Internal Reservation: ದಲಿತರಿಗೆ ಒಳಮೀಸಲಾತಿ:ವಿಶೇಷ ಸಚಿವ ಸಂಪುಟ ಸಭೆ  ದಿಡೀರ್‌ ರದ್ದು
x

Internal Reservation: ದಲಿತರಿಗೆ ಒಳಮೀಸಲಾತಿ:ವಿಶೇಷ ಸಚಿವ ಸಂಪುಟ ಸಭೆ ದಿಡೀರ್‌ ರದ್ದು

ಒಳಮೀಸಲಾತಿ ವಿಚಾರದಲ್ಲಿ ಎಡ, ಬಲಗೈ ಸಮುದಾಯ ನಡುವಿನ ತೀವ್ರ ತಿಕ್ಕಾಟ ಹಿನ್ನೆಲೆ ತೀರ್ಮಾನ ಕೈಗೊಳ್ಳುವುದು ಕಷ್ಟಕರ ಎಂಬ ಕಾರಣಕ್ಕಾಗಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮುಂದೂಡಿಕೆ ಮಾಡಲಾಗಿದೆ


Click the Play button to hear this message in audio format

ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸುವ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ರಾಜ್ಯ ಸರ್ಕಾರವು ಉಪಚುನಾವಣೆ ನೆಪದಲ್ಲಿ ದಿಢೀರ್ ಮುಂದೂಡಿದೆ. ಶುಕ್ರವಾರ (ಮಾ.27) ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಮಹತ್ವದ ಸಚಿವ ಸಂಪುಟದ ವಿಶೇಷ ಸಭೆಯು, ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ನೀತಿ ಸಂಹಿತೆಯ ಕಾರಣಕ್ಕೆ ಮುಂದಕ್ಕೆ ಹಾಕಿದೆ.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿರುವುದು ಈ ತೀರ್ಮಾನಕ್ಕೆ ಮುಖ್ಯ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಒಳಮೀಸಲಾತಿ ವಿಚಾರದಲ್ಲಿ ಎಡ ಮತ್ತು ಬಲಗೈ ಸಮುದಾಯ ನಡುವಿನ ತೀವ್ರ ತಿಕ್ಕಾಟ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದು ಕಷ್ಟಕರ ಎಂಬ ಕಾರಣಕ್ಕಾಗಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಭಾರತೀಯ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಚುನಾವಣೆ ಘೋಷಣೆಯಾದ ನಂತರ ಸರ್ಕಾರವು ಯಾವುದೇ ಹೊಸ ನೀತಿಗಳನ್ನು ಅಥವಾ ಮತದಾರರ ಮೇಲೆ ಪ್ರಭಾವ ಬೀರಬಲ್ಲ ದೊಡ್ಡ ಘೋಷಣೆಗಳನ್ನು ಮಾಡುವಂತಿಲ್ಲ. ಮೀಸಲಾತಿಯಂತಹ ಅತ್ಯಂತ ಪ್ರಭಾವಶಾಲಿ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವುದು ನೀತಿ ಸಂಹಿತೆಯ ನೇರ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಸರ್ಕಾರವು ತೀರ್ಮಾನ ಕೈಗೊಂಡರೆ, ಅದನ್ನು ವಿರೋಧ ಪಕ್ಷಗಳು ಪ್ರಶ್ನಿಸಬಹುದು ಅಥವಾ ಚುನಾವಣಾ ಆಯೋಗವು ಸರ್ಕಾರಕ್ಕೆ ನೋಟಿಸ್ ನೀಡಬಹುದು. ಹೀಗಾಗಿ, ಕಾನೂನಾತ್ಮಕ ತೊಡಕುಗಳನ್ನು ತಪ್ಪಿಸಲು ಸರ್ಕಾರವು ಸಭೆಯನ್ನು ಮುಂದೂಡಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಉಪಜಾತಿಗಳಿವೆ. ಇದರಲ್ಲಿ ಪ್ರಮುಖವಾಗಿ ಎಡಗೈ, ಬಲಗೈ, ಸ್ಪರ್ಶ್ಯ ಮತ್ತು ಇತರ ಸಮುದಾಯಗಳಿವೆ. ನ್ಯಾ.ನಾಗಮೋಹನ್‌ ದಾಸ್‌ ವರದಿಗೆ ಪರಿಶಿಷ್ಟ ಜಾತಿಯಲ್ಲಿಯೇ ಭಿನ್ನಾಭಿಪ್ರಾಯ ಇದೆ. ವರದಿಯನ್ನು ತಿರಸ್ಕರಿಸಿ ಮರುಪರಿಶೀಲನೆ ನಡೆಸಬೇಕು ಎಂಬುದು ಸಮುದಾಯದ ಒತ್ತಡವಾಗಿದೆ.

ಮುಂದೂಡಲ್ಪಟ್ಟ ಸಭೆಯ ಹಿಂದೆ ಕೇವಲ ತಾಂತ್ರಿಕ ಕಾರಣಗಳಲ್ಲದೆ ರಾಜಕೀಯ ಲೆಕ್ಕಾಚಾರಗಳೂ ಇವೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಗಲಕೋಟೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಒಳ ಮೀಸಲಾತಿ ಘೋಷಣೆ ಮಾಡಿದರೆ ಒಂದು ವರ್ಗದ ಮತಗಳು ಲಭಿಸಬಹುದು, ಆದರೆ ಇನ್ನೊಂದು ವರ್ಗದ ವಿರೋಧ ಕಟ್ಟಿಕೊಳ್ಳುವ ಆತಂಕವೂ ಇರುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿಯೂ ಸಹ ಸಮುದಾಯಗಳ ನಡುವಿನ ಧ್ರುವೀಕರಣವು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ, ಉಪಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಸರ್ಕಾರವು ಈ ಸೂಕ್ಷ್ಮ ವಿಷಯವನ್ನು ಚುನಾವಣೆ ಮುಗಿಯುವವರೆಗೆ ಕಾಯ್ದಿರಿಸಿದೆ ಎನ್ನಲಾಗಿದೆ.

Read More
Next Story