ಅಮೆರಿಕದಲ್ಲಿ ಸಾಕೇತ್​ ನಾಪತ್ತೆ; ನೆರವಿಗೆ ಸಿಎಂ,ಮುಖ್ಯ ಕಾರ್ಯದರ್ಶಿಗೆ ಪೋಷಕರ ಮೊರೆ
x

ಅಮೆರಿಕದಲ್ಲಿ ಸಾಕೇತ್​ ನಾಪತ್ತೆ; ನೆರವಿಗೆ ಸಿಎಂ,ಮುಖ್ಯ ಕಾರ್ಯದರ್ಶಿಗೆ ಪೋಷಕರ ಮೊರೆ

ಸಾಕೇತ್ ಅವರ ತಂದೆ ಶ್ರೀನಿವಾಸಯ್ಯ ಅವರ ಮನವಿಯನ್ನು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕಳುಹಿಸಿದ್ದಾರೆ.


Click the Play button to hear this message in audio format

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದ ಕರ್ನಾಟಕದ ತುಮಕೂರು ಮೂಲದ ಸಾಕೇತ್ ಶ್ರೀನಿವಾಸಯ್ಯ (22) ನಿಗೂಢವಾಗಿ ನಾಪತ್ತೆಯಾಗಿ ಐದು ದಿನಗಳು ಕಳೆದಿವೆ. ಆಘಾತಕಾರಿ ಸುದ್ದಿ ಬೆಂಗಳೂರಿನಲ್ಲಿರುವ ಅವರ ಮನೆಗೆ ತಲುಪಿದ್ದು ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಗನ ಸುಳಿವು ಸಿಗದೆ ಕಂಗಾಲಾಗಿರುವ ತಂದೆ ಶ್ರೀನಿವಾಸಯ್ಯ, ಅನಿವಾಸಿ ಭಾರತೀಯ ಸಮಿತಿಯ ಮೊರೆ ಹೋಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಗನ ನಾಪತ್ತೆಯ ವಿಷಯ ತಿಳಿದ ನಿವಾಸಯ್ಯ ಅವರು ದಿಕ್ಕು ತೋಚದಂತಾಗಿದ್ದಾರೆ. ಮಾಹಿತಿ ಪಡೆಯಲು ಕರೆ ಮಾಡಿದ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ಅವರು ತಾವು ಮಗ ವಾಪಸ್​ ಬರುವ ನಿರೀಕ್ಷೆಯಲ್ಲಿದ್ದು, ಪತ್ತೆ ಮಾಡಲು ನೆರವು ನೀಡುವಂತೆ ಎಲ್ಲರಿಗೂ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

"ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇನೆ. ಅಮೆರಿಕದಲ್ಲಿರುವ ತಮ್ಮ ಮಗನನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರವು ವಿದೇಶಾಂಗ ಸಚಿವಾಲಯದ ಮೇಲೆ ಒತ್ತಡ ಹೇರಬೇಕೆಂದು ಕೋರಿದ್ದೇನೆ,'' ಎಂದಿದ್ದಾರೆ.

ಮನವಿ ಪತ್ರವನ್ನು ಲಗತ್ತಿಸಿದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಅದನ್ನು ವಿದೇಶಾಂಗ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರಿಗೆ ಕಳುಹಿಸಿದ್ದಾರೆ.

ಶಾಲಿನಿ ರಜನೀಶ್​ ಅವರು ಕಳುಹಿಸಿದ ಪತ್ರ ಇಲ್ಲಿದೆ



ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಈ ಬಗ್ಗೆ 'ದ ಫೆಡರಲ್​ ಕರ್ನಾಟಕ'ದ ಜತೆ ವಿಡಿಯೊ ಸಂದರ್ಶನದಲ್ಲಿ ಮಾತನಾಡಿ, "ಸಾಕೇತ್ ಅವರ ತಂದೆ ಶನಿವಾರ (ಇಂದು) ನನ್ನನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದಾರೆ. ಮಗನ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ನಾನು ತಕ್ಷಣವೇ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ (Consulate General of India) ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ನಮ್ಮ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು, ಯುವಕನ ಪತ್ತೆಗೆ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ," ಎಂದು ತಿಳಿಸಿದ್ದಾರೆ.

ಏನಿದು ಘಟನೆ? ​

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ತುಮಕೂರು ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕಳೆದ ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದಾರೆ. ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಸಾಕೇತ್ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿರುವ ಬ್ಯಾಗ್ ಪತ್ತೆಯಾದರೂ, ಅವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗದ ಬಗ್ಗೆ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಕೊನೆಯ ಸಂಪರ್ಕ ಸೋಮವಾರ ರಾತ್ರಿ

ಸಾಕೇತ್ ಭಾನುವಾರದವರೆಗೂ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದರು. ಸೋಮವಾರ ರಾತ್ರಿ ತನ್ನ ತಾಯಿಗೆ ಕರೆ ಮಾಡಿದ್ದರು. ಆದರೆ, ಈ ಕಡೆಯಿಂದ ತಾಯಿ ವಾಪಸ್ ಕರೆ ಮಾಡಿದಾಗ ಫೋನ್ ಎತ್ತಿರಲಿಲ್ಲ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ತಿಳಿದುಬಂದಿದೆ ಎಂದು ಆರತಿ ಕೃಷ್ಣ ಮಾಹಿತಿ ನೀಡಿದ್ದಾರೆ. ಅವರು ಕೊನೆಯದಾಗಿ ಫೆಬ್ರವರಿ 10 ರಂದು ಬರ್ಕ್ಲಿಯ ಡ್ವೈಟ್ ವೇ ಪ್ರದೇಶದ 1700 ನೇ ಬ್ಲಾಕ್‌ನಲ್ಲಿ ಕಂಡುಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಗ್ ಪತ್ತೆ: ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಇದ್ದವು

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಕೇತ್ ಕೊನೆಯದಾಗಿ ಬರ್ಕ್ಲಿ ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕಂಡುಬಂದಿದ್ದರು. ಆತಂಕಕಾರಿ ವಿಷಯವೆಂದರೆ, ತನಿಖಾ ತಂಡಕ್ಕೆ ವಿವಿ ಸಮೀಪದ ಟಿಲ್ಡನ್ ರೀಜನಲ್ ಪಾರ್ಕ್ ಬಳಿಯ ಮನೆಯೊಂದರ ಹತ್ತಿರ ಬ್ಯಾಗ್ ಒಂದು ಸಿಕ್ಕಿದೆ. ಈ ಬ್ಯಾಗ್ ಸಾಕೇತ್ ಅವರದ್ದೇ ಎಂದು ನಂಬಲಾಗಿದ್ದು, ಅದರಲ್ಲಿ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಪತ್ತೆಯಾಗಿದೆ. ಪಾರ್ಕ್ ಹಿಲ್ಸ್ ನೆರೆಹೊರೆಯಲ್ಲಿರುವ ಮನೆಯೊಂದರ ಬಾಗಿಲ ಮೇಲೆ ಈ ಬ್ಯಾಗ್ ಪತ್ತೆಯಾಗಿದೆ ಎಂದು ಬರ್ಕ್ಲಿ ಸ್ಕ್ಯಾನರ್ ವರದಿ ಮಾಡಿದೆ.

ಶೈಕ್ಷಣಿಕ ಹಿನ್ನೆಲೆ

ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿದ ಸಾಕೇತ್, ನಂತರ ಬೇಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಚೆನ್ನೈ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಅಂಡ್ ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿದ್ದರು. 'ಅಪಾಯದಲ್ಲಿದ್ದಾರೆ' ಎಂದ ಪೊಲೀಸ್

ಬರ್ಕ್ಲಿ ಪೊಲೀಸರು ಸಾಕೇತ್ ಅವರನ್ನು 'ಅಪಾಯದಲ್ಲಿರುವ ವ್ಯಕ್ತಿ' ಎಂದು ಪರಿಗಣಿಸಿ ಹುಡುಕಾಟ ನಡೆಸುತ್ತಿದ್ದಾರೆ. 6 ಅಡಿ 1 ಇಂಚು ಎತ್ತರ, ಸುಮಾರು 73 ಕೆಜಿ ತೂಕ, ಕಿರು ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಸಾಕೇತ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಲೇಕ್ ಅಂಜಾ ಮತ್ತು ಬರ್ಕ್ಲಿ ಹಿಲ್ಸ್ ಸುತ್ತಮುತ್ತಲೂ ಶೋಧ ಕಾರ್ಯ ಮುಂದುವರಿದಿದೆ. ಬರ್ಕ್ಲಿ ಪೊಲೀಸ್ ಇಲಾಖೆ ಈಸ್ಟ್ ಬೇ ರೀಜನಲ್ ಪಾರ್ಕ್ ಡಿಸ್ಟ್ರಿಕ್ಟ್‌ನೊಂದಿಗೆ ಸಮನ್ವಯದಿಂದ ಹುಡುಕಾಟ ನಡೆಸುತ್ತಿದೆ.

ಸಾಕೇತ್ ಸೋಮವಾರದಿಂದ ನಾಪತ್ತೆಯಾಗಿದ್ದು, ಅವರ ರೂಮ್‌ಮೇಟ್ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿ ಸಹಾಯ ಕೇಳಿಕೊಂಡಿದ್ದರು. "ಸಾಕೇತ್ ಶ್ರೀನಿವಾಸಯ್ಯ ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ಬರ್ಕ್ಲಿ ಬೆಟ್ಟಗಳಲ್ಲಿರುವ ಲೇಕ್ ಅಂಜಾ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಪ್ರದೇಶದಲ್ಲಿ ಅವರನ್ನು ಇತ್ತೀಚೆಗೆ ನೋಡಿದ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ" ಎಂದು ಮನವಿ ಮಾಡಿದ್ದರು.

ಭಾರತೀಯ ರಾಯಭಾರ ಕಚೇರಿ ಕಳವಳ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕಳವಳ ವ್ಯಕ್ತಪಡಿಸಿದೆ. "ಕರ್ನಾಟಕ ರಾಜ್ಯದ ಮೂಲದ ಯುಸಿ ಬರ್ಕ್ಲಿಯ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾನ್ಸುಲೇಟ್ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ" ಎಂದು ತಿಳಿಸಿದೆ. ವಿದೇಶಾಂಗ ಸಚಿವಾಲಯ ಮತ್ತು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ.

Read More
Next Story