ಇನ್ನು ಮುಂದೆ ಕಬ್ಬಿನ ತೂಕ, ಇಳುವರಿಯಲ್ಲಿ ಮೋಸವಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್‌
x

ಇನ್ನು ಮುಂದೆ ಕಬ್ಬಿನ ತೂಕ, ಇಳುವರಿಯಲ್ಲಿ ಮೋಸವಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್‌

ರಾಜ್ಯದ ರೈತ ಸಂಘಟನೆಗಳು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದವು. ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ.


Click the Play button to hear this message in audio format

ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆ ಮತ್ತು ಸಕ್ಕರೆ ಕಾರ್ಖಾನೆಗಳ ಸುಗಮ ಕಾರ್ಯನಿರ್ವಹಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಎನ್. ರವಿಕುಮಾರ್, ಡಿ.ಎಸ್.ಅರುಣ್, ಕೆ.ಎಸ್. ನವೀನ್, ಕೇಶವ ಪ್ರಸಾದ್.ಎಸ್ ಅವರು ನಿಯಮ 330 ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕಳೆದ ನವೆಂಬರ್ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಸರ್ಕಾರವು ರೈತರು ಮತ್ತು ಕಾರ್ಖಾನೆ ಮಾಲೀಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯದ ರೈತ ಸಂಘಟನೆಗಳು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದವು. ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್‌ಪಿ ದರವು ಕಬ್ಬಿನ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಡಿಮೆಯಿದೆ ಎಂಬ ರೈತರ ಅಳಲನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

2025-26ನೇ ಹಂಗಾಮಿನಲ್ಲಿ ಶೇ. 9.5 ಅಥವಾ ಅದಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಕಬ್ಬಿಗೆ ಕೇಂದ್ರದ ದರದ ಜೊತೆಗೆ ಹೆಚ್ಚುವರಿಯಾಗಿ 100 ರೂ. ನೀಡಲು ತೀರ್ಮಾನಿಸಲಾಗಿದೆ. ವಿಶೇಷವೆಂದರೆ, ಈ ಹೊರೆಯನ್ನು ಕೇವಲ ಕಾರ್ಖಾನೆಗಳ ಮೇಲೆ ಹಾಕದೆ, ರಾಜ್ಯ ಸರ್ಕಾರವು 50 ರೂ. ಮತ್ತು ಕಾರ್ಖಾನೆಗಳು 50 ರೂ.ಗಳನ್ನು ಜಂಟಿಯಾಗಿ ಭರಿಸಲಿವೆ. ಇದು ಸಣ್ಣ ಮತ್ತು ಮಧ್ಯಮ ಕಬ್ಬು ಬೆಳೆಗಾರರಿಗೆ ದೊಡ್ಡ ನೆರವಾಗಲಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿ ಲೆಕ್ಕಾಚಾರದಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂಬ ದೂರುಗಳು ದಶಕಗಳಿಂದ ಕೇಳಿಬರುತ್ತಿವೆ. ಇದನ್ನು ತಡೆಯಲು ಸರ್ಕಾರವು ಕಾರ್ಖಾನೆಗಳ ಮುಂಭಾಗದಲ್ಲೇ ಸರ್ಕಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ಮೂಲಕ ತೂಕ ಮತ್ತು ಇಳುವರಿಯನ್ನು ವೈಜ್ಞಾನಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಸಾಧ್ಯವಾಗಲಿದ್ದು, ರೈತರಲ್ಲಿ ವಿಶ್ವಾಸ ಮೂಡಲಿದೆ. ಜೊತೆಗೆ, ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ಬಾಕಿ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಿರುವುದು ರೈತರ ಆರ್ಥಿಕ ಶಿಸ್ತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಖಾನೆಗಳ ಆರ್ಥಿಕ ಚೇತರಿಕೆಗೆ ಬೆಂಬಲ

ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ 31 ರೂ.ಯಿಂದ ಹೆಚ್ಚಿಸುವಂತೆ ಮತ್ತು ಎಥನಾಲ್ ದರವನ್ನು ಪರಿಷ್ಕರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಇದಲ್ಲದೆ, ರಾಜ್ಯದ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಪ್ರತಿ ಯೂನಿಟ್‌ಗೆ 6.5 ರೂ.ನಂತೆ 10 ವರ್ಷಗಳ ಕಾಲ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದು ಕಾರ್ಖಾನೆಗಳಿಗೆ ಸ್ಥಿರವಾದ ಆದಾಯದ ಮೂಲವನ್ನು ಒದಗಿಸಲಿದೆ. ಹೊಸ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಲ್ಲಿ ಅನಾರೋಗ್ಯಕರ ಪೈಪೋಟಿ ತಡೆಯಲು ಮತ್ತು ಕಬ್ಬಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎರಡು ಕಾರ್ಖಾನೆಗಳ ನಡುವಿನ ಕನಿಷ್ಠ ಅಂತರವನ್ನು 15 ಕಿ.ಮೀ ನಿಂದ 25 ಕಿ.ಮೀ ಗೆ ಹೆಚ್ಚಿಸಲು ನೀತಿ ರೂಪಿಸಲಾಗುತ್ತಿದೆ. ಅಲ್ಲದೆ, ಸಕ್ಕರೆ ದಾಸ್ತಾನು ಹೆಚ್ಚಾಗಿ ಬೆಲೆ ಕುಸಿಯದಂತೆ ತಡೆಯಲು 2.47 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಕೇಂದ್ರದಿಂದ ಅನುಮತಿ ಕೊಡಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದರು.

Read More
Next Story