂತವಾಗಿ ಆ.5ರಂದು ಕರಡು ಮತದಾರರ ಪಟ್ಟಿಯನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು. ಅಂದೇ ಸಾರ್ವಜನಿಕರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಲು ಅವಕಾಶವಿರುತ್ತದೆ. ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ದೋಷಗಳಿದ್ದರೆ, ಆ.5 ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ಸಲ್ಲಿಕೆಯಾದ ಅರ್ಜಿಗಳನ್ನು ಅ.3ರವರೆಗೆ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು. ಈ ಸಂದರ್ಭದಲ್ಲಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ, ಅವುಗಳನ್ನು ವಿಲೇವಾರಿ ಮಾಡುತ್ತಾರೆ. ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆಯನ್ನೂ ಮಾಡಲಾಗುತ್ತದೆ.

ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಎಲ್ಲಾ ಹಂತದ ಪರಿಶೀಲನೆಗಳು ಮತ್ತು ಆಕ್ಷೇಪಣೆಗಳ ಇತ್ಯರ್ಥದ ನಂತರ, ಅ. 7ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಈ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ನಮೂನೆಗಳಲ್ಲಿ ಸಲ್ಲಿಸಬೇಕು. ಅರ್ಹ ಯುವಕರು, ವಿಶೇಷವಾಗಿ ಅ.1ಕ್ಕೆ 18 ವರ್ಷ ಪೂರೈಸುವವರು ತಪ್ಪದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು 'ವೋಟರ್ ಹೆಲ್ಪ್‌ಲೈನ್ ಆಪ್' ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Read More
Next Story