SSLC Evaluation | ಏ.5 ರಿಂದ ಎಸ್ಸೆಸ್ಸೆಲಿ ಮೌಲ್ಯಮಾಪನ; ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ
x

SSLC Evaluation | ಏ.5 ರಿಂದ ಎಸ್ಸೆಸ್ಸೆಲಿ ಮೌಲ್ಯಮಾಪನ; ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

ರಾಜಕೀಯ ಮುಖಂಡರು, ಸಂಘಟನೆಗಳ ಸದಸ್ಯರು ಅಥವಾ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.


2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಪ್ರಕ್ರಿಯೆ ಏ.5 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಮಗ್ರ ಮಾರ್ಗಸೂಚಿ ಹೊರಡಿಸಿದೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಸಿಸಿಟಿವಿ ಕಣ್ಗಾವಲು ಹಾಗೂ ಬಿಗಿ ಪೊಲೀಸ್ ಭದ್ರತೆ ಒದಗಿಸುವಂತೆ ಸೂಚಿಸಿದೆ.

ಮೌಲ್ಯಮಾಪನ ಕಾರ್ಯ ಸುಗಮವಾಗಿ ನಡೆಯಲು ಅಧಿಕಾರಿಗಳ ಹಾಜರಾತಿಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಏ.3 ರಂದು ಕೇಂದ್ರದ ವ್ಯವಸ್ಥಾಪಕರು ಬೆಳಿಗ್ಗೆ 9ಕ್ಕೆ ಹಾಜರಾಗಬೇಕು. ಏ.4 ರಂದು ಬೆಳಿಗ್ಗೆ 10.30ಕ್ಕೆ ಜಂಟಿ ಮುಖ್ಯ ಮೌಲ್ಯಮಾಪಕರ ವಿಡಿಯೋ ಸಂವಾದ ಇರಲಿದೆ. ಏ.5 ರಂದು ಬೆಳಿಗ್ಗೆ 10 ರಿಂದ ಜಂಟಿ ಮತ್ತು ಉಪ ಮುಖ್ಯ ಮೌಲ್ಯಮಾಪಕರು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದಾರೆ. ಏ.6 ರಂದು ಬೆಳಿಗ್ಗೆ 9ಕ್ಕೆ ಸಹಾಯಕ ಮೌಲ್ಯಮಾಪಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಪರೀಕ್ಷಾ ಮಂಡಳಿ ಆದೇಶಿಸಿದೆ.

ಕೇಂದ್ರದೊಳಗೆ ಮೊಬೈಲ್‌ ಬಳಕೆ ನಿಷೇಧ

ಮೌಲ್ಯಮಾಪನ ಕೇಂದ್ರದೊಳಗೆ ಮೊಬೈಲ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮೌಲ್ಯಮಾಪಕರು ಕೇಂದ್ರಕ್ಕೆ ಆಗಮಿಸಿದ ತಕ್ಷಣ ತಮ್ಮ ಮೊಬೈಲ್ಗಳನ್ನು ಜಂಟಿ ಮುಖ್ಯ ಮೌಲ್ಯಮಾಪಕರಿಗೆ ಒಪ್ಪಿಸಬೇಕು. ಮೌಲ್ಯಮಾಪನದ ಗೌಪ್ಯತೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

ಸಂದರ್ಶಕರಿಗೆ ನಿರ್ಬಂಧ, ಬಿಗಿ ಭದ್ರತೆ

ಮೌಲ್ಯಮಾಪನ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು. ರಾಜಕೀಯ ಮುಖಂಡರು, ಸಂಘಟನೆಗಳ ಸದಸ್ಯರು ಅಥವಾ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದು ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.

ಮೌಲ್ಯಮಾಪಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ

ಯಾವುದೇ ಖಾಸಗಿ ವ್ಯಕ್ತಿ ಅಥವಾ ಪ್ರಾಯೋಜಕರಿಂದ ಚಹಾ, ತಿಂಡಿ ಅಥವಾ ಊಟದ ಸೌಲಭ್ಯ ಪಡೆಯುವುದನ್ನು ನಿಷೇಧಿಸಲಾಗಿದೆ. ಮೌಲ್ಯಮಾಪನ ಮುಗಿದ ನಂತರ ವಿದ್ಯಾರ್ಥಿಗಳು ಫೋಟೋಕಾಪಿ ಕೋರಿದಾಗ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅದಕ್ಕೆ ಸಂಬಂಧಪಟ್ಟ ಮೌಲ್ಯಮಾಪಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಕೇಂದ್ರಗಳಲ್ಲಿ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಹಾಗೂ ಜನರೇಟರ್ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೌಲ್ಯಮಾಪನ ಕೇಂದ್ರಗಳಲ್ಲಿ ಶಿಕ್ಷಕರು ಸಭೆ ನಡೆಸುವಂತಿಲ್ಲ, ವ್ಯವಸ್ಥಾಪಕರು ಸಕಾಲದಲ್ಲಿ ಉತ್ತರ ಪತ್ರಿಕೆಗಳ ಬಂಡಲುಗಳನ್ನು ಪಡೆದು ದಾಸ್ತಾನು ಮಾಡಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಮೌಲ್ಯಮಾಪನ ಕೇಂದ್ರದ ವ್ಯವಸ್ಥಾಪಕರಿಗೆ ಸಹಾಯಕರಾಗಿ ಇಬ್ಬರು ಕಾರ್ಯನಿರ್ವಾಹಕರು ಮತ್ತು ಇಬ್ಬರು ಡಿ-ಗ್ರೂಪ್ ನೌಕರರನ್ನು ಸ್ಥಳೀಯ ಶಾಲೆಗಳಿಂದ ನಿಯೋಜಿಸಿಕೊಳ್ಳಬೇಕು. ಮೌಲ್ಯಮಾಪನ ಕಾರ್ಯಕ್ಕೆ ಆಯ್ಕೆಯಾದವರಲ್ಲಿ ಅನರ್ಹತೆಗೆ ಒಳಪಡುವಂತಹ ಶಿಕ್ಷಕರಿದ್ದಲ್ಲಿ ಅಂತಹವರಿಂದ ಮೌಲ್ಯಮಾಪನ ಕಾರ್ಯ ಮಾಡಿಸಬಾರದು ಎಂದು ಸೂಚಿಸಲಾಗಿದೆ.

ವರ್ಗಾವಣೆಗೊಂಡ ಶಿಕ್ಷಕರಿಗೆ ಸೂಚನೆ

ಯಾವ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೋ, ಅವರು ವರ್ಗಾವಣೆಗೊಂಡಿದ್ದರೂ ಸಹ ಮೊದಲು ಮೌಲ್ಯಮಾಪನ ಕಾರ್ಯ ಮುಗಿಸಿ, ನಂತರವೇ ಹೊಸ ಸ್ಥಳಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.

Read More
Next Story