ಶಿಕ್ಷಕರ ವರ್ಗಾವಣೆಗೆ 12 ವರ್ಷ ಸೇವೆ ಕಡ್ಡಾಯ; ಬೋಧಕೇತರ ಹುದ್ದೆಗೆ  ಶಿಕ್ಷಕರ ನೇಮಕಕ್ಕೆ ಬ್ರೇಕ್‌
x
ಕರ್ನಾಟಕದ ಶಾಲಾ ಶಿಕ್ಷಕರು ಸಾಂದರ್ಭಿಕ ಚಿತ್ರ

ಶಿಕ್ಷಕರ ವರ್ಗಾವಣೆಗೆ 12 ವರ್ಷ ಸೇವೆ ಕಡ್ಡಾಯ; ಬೋಧಕೇತರ ಹುದ್ದೆಗೆ ಶಿಕ್ಷಕರ ನೇಮಕಕ್ಕೆ ಬ್ರೇಕ್‌

ಡಯಟ್‌ ಹಾಗೂ ಡಿಎಸ್‌ಇಆರ್‌ಟಿ ಹುದ್ದೆಗಳಲ್ಲಿ 3 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರು ಮೂಲ ಬೋಧನಾ ವೃಂದಕ್ಕೆ ಮರಳಬಹುದು. ನಿರ್ದಿಷ್ಟ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಗರಿಷ್ಠ 3 ರಿಂದ 5 ವರ್ಷಗಳ ಅವಧಿಯ ನಿಯಮ ಅನ್ವಯ.


ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ ತಂದಿದೆ. ವರ್ಗಾವಣೆ ನಿಯಮ ಪರಿಷ್ಕರಿಸಿರುವ ಸರ್ಕಾರ, ಒಂದೇ ಶಾಲೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಕನಿಷ್ಠ 12 ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

ಕನಿಷ್ಠ ಏಳು ವರ್ಷ ಸೇವೆ ಸಲ್ಲಿಸಿದವರಿಗೂ ವರ್ಗಾವಣೆ ಅವಕಾಶವಿತ್ತು. ಈ ಮಿತಿಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಶ್ರಮಿಸುವಂತೆ ಮಾಡಲಾಗಿದೆ. ಶಿಕ್ಷಕರು ದೀರ್ಘಕಾಲ ಒಂದೇ ಶಾಲೆಯಲ್ಲಿ ಉಳಿಯುವುದರಿಂದ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲು ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ.

ವರ್ಗಾವಣೆಯಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಮಾಡಬೇಕೆಂಬ ಎಂಬ ನಿಯಮವನ್ನೂ ತರಲಾಗಿದೆ. 2020 ರ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರವು ʼಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2026ʼ ಜಾರಿಗೆ ತಂದಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಗೊಂಡ ಶಿಕ್ಷಕರು ಆ ಭಾಗದಿಂದ ಹೊರ ಜಿಲ್ಲೆಗಳಿಗೆ ವರ್ಗಾವಣೆ ಬಯಸಬೇಕಾದರೆ ಕನಿಷ್ಠ 10 ವರ್ಷಗಳ ಸೇವೆಯನ್ನೂ ಕಡ್ಡಾಯ ಮಾಡಲಾಗಿದೆ.

ಮಹಿಳೆಯರಿಗೆ ವಿಶೇಷ ವಿನಾಯಿತಿ

ಮಹಿಳಾ ಶಿಕ್ಷಕಿಯರಿಗೆ ಮಗು ಪಾಲನೆಗಾಗಿ ವಿಶೇಷ ವಿನಾಯಿತಿ ನೀಡಲಾಗಿದೆ. ಗರ್ಭಿಣಿ ಶಿಕ್ಷಕಿಯರು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿರುವ ಶಿಕ್ಷಕಿಯರಿಗೆ ಅವರು ಬಯಸಿದ ಸ್ಥಳದಲ್ಲಿ ನೇಮಕಾತಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಇದು ಶಿಕ್ಷಕಿಯರ ಸಾಮಾಜಿಕ ಹಾಗೂ ಕುಟುಂಬದ ಹಿತ ಗಮನದಲ್ಲಿ ಇಟ್ಟುಕೊಂಡ ತೆಗೆದುಕೊಂಡ ನಿರ್ಧಾರವಾಗಿದೆ. ಆ ಮೂಲಕ ಶಿಕ್ಷಕರ ಸೇವಾ ನಿಯಮಾವಳಿಗಳಲ್ಲಿ ಸ್ಪಷ್ಟತೆ ಕಾಯ್ದುಕೊಳ್ಳಲಾಗಿದೆ.

ಡಯಟ್‌ ಹಾಗೂ ಡಿಎಸ್‌ಇಆರ್‌ಟಿ ಅಥವಾ ಇತರ ಬೋಧಕೇತರ ಹುದ್ದೆಗಳಲ್ಲಿ 3 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರು ತಮ್ಮ ಮೂಲ ಬೋಧನಾ ವೃಂದಕ್ಕೆ ಮರಳಬಹುದು. ನಿರ್ದಿಷ್ಟ ಹುದ್ದೆಗಳಲ್ಲಿ (ಪ್ರಾಂಶುಪಾಲರು, ಉಪ ಪ್ರಾಂಶುಪಾಲರು) ಸೇವೆ ಸಲ್ಲಿಸುವ ಶಿಕ್ಷಕರಿಗೆ ಗರಿಷ್ಠ 3 ರಿಂದ 5 ವರ್ಷಗಳ ಅವಧಿಯ ನಿಯಮ ಅನ್ವಯವಾಗಲಿದೆ.

ಬೋಧಕೇತರ ಹುದ್ದೆಯ ಜವಾಬ್ದಾರಿಗೆ ಬ್ರೇಕ್‌

ಅಧಿಸೂಚನೆ ಪ್ರಕಾರ, ಬೋಧಕೇತರ ಹುದ್ದೆಗಳಿಗೆ ಶಿಕ್ಷಕರ ನೇಮಕವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಇದರಿಂದ ಶಿಕ್ಷಕರನ್ನು ಬೋಧನೆಗೆ ಸೀಮಿತಗೊಳಿಸುವ ಉದ್ದೇಶ ಹೊಂದಲಾಗಿದೆ.

ತಿದ್ದುಪಡಿ ವಿಧೇಯಕದಿಂದ ಶಿಕ್ಷಕರ ವರ್ಗಾವಣೆ ನಿಯಮಾವಳಿಯಲ್ಲಿ ದೀರ್ಘಕಾಲೀನ ಬದಲಾವಣೆ ಸಾಧ್ಯವಾಗಲಿದೆ. ಶಿಕ್ಷಕರಿಗೆ ನಿರ್ದಿಷ್ಟ ಅವಧಿಯ ಸೇವೆಯ ನಂತರ ಮಾತ್ರ ವರ್ಗಾವಣೆ ಅವಕಾಶ ದೊರೆಯುವುದರಿಂದ ಶಾಲೆಗಳಲ್ಲಿನ ಬೋಧನಾ ಪ್ರಕ್ರಿಯೆಯಲ್ಲಿ ನಿರಂತರತೆ ಕಾಪಾಡಲು ಸಾಧ್ಯವಾಗಲಿದೆ.

ಅಲ್ಲದೇ, ನಿರ್ದಿಷ್ಟಪಡಿಸಿದ ಬೋಧಕ ಹುದ್ದೆಗಳ ಸ್ಥಾನಿಕರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿನ ಬೋಧಕೇತರ ಹುದ್ದೆಗಳು, ರಾಜ್ಯ ಸಿವಿಲ್ ಸೇವೆಗಳು, ಮಂಡಳಿಗಳು ಅಥವಾ ನಿಗಮಗಳಲ್ಲಿನ ಯಾವುದೇ ಇತರ ಹುದ್ದೆಗಳಿಗೆ ವರ್ಗಾವಣೆ ಮಾಡದಂತೆ ಷರತ್ತು ವಿಧಿಸಿದೆ. ಬೋಧಕೇತರ ಕೆಲಸಗಳಿಂದ ಮುಕ್ತಿ ನೀಡಿರುವುದು ಶಿಕ್ಷಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಶಿಕ್ಷಣದ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ ಕ್ರಮವಾಗಿದೆ.

ಒಂದು ಶಾಲೆ ಅಥವಾ ಪದವಿ ಪೂರ್ವ ಕಾಲೇಜಿನಲ್ಲಿ ಕನಿಷ್ಠ ಸೇವಾವಧಿ ಸಲ್ಲಿಸಿರುವ ಶಿಕ್ಷಕ ಅಥವಾ ಉಪನ್ಯಾಸಕರಿಗೆ ವರ್ಗಾವಣೆಗಾಗಿ ಲಭ್ಯವಿರುವ ನಿರ್ಣಾಯಕ ಹುದ್ದೆ ಮತ್ತು ನಿಯಮಿಸಬಹುದಾದಂಥ ಇತರ ಷರತ್ತುಗಳಿಗೆ ಒಳಪಟ್ಟು ವರ್ಗಾವಣೆ ಕೋರಲು ಆಯ್ಕೆ ನೀಡಲಾಗಿದೆ.

ವರ್ಗಾವಣೆ ಒತ್ತಡ ಮತ್ತು ಅನಿಶ್ಚಿತತೆ

ಹಳೆಯ ನಿಯಮಗಳಡಿ ಶಿಕ್ಷಕರು ಅಲ್ಪಾವಧಿಯಲ್ಲೇ ವರ್ಗಾವಣೆ ಬಯಸುತ್ತಿದ್ದರು. ಕೆಲವರು ಒತ್ತಡ ತಂತ್ರ ಹೇರುವ ಮೂಲಕ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿ, ಪಠ್ಯಕ್ರಮ ಪೂರ್ಣಗೊಳಿಸುವುದು ಕಷ್ಟವಾಗುತ್ತಿತ್ತು.

ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವೂ ಹೆಚ್ಚಾಗಿ ಅರ್ಹತೆ ಇದ್ದರೂ ಸೂಕ್ತ ಸ್ಥಳ ಸಿಗದೆ ಶಿಕ್ಷಕರು ಪರದಾಡುವಂತಾಗಿತ್ತು. ಇದನ್ನು ಹೋಗಲಾಡಿಸಲು ಈಗ ಕೌನ್ಸೆಲಿಂಗ್ ಕಡ್ಡಾಯ ಮಾಡಲಾಗಿದೆ.

ಶಾಲೆಗಳ ವರ್ಗೀಕರಣದ ಗೊಂದಲ ಇತ್ಯರ್ಥ

ರಾಜ್ಯದಲ್ಲಿ ವಿವಿಧ ಮಾದರಿಯ ಶಾಲೆಗಳಿದ್ದರೂ ವರ್ಗಾವಣೆ ನಿಯಮಗಳನ್ನು ಒಂದೇ ರೀತಿ ನೋಡಲಾಗುತ್ತಿತ್ತು. ಇದರಿಂದ ಆಯಾ ಶಾಲೆಗಳ ವಿಶೇಷ ಅಗತ್ಯಗಳಿಗೆ ತಕ್ಕಂತೆ ಶಿಕ್ಷಕರನ್ನು ನೇಮಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಕೆಪಿಎಸ್‌, ಆದರ್ಶ ವಿದ್ಯಾಲಯ ಹಾಗೂ ಪಿಎಂಶ್ರೀ ಎಂದು ಮೂರು ವರ್ಗಗಳನ್ನಾಗಿ ವಿಂಗಡಣೆ ಮಾಡಿರುವುದರಿಂದ ಗೊಂದಲ ಪರಿಹಾರವಾಗಲಿದೆ.

Read More
Next Story