
ಬೈಕ್ ಟ್ಯಾಕ್ಸಿ| ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ್ರಹ
ಹಿಂಬದಿ ಸವಾರನನ್ನು ಕರೆದೊಯ್ಯುವ ಸಾಮರ್ಥ್ಯವಿದೆ ಎಂಬ ಒಂದೇ ಕಾರಣಕ್ಕೆ ಮೋಟಾರ್ ಸೈಕಲ್ ಅನ್ನು "ಮೋಟಾರ್ ಕ್ಯಾಚ್" ಎಂದು ಪರಿಗಣಿಸಿರುವುದು ಸರಿಯಲ್ಲ. ಯಾವುದೇ ಸುರಕ್ಷತಾ ವ್ಯವಸ್ಥೆಗಳಿಲ್ಲದ ವಾಹನಗಳಲ್ಲಿ ಜೀವಹಾನಿಯ ಅಪಾಯ ಹೆಚ್ಚು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬೈಕ್ ಟ್ಯಾಕ್ಸಿ ಪುನರಾರಂಭಿಸುವ ಕುರಿತಾದ ತೀರ್ಪು ಸಾರ್ವಜನಿಕ ಸುರಕ್ಷತೆ, ಸಾರಿಗೆ ನಿಯಂತ್ರಣ ಮತ್ತು ಸರ್ಕಾರದ ನೀತಿ ನಿರ್ಧಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರಿಂದ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿ, ಜನರ ಜೀವಭದ್ರತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಕರ್ನಾಟಕ ಸರ್ಕಾರವು ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
ಮೋಟಾರ್ ವಾಹನಗಳ ಕಾಯ್ದೆ ಪ್ರಕಾರ "ಮೋಟಾರ್ ಕ್ಯಾಬ್' ಎಂದರೆ ಪ್ರಯಾಣಿಕರ ಸುರಕ್ಷಿತ ವಾಣಿಜ್ಯ ಸಾರಿಗೆಗಾಗಿ ವಿನ್ಯಾಸಗೊಳಿಸಿರುವ ವಾಹನ ಎಂದು ಸ್ಪಷ್ಟವಾಗಿದೆ. ಆದರೆ ಹಿಂಬದಿ ಸವಾರನನ್ನು ಕರೆದೊಯ್ಯುವ ಸಾಮರ್ಥ್ಯವಿದೆ ಎಂಬ ಒಂದೇ ಕಾರಣಕ್ಕೆ ಮೋಟಾರ್ ಸೈಕಲ್ ಅನ್ನು "ಮೋಟಾರ್ ಕ್ಯಾಚ್" ಎಂದು ಪರಿಗಣಿಸಿರುವುದು ಸರಿಯಲ್ಲ. ಯಾವುದೇ ಸುರಕ್ಷತಾ ವ್ಯವಸ್ಥೆಗಳಿಲ್ಲದ ವಾಹನಗಳಲ್ಲಿ ಜೀವಹಾನಿಯ ಅಪಾಯ ಹೆಚ್ಚು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಮೋಟಾರ್ ವಾಹನ ನಿಯಮಾವಳಿಗಳಲ್ಲಿ ಎರಡು ಚಕ್ರದ ವಾಹನಗಳು ಹಾಗೂ ಪ್ರಯಾಣಿಕರ ವಾಹನಗಳನ್ನು ಪ್ರತ್ಯೇಕ ವರ್ಗದಲ್ಲಿ ವರ್ಗೀಕರಿಸಲಾಗಿದೆ. ಈ ವಿಭಜನೆಗಳನ್ನು ಕಡೆಗಣಿಸುವುದು ಕಾನೂನು ಚೌಕಟ್ಟನ್ನೇ ದುರ್ಬಲಗೊಳಿಸಲಿದೆ. ಸಾರಿಗೆ ಯೋಜನೆ, ನಿಯಂತ್ರಣ ಹಾಗೂ ಪರವಾನಗಿ ನೀಡುವ ಪ್ರಕ್ರಿಯೆ ಸರ್ಕಾರದ ಅಧಿಕಾರವಾಗಿದೆ. ನ್ಯಾಯಾಂಗವು ಇದರಲ್ಲಿ ಹಸ್ತಕ್ಷೇಪ ಮಾಡುವುದು ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದೆ.
ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ನೀಡುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಳವಾಗಲಿದೆ. ಹೈಕೋರ್ಟ್ ತೀರ್ಪಿನಿಂದ ಆಟೋ, ಟ್ಯಾಕ್ಸಿ, ಬಸ್ ಚಾಲಕರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಸಾರ್ವಜನಿಕರ ಸುರಕ್ಷತೆ ಹಾಗೂ ನಿಯಂತ್ರಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಈ ವಿಷಯದಲ್ಲಿ ಒಕ್ಕೂಟವು ಸರ್ಕಾರಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ಆಗ್ರಹಿಸಿದ್ದಾರೆ.
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ್ದ ಕೋರ್ಟ್
ಬೈಕ್ ಟ್ಯಾಕ್ಸಿಗೆ ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರ ಹಾಗೂ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ನ್ಯಾಯಾಲಯ ಈ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಆಟೊ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸಲು ನಿರ್ಧರಿಸಿವೆ.
ರಾಜ್ಯ ಸರ್ಕಾರದ ಗಮನ ಸೆಳೆಯಲು ಆಟೊ ಚಾಲಕರು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೂ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2025 ನ. 26ರಂದು ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಮತ್ತು ಕಾನೂನು ಬಾಹಿರ ಎಂದು ವರದಿ ನೀಡಿತ್ತು. ಇದರ ವಿರುದ್ಧ ಓಲಾ, ಉಬರ್ ಸೇರಿ ಹಲವು ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದವು.

