
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜೆಡಿಎಸ್ ವಿಧಾನಪರಿಷತ್ ಶಾಸಕ ಟಿ.ಎ. ಶರವಣ
ಬಡ್ತಿ ಪಡೆಯಲು ನಕಲಿ ಡಿಪ್ಲೊಮಾ ಅಂಕಪಟ್ಟಿ: ಹೊಸ ಹಗರಣ ಬೆಳಕಿಗೆ!
ಮೈಸೂರು, ಬೆಳಗಾವಿಗಳಲ್ಲಿ ಪರೀಕ್ಷೆ ಬರೆದವರು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಲು ಹೇಗೆ ಸಾಧ್ಯ ಎಂದು ಜೆಡಿಎಸ್ ಶಾಸಕ ಟಿ.ಎ. ಶರವಣ ಪ್ರಶ್ನಿಸಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದ ಸಿಬ್ಬಂದಿಗಳು ಬಡ್ತಿ ಪಡೆಯಲು ನಕಲಿ ಡಿಪ್ಲೊಮಾ ಪ್ರಮಾಣಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಾರಿಗೆ ಇಲಾಖೆ ಮಾತ್ರವಲ್ಲದೇ ತಾಂತ್ರಿಕ ಶಿಕ್ಷಣ ಇಲಾಖೆಯು ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.
ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ನಾರಾಯಣ ಅವರನ್ನು ಈಗಾಗಲೇ ನೇಮಿಸಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಬುಧವಾರ (ಮಾ.11) ವಿಧಾನ ಪರಿಷತ್‌ನಲ್ಲಿ ಶಾಸಕ ಟಿ.ಎ.ಶರವಣ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಲಿಪಿಕ ವರ್ಗದವರಿಗೆ ಗ್ರೂಪ್ ʼಸಿʼ ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಬಡ್ತಿ ಪಡೆಯಲು ಡಿಪ್ಲೊಮಾ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಓದಿಗಾಗಿ ಇಲಾಖೆಯಲ್ಲಿ ಶೇ. 10ರಷ್ಟು ನೌಕರರಿಗೆ ಅವಕಾಶ ಮಾಡಿಕೊಟ್ಟು 2022 ಅಕ್ಟೋಬರ್‌ನಲ್ಲಿ ಆದೇಶಿಸಲಾಗಿತ್ತು. ಅದರಂತೆ 2022-23 ನೇ ಸಾಲಿನಲ್ಲಿ 17 ಜನರಿಗೆ 2023-24 ರಲ್ಲಿ 24 ನೌಕರರಿಗೆ, 2024-25 ರಲ್ಲಿ 15 ನೌಕರರಿಗೆ ಉನ್ನತ ಶಿಕ್ಷಣ ಓದಲು ಅನುಮತಿ ನೀಡಲಾಗಿತ್ತು ಎಂದರು.
ಪ್ರಮಾಣಪತ್ರಗಳ ಬಗ್ಗೆ ಅನುಮಾನ
ಅನುಮತಿ ಪಡೆದವರಲ್ಲಿ ಇಬ್ಬರು ಸಾರಿಗೆ ಇಲಾಖೆಯವರಲ್ಲ. ಇನ್ನಿಬ್ಬರು ನಿಯಮಿತ ರಜೆ ಪಡೆದು ತೆರಳಿದ್ದಾರೆ. ಆದರೆ ಉಳಿದವರ ಪ್ರಮಾಣಪತ್ರಗಳ ಬಗ್ಗೆ ಅನುಮಾನವಿದೆ. ಆದ್ದರಿಂದ 2025 ಮೇ 9 ಹಾಗೂ ನ.29 ರಂದು ತಾಂತ್ರಿಕ ಶಿಕ್ಷಣ ಮಂಡಳಿ ನಿರ್ದೇಶಕರಿಗೆ ಸಾರಿಗೆ ಇಲಾಖೆ ಆಯುಕ್ತರು ಪತ್ರ ಬರೆದಿದ್ದರು. ನಕಲಿ ಪ್ರಮಾಣಪತ್ರ ಪಡೆಯುತ್ತಿರುವ ಬಗ್ಗೆ ಕಾರಣ ಕೇಳಿದ್ದರು. ಅವರಿಂದ ಸರಿಯಾದ ಮಾಹಿತಿ ಸಿಗದಿರುವುದರಿಂದ ಮಾ.3ರಂದು ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕ್ರಮಕ್ಕೆ ಒತ್ತಾಯ
ಜೆಡಿಎಸ್ ಶಾಸಕ ಟಿ.ಎ. ಶರವಣ ಮಾತನಾಡಿ, ಕೆಸಿಎಸ್‌ಆರ್ ಕಾಯ್ದೆಯಂತೆ ನಕಲಿ ಪ್ರಮಾಣಪತ್ರ ನೀಡಿದವರ ಮೇಲೂ ಕ್ರಮವಾಗಬೇಕು. ಮೈಸೂರು, ಬೆಳಗಾವಿಗಳಲ್ಲಿ ಪರೀಕ್ಷೆ ಬರೆದವರು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಇವರಿಗೆ ಹೇಗೆ ಪ್ರಮಾಣ ಪತ್ರವನ್ನು ಕೊಡಲಾಯಿತು? ಇದರ ಬಗ್ಗೆಯೂ ತನಿಖೆಯಾಗಿ ಕ್ರಮವಾಗಬೇಕು. ಇಂದು ಉದ್ಯೋಗದ ಸಮಸ್ಯೆಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಲಕ್ಷಾಂತರ ಯುವಕರು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಡಿಪ್ಲೋಮಾ ನಕಲಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದೆ. ಆಗ ಸಂಪೂರ್ಣ ವರದಿ ಕೊಟ್ಟರೆ ಲೋಕಾಯುಕ್ತ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರು. ಅದರಂತೆ 2025 ರ ಡಿ.15 ರಂದೇ ಸಚಿವರಿಗೆ ಟಿಪ್ಪಣಿಯೊಂದಿಗೆ ಸಂಪೂರ್ಣ ದಾಖಲಾತಿ ನೀಡಿದ್ದೆ. ಆದರೆ, ಮೂರು ತಿಂಗಳು ಕಳೆದರೂ ನೌಕರರ ಮೇಲೆ ಯಾವುದೇ ತನಿಖೆಯಾಗಲಿ , ಕ್ರಮವಾಗಲಿ ಆಗಿಲ್ಲ. ಈಗ ಸದನದಲ್ಲಿ ಮಾತನಾಡಬೇಕು ಎಂದು ಫೆ.23ಕ್ಕೆ ಪ್ರಶ್ನೆ ಕೊಟ್ಟ ಒಂದು ವಾರಗಳ ನಂತರ ಅಕ್ರಮ ಎಸಗಿದವರಿಗೆ ನೋಟಿಸ್ ಕೊಟ್ಟಿದ್ದಾರೆ. 15 ದಿನದಲ್ಲಿ ಉತ್ತರ ಕೊಡಿ ಎಂದು ನೆಪಕ್ಕೆ ಹೇಳಿದ್ದಾರೆ ಎಂದರು.

