x

ರಾಜ್ಯಾದ್ಯಂತ ಕಲ್ಲು ಕ್ವಾರಿ, ಕ್ರಷರ್ ಬಂದ್: ಕಾರಣ ತಿಳಿಸಿದ ಒಕ್ಕೂಟದ ಅಧ್ಯಕ್ಷ ಡಿ. ಸಿದ್ದರಾಜು

ಸರ್ಕಾರ ಇದುವರೆಗೆ ಎಷ್ಟು ಪ್ರಮಾಣದ ರಾಯಧನ ಸಂಗ್ರಹಿಸಿದೆ ಎಂಬ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡಲು ಕೂಡಲೇ ಅಧಿಕೃತ ಶ್ವೇತಪತ್ರ ಹೊರಡಿಸಬೇಕು ಎಂದು ಸಿದ್ದರಾಜು ಒತ್ತಾಯಿಸಿದ್ದಾರೆ.


Click the Play button to hear this message in audio format

ಒಂದೇ ಹಂತದ ಕಲ್ಲುಗಣಿ ಉತ್ಪನ್ನಕ್ಕೆ ಸರ್ಕಾರ ಎರಡು ಹಂತದಲ್ಲಿ ರಾಜಧನ (ರಾಯಧನ) ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಎಲ್ಲಾ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ-ಸ್ಯಾಂಡ್ ಉತ್ಪಾದನಾ ಘಟಕಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಈ ಅವೈಜ್ಞಾನಿಕ ತೀರ್ಮಾನದಿಂದ ಕಂಗಾಲಾಗಿರುವ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗಳ ಮೇಲೆ ಬಲವಾದ ಹೊಡೆತ ಬೀಳುವ ಆತಂಕ ಎದುರಾಗಿದೆ. ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಡಿ. ಸಿದ್ದರಾಜು ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅವೈಜ್ಞಾನಿಕ ನಿಯಮವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಶ್ವೇತಪತ್ರಕ್ಕೆ ಆಗ್ರಹ ಹಾಗೂ ಅಧಿಕಾರಿಗಳ ಕಿರುಕುಳದ ಆರೋಪ

ರಾಜ್ಯದಲ್ಲಿ ಪ್ರಸ್ತುತ ಸುಮಾರು 2,600 ಜಲ್ಲಿ ಕ್ರಷರ್‌ಗಳು ಹಾಗೂ 5,800 ಕಲ್ಲು ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಇಷ್ಟೊಂದು ಬೃಹತ್ ಸಂಖ್ಯೆಯ ಘಟಕಗಳಿಂದ ಸರ್ಕಾರ ಇದುವರೆಗೆ ಎಷ್ಟು ಪ್ರಮಾಣದ ರಾಯಧನ ಸಂಗ್ರಹಿಸಿದೆ ಎಂಬ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡಲು ಕೂಡಲೇ ಅಧಿಕೃತ ಶ್ವೇತಪತ್ರ ಹೊರಡಿಸಬೇಕು ಎಂದು ಸಿದ್ದರಾಜು ಒತ್ತಾಯಿಸಿದ್ದಾರೆ. ಇದೇ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿರುವ ಅವರು, ನಿಯಮಗಳ ಹೆಸರಿನಲ್ಲಿ ಅಧಿಕಾರಿಗಳು ಕ್ರಷರ್ ಮಾಲೀಕರಿಗೆ ನಿರಂತರ ಕಿರುಕುಳ ನೀಡಿ ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಧಿಕಾರಿಗಳ ಈ ಸುಲಿಗೆಯನ್ನು ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇಂತಹ ಕಿರುಕುಳದ ವಿರುದ್ಧ ಸಿಡಿದೆದ್ದು ಈ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಸಾಲ ತೀರಿಸಿ, ಬೀಗ ತಗೊಳ್ಳಿ’: ಮಾಲೀಕರ ಹತಾಶೆ

ಕ್ವಾರಿ ಉದ್ಯಮದ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿರುವ ಒಕ್ಕೂಟದ ಅಧ್ಯಕ್ಷರು, ಬಹುತೇಕ ಮಾಲೀಕರು ಬ್ಯಾಂಕುಗಳಲ್ಲಿ ಹಾಗೂ ಖಾಸಗಿಯಾಗಿ ಹೆಚ್ಚಿನ ಬಡ್ಡಿಗೆ ಸಾಲ ತಂದು ಬಂಡವಾಳ ಹೂಡಿ ಉದ್ಯಮ ನಡೆಸುತ್ತಿದ್ದಾರೆ. ಆದರೆ, ಒಂದೆಡೆ ಸರ್ಕಾರದ ಅವೈಜ್ಞಾನಿಕ ತೆರಿಗೆ ಹೊರೆ, ಮತ್ತೊಂದೆಡೆ ಅಧಿಕಾರಿಗಳ ನಿರಂತರ ಕಿರುಕುಳದಿಂದಾಗಿ ಉದ್ಯಮ ನಡೆಸುವುದು ಅಸಾಧ್ಯದ ಮಾತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ನಮ್ಮ ಉದ್ಯಮದ ಮೇಲೆ ಅಷ್ಟೊಂದು ಕಣ್ಣಿದ್ದರೆ, ನಾವು ಮಾಡಿರುವ ಸಾಲವನ್ನು ಸರ್ಕಾರವೇ ತೀರಿಸಲಿ; ನಾವೇ ಖುದ್ದಾಗಿ ನಮ್ಮ ಎಲ್ಲಾ ಕ್ವಾರಿಗಳ ಕೀಲಿಗಳನ್ನು ಸರ್ಕಾರಕ್ಕೆ ಒಪ್ಪಿಸಿ ಉದ್ಯಮದಿಂದ ಹೊರಬರುತ್ತೇವೆ ಎಂದು ಅತ್ಯಂತ ಹತಾಶೆಯಿಂದ ನುಡಿದಿದ್ದಾರೆ.

ಸರ್ಕಾರಿ ಕಾಮಗಾರಿಗಳ ಮೇಲೂ ಹೊಡೆತ: ಹೊರರಾಜ್ಯದ ಸರಕಿಗೂ ನಿರ್ಬಂಧ

ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿರುವ ಸಿದ್ದರಾಜು, ಬಂದ್‌ನಿಂದಾಗಿ ಸಾರ್ವಜನಿಕರಿಗೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಉಂಟಾಗುವ ತೊಂದರೆಗೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ. ಈ ಮುಷ್ಕರದಿಂದಾಗಿ ಸರ್ಕಾರದ ಪ್ರಮುಖ ನೀರಾವರಿ, ರಸ್ತೆ ಹಾಗೂ ವಸತಿ ಯೋಜನೆಗಳ ಕಾಮಗಾರಿಗಳೂ ಸ್ಥಗಿತಗೊಳ್ಳಲಿವೆ. ಇದಲ್ಲದೆ, ಮುಷ್ಕರವನ್ನು ವಿಫಲಗೊಳಿಸಲು ಹೊರರಾಜ್ಯಗಳಿಂದ ಜಲ್ಲಿ ಅಥವಾ ಎಂ-ಸ್ಯಾಂಡ್ ತರುವುದಕ್ಕೂ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದು, ರಾಜ್ಯಾದ್ಯಂತ ಎಲ್ಲ ಮಾಲೀಕರು ಹಾಗೂ ಲಾರಿ ಮಾಲೀಕರ ಸಂಘಟನೆಗಳು ಈ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.

Read More
Next Story