ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ಅಂಕಗಳ ಬದಲು ಗ್ರೇಡಿಂಗ್ ; ಕರಡು ಅಧಿಸೂಚನೆ ಪ್ರಕಟ
x
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಸಾಂದರ್ಭಿಕ ಚಿತ್ರ

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ಅಂಕಗಳ ಬದಲು ಗ್ರೇಡಿಂಗ್ ; ಕರಡು ಅಧಿಸೂಚನೆ ಪ್ರಕಟ

80 ರಿಂದ 100 ಅಂಕ ಗಳಿಸಿದವರಿಗೆ ಎ ಗ್ರೇಡ್, 50 ರಿಂದ 79 ಅಂಕ ಗಳಿಸಿದವರಿಗೆ ಬಿ ಗ್ರೇಡ್, 49 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಸಿ ಗ್ರೇಡ್ ನೀಡಲಾಗುತ್ತದೆ. ಪಾಸು ಅಥವಾ ಫೇಲ್ ಎಂಬುದನ್ನು ನಮೂದಿಸುವುದಿಲ್ಲ.


ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ.

ಅಂಕಗಳ ಬದಲಾಗಿ 'ಗ್ರೇಡ್' ನೀಡುವ ಕರಡು ಅಧಿಸೂಚನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳ ಪ್ರಮಾಣ 625ರ ಬದಲಿಗೆ 525ಕ್ಕೆ ಸೀಮಿತವಾಗಲಿದೆ.

ಏನಿದು ಹೊಸ ಗ್ರೇಡಿಂಗ್ ಪದ್ಧತಿ?

ಕರಡು ಅಧಿಸೂಚನೆಯ ಪ್ರಕಾರ, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುತ್ತದೆ.

80 ರಿಂದ 100 ಅಂಕ ಗಳಿಸಿದವರಿಗೆ ಎ ಗ್ರೇಡ್, 50 ರಿಂದ 79 ಅಂಕ ಗಳಿಸಿದವರಿಗೆ ಬಿ ಗ್ರೇಡ್, 49 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಸಿ ಗ್ರೇಡ್ ನೀಡಲಾಗುತ್ತದೆ. ತೃತೀಯ ಭಾಷೆಯ ವಿಷಯದಲ್ಲಿ ಪಾಸು ಅಥವಾ ಫೇಲ್ ಎಂಬುದನ್ನು ನಮೂದಿಸುವುದಿಲ್ಲ. ಈ ಗ್ರೇಡ್ ಗಳು ಕೂಡ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ತೃತೀಯ ಭಾಷೆಯನ್ನು ಗ್ರೇಡಿಂಗ್ ವ್ಯವಸ್ಥೆಗೆ ತರುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದೆ. ಸಾರ್ವಜನಿಕರು ಈ ಕುರಿತು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನು 7 ದಿನಗಳ ಒಳಗಾಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪಿಐಎಲ್ ವಜಾ: ಅರ್ಜಿದಾರರಿಗೆ 1 ಲಕ್ಷ ದಂಡ

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೆಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಎಂಬುವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪರೀಕ್ಷೆಯ ಕೊನೆಯ ಹಂತದಲ್ಲಿ ಇಂತಹ ಬದಲಾವಣೆ ಮಾಡುವುದು ಸರಿಯಲ್ಲ ಎಂಬುದು ಅವರ ವಾದವಾಗಿತ್ತು.ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, "ಸರ್ಕಾರದ ಅಧಿಕೃತ ಆದೇಶದ ಪ್ರತಿ ನೀಡದೆ ಕೇವಲ ಪತ್ರಿಕಾ ವರದಿಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅರ್ಜಿಯನ್ನು ವಜಾಗೊಳಿಸಿತ್ತು.

ಎಸ್ಎಸ್ಎಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಏ. 24ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ಅಂಕಗಳ ಬದಲಿಗೆ ಗ್ರೇಡಿಂಗ್ ನೀಡುವ ನಿಯಮವು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ತೃತೀಯ ಭಾಷೆಯ ಅಂಕಗಳು ಇನ್ನು ಮುಂದೆ ರ‍್ಯಾಂಕ್ ಅಥವಾ ಒಟ್ಟು ಶೇಕಡಾವಾರು ಲೆಕ್ಕಾಚಾರಕ್ಕೆ ಸೇರುವುದಿಲ್ಲ. ಇದು ವಿದ್ಯಾರ್ಥಿಗಳ ಮೇಲಿನ ಓದಿನ ಹೊರೆ ತಗ್ಗಿಸಲಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.

Read More
Next Story