Shakti Scheme Effect| ಕೆಎಸ್ಆರ್‌ಟಿಸಿ, ಬಿಎಂಟಿಸಿಗೆ ಇಕ್ಕಟ್ಟು , ಖಾಸಗಿ ಬಸ್‌ಗಳಿಗೆ ಕುತ್ತು
x

ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

Shakti Scheme Effect| ಕೆಎಸ್ಆರ್‌ಟಿಸಿ, ಬಿಎಂಟಿಸಿಗೆ ಇಕ್ಕಟ್ಟು , ಖಾಸಗಿ ಬಸ್‌ಗಳಿಗೆ ಕುತ್ತು

ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ನಿಗಮಗಳ ಬಸ್ ಗಳಲ್ಲಿ ದೈನಂದಿನ ಒಟ್ಟು ಪ್ರಯಾಣಿಕರ ಸಂಖ್ಯೆ 82 ಲಕ್ಷದಿಂದ 1.09 ಕೋಟಿ ದಾಟಿದೆ. ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ಬಸ್‌ಗಳು ಹಾಳಾಗುತ್ತಿವೆ.


ಉಚಿತ ಬಸ್ ಪ್ರಯಾಣದ ʼಶಕ್ತಿ ಯೋಜನೆʼ ಸಾರಿಗೆ ನಿಗಮಗಳ ಆರ್ಥಿಕ ಶಿಸ್ತು ಹಾಗೂ ಖಾಸಗಿ ಬಸ್ ಉದ್ಯಮದ ಆದಾಯದ ಬೆನ್ನೆಲುಬನ್ನೇ ಮುರಿದು ಹಾಕುತ್ತಿದೆ.

ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಕೊಟ್ಟಿರುವ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದರೂ ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಸ್ಥೆಗಳನ್ನು ದೊಡ್ಡ ಪ್ರಮಾಣದ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಈ ಸಂಸ್ಥೆಗಳು ನಗದು ಹಾಗೂ ಅನುದಾನ ಕೊರತೆಯಿಂದ ತತ್ತರಿಸುತ್ತಿವೆ. ಮತ್ತೊಂದೆಡೆ ದಶಕಗಳಿಂದ ಕರಾವಳಿ ಮತ್ತು ಮಲೆನಾಡಿನ ಜೀವನಾಡಿಯಾಗಿದ್ದ ಖಾಸಗಿ ಬಸ್ ಉದ್ಯಮ ಇದೀಗ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ.

ಕೋಟ್ಯಂತರ ರೂ. ಅನುದಾನ ಬಾಕಿ

ಶಕ್ತಿ ಯೋಜನೆ ಆರಂಭಿಸಿದಾಗ ಮಹಿಳಾ ಪ್ರಯಾಣಿಕರ ಸಂಪೂರ್ಣ ಟಿಕೆಟ್ ವೆಚ್ಚ ಮರುಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಅನುದಾನ ಬಿಡುಗಡೆ ಮಾಡುವಲ್ಲಿ ತೀವ್ರ ವಿಳಂಬವಾಗುತ್ತಿದ್ದು, ನಿಗಮಗಳನ್ನು ಸಾಲದ ಸುಳಿಗೆ ದೂಡಿದೆ.

ಪ್ರಸಕ್ತ ಸಾಲಿನವರೆಗೆ ರಾಜ್ಯ ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಅನುದಾನ ಬರೋಬ್ಬರಿ 4ರಿಂದ 5 ಸಾವಿರ ಕೋಟಿ ದಾಟಿದೆ. ಇನ್ನು ಬಿಎಂಟಿಸಿಗೆ ಸುಮಾರು 850 ಕೋಟಿ ರೂ. ಬಾಕಿ ಬರಬೇಕಿದೆ. ಇದರಿಂದ ಈ ಸಾರಿಗೆ ನಿಗಮಗಳು ದೈನಂದಿನ ಕಾರ್ಯನಿರ್ವಹಣೆಯ ಬಂಡವಾಳಕ್ಕೂ ಪರದಾಡಬೇಕಾಗಿದೆ.

ʼಶಕ್ತಿ ಯೋಜನೆʼಗೂ ಮುನ್ನ ಬಸ್ ನಿರ್ವಾಹಕರು ಪ್ರಯಾಣಿಕರಿಂದ ನೇರವಾಗಿ ನಗದು ಸಂಗ್ರಹಿಸುತ್ತಿದ್ದರು. ಇದು ಸಂಸ್ಥೆಗಳಿಗೆ ಇಂಧನ ಖರೀದಿ, ತುರ್ತು ನಿರ್ವಹಣೆ ಮತ್ತು ದಿನಗೂಲಿ ನೌಕರರ ವೇತನ ಪಾವತಿಸಲು ತಕ್ಷಣದ ನಗದು ಲಭ್ಯತೆ ಒದಗಿಸುತ್ತಿತ್ತು.

ಈಗ ಮಹಿಳಾ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸಿಗುತ್ತಿದೆ. ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ದಟ್ಟಣೆಯಿಂದಾಗಿ ಪುರುಷ ಪ್ರಯಾಣಿಕರ ಪ್ರಮಾಣವೂ ಶೇ. 48 ರಿಂದ ಶೇ. 36 ಕ್ಕೆ ಕುಸಿದಿದೆ. ವಿಪರೀತ ಜನದಟ್ಟಣೆ ಹಿನ್ನೆಲೆಯಲ್ಲಿ ಅನೇಕರು ಖಾಸಗಿ ವಾಹನಗಳು ಅಥವಾ ಆನ್ ಲೈನ್ ಫ್ಲಾಟ್ ಫಾರಂ ನಲ್ಲಿ ಪ್ರಯಾಣ ಸೇವೆ ಒದಗಿಸುವ ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.ಇದು ಕೂಡ ಸಾರಿಗೆ ಸಂಸ್ಥೆಗಳನ್ನು ಆರ್ಥಿಕ ನಷ್ಟಕ್ಕೆ ದೂಡಿದೆ.

ಹೆಚ್ಚಾದ ಪ್ರಯಾಣಿಕರ ಓಡಾಟ

ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ನಿಗಮಗಳ ಬಸ್ ಗಳಲ್ಲಿ ದೈನಂದಿನ ಒಟ್ಟು ಪ್ರಯಾಣಿಕರ ಸಂಖ್ಯೆ 82 ಲಕ್ಷದಿಂದ 1.09 ಕೋಟಿ ದಾಟಿದೆ. ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ಬಸ್‌ಗಳು ಹಾಳಾಗುತ್ತಿವೆ. ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹಳೆಯ ಬಸ್ಗಳನ್ನು ನವೀಕರಿಸುವುದು, ಮಾರ್ಗಗಳ ಬದಲಾವಣೆ ಹಾಗೂ ಸಾವಿರಾರು ಹೊಸ ಎಲೆಕ್ಟ್ರಿಕ್ ಮತ್ತು ಡೀಸೆಲ್ ಬಸ್ಗಳನ್ನು ಖರೀದಿಸುವುದು ನಿಗಮಗಳಿಗೆ ಅನಿವಾರ್ಯವಾಗಿದೆ. ಇದಕ್ಕೂ ಕೂಡ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಇನ್ನು ಕೋವಿಡ್ ಅವಧಿಯಲ್ಲಾದ ನಷ್ಟ, ನೌಕರರ ಶೇ. 12.5 ರಷ್ಟು ವೇತನ ಪರಿಷ್ಕರಣೆ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಲೂ ಸಾರಿಗೆ ಸಂಸ್ಥೆಗಳು ಲಾಭದತ್ತ ಹೊರಳಲು ಹೆಣಗಾಡುತ್ತಿವೆ

ಖಾಸಗಿ ಉದ್ಯಮಕ್ಕೆ ಮರಣಶಾಸನ

ಸರ್ಕಾರಿ ಬಸ್ಗಳು ನಗದು ಕೊರತೆ ಎದುರಿಸುತ್ತಿದ್ದರೆ, ಖಾಸಗಿ ಬಸ್ ಉದ್ಯಮ ಮಾತ್ರ ಮುಚ್ಚಿಹೋಗುವ ಹಂತ ತಲುಪಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಳೆಯ ಮೈಸೂರು ಭಾಗದಲ್ಲಿ ಖಾಸಗಿ ಬಸ್ಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಪ್ರಸ್ತುತ ಶೇ 30 ರಷ್ಟು ಖಾಸಗಿ ಬಸ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಉಳಿದಿ ಶೇ 70 ರಷ್ಟು ಬಸ್ಗಳು ಸಂಚಾರವನ್ನೇ ಸ್ಥಗಿತಗೊಳಿಸಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್ಗಳಿಗೆ ಶೇ. 50 ರಿಂದ 60 ರಷ್ಟು ಮಹಿಳೆಯರು ಮತ್ತು ವಿದ್ಯಾರ್ಥಿಗಳೇ ಪ್ರಮುಖ ಆಧಾರವಾಗಿದ್ದರು. ಈಗ ಶಕ್ತಿ ಯೋಜನೆ ಬಂದ ತಕ್ಷಣ ಇವರೆಲ್ಲರೂ ಸರ್ಕಾರಿ ಬಸ್ಗಳತ್ತ ಹೋಗಿರುವುದು ಕೂಡ ದೊಡ್ಡ ಹೊಡೆತ ನೀಡಿದೆ.

ಸರ್ಕಾರಿ ನಿಗಮಗಳಂತೆ ಖಾಸಗಿ ಆಪರೇಟರ್ಗಳಿಗೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ. ಇಷ್ಟಾದರೂ ಅವರು ಪ್ರತಿ ತ್ರೈಮಾಸಿಕಕ್ಕೆ 80 ಸಾವಿರದಿಂದ 1.5 ಲಕ್ಷದವರೆಗೆ ಭಾರೀ ಮೋಟಾರು ವಾಹನ ತೆರಿಗೆ ಪಾವತಿಸಬೇಕಿದೆ. ಇದರಿಂದ ನಷ್ಟ ಭರಿಸಲಾಗದೇ ನೂರಾರು ಮಾಲೀಕರು ಬಸ್ ಕಾರ್ಯಾಚರಣೆ ಸ್ಥಗಿತಕ್ಕಾಗಿ ಜಿ-ಫಾರ್ಮ್ (ಮೋಟಾರು ವಾಹನ ಬಳಸದಿರುವುದರ ಬಗ್ಗೆ ಘೋಷಣೆ ಪತ್ರ) ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಖಾಸಗಿ ಬಸ್ಗಳದ್ದೇ ಕಾರುಬಾರಿತ್ತು. ಈಗ ಅಲ್ಲೂ ಕೂಡ ಕರ್ನಾಟಕದ ಶಕ್ತಿ ಯೋಜನೆ, ಕೇರಳದ ಪ್ರಿಯದರ್ಶಿನಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಕಂಗಾಲಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್‌ಗಳಂತೆ ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸಿ, ಟಿಕೆಟ್ ಆಧಾರದ ಮೇಲೆ ಮರುಪಾವತಿ ಮಾಡಲಿ ಎಂದು ಖಾಸಗಿ ಬಸ್ ಮಾಲೀಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಪ್ರಮುಖವಾಗಿ ಕರಾವಳಿಯ ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ, ಹಾವೇರಿ ಭಾಗದಲ್ಲಿ ಹೆಚ್ಚು ಖಾಸಗಿ ಬಸ್ ಗಳು ಸಂಚರಿಸುತ್ತಿದ್ದವು. ಈಗ ಅಲ್ಲೂ ಬಸ್‌ಗಳ ಸಂಖ್ಯೆ ಕ್ಷೀಣಿಸಿದೆ.

ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬರೋಬ್ಬರಿ 23 ಸಾವಿರಕ್ಕೂ ಹೆಚ್ಚು ಬಸ್‌ಗಳಿವೆ. ಆದರೆ, ಇವುಗಳಲ್ಲಿ ಪರ್ಮಿಟ್ ಇರುವುದು ಕೇವಲ 7-8 ಸಾವಿರ ಬಸ್‌ಗಳಿಗೆ ಮಾತ್ರ. ಉಳಿದವು ಅನಧಿಕೃತವಾಗಿ ಸಂಚರಿಸುತ್ತಿವೆ. ಅಲ್ಲದೇ ಶಕ್ತಿ ಯೋಜನೆ ಬಂದ ಮೇಲೆ ಸಂಚಾರಕ್ಕೆ ಯೋಗ್ಯವಲ್ಲದ ಬಸ್‌ಗಳನ್ನೂ ಬಳಸಲಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ ಶರ್ಮಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮತ್ತೊಂದು ಬರೆ

ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿದರೆ ಎಲ್ಲ ಕಡೆ ಖಾಸಗಿ ಬಸ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ದಕ್ಷಿಣ ಕನ್ನಡದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಖ್ಯೆ ಕೇವಲ ಶೇ 20 ಇದ್ದರೆ, ಖಾಸಗಿ ಬಸ್‌ಗಳ ಪ್ರಮಾಣ ಶೇ 80 ರಷ್ಟಿದೆ. ಹಾಗಾಗಿ, ಅಲ್ಲಿ ಹೆಚ್ಚೇನೂ ಹೊಡೆತ ಬಿದ್ದಿಲ್ಲ. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮಹಿಳೆಯರ ಜೊತೆಗೆ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಸೌಲಭ್ಯ ಒದಗಿಸುವುದರಿಂದ ಖಾಸಗಿ ಉದ್ಯಮ ಇನ್ನಷ್ಟು ತಳ ಕಚ್ಚುವುದು ಖಚಿತ. ಪ್ರಸ್ತುತ, ಬರುತ್ತಿರುವ ಆದಾಯ ಡೀಸೆಲ್‌ಗೂ ಆಗುವುದಿಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಪಿಪಿಪಿ ಮಾದರಿ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ದೊಡ್ಡ ಹಗರಣ ನಡೆಸುತ್ತಿದೆ. ಸಾಮಾನ್ಯವಾಗಿ ಒಂದು ಎಲೆಕ್ಟ್ರಿಕ್ ಬಸ್‌ಗೆ 1.40 ಕೋಟಿ ಮೌಲ್ಯವಿದೆ. ಆದರೆ, ಸರ್ಕಾರ 2 ಕೋಟಿ ರೂ. ಕೊಟ್ಟು ಖರೀದಿಸುತ್ತಿದೆ. ಇದಲ್ಲದೇ ಹಸಿರು ಇಂಧನ ಹೆಸರಲ್ಲಿ ಉತ್ಪಾದಕರಿಗೆ ಉತ್ತೇಜನ ನೀಡಲು ಶೇ 40 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಜತೆಗೆ ರಸ್ತೆ ತೆರಿಗೆಗೂ ವಿನಾಯ್ತಿ ನೀಡಲಾಗಿದೆ. ಇಂತಹ ಕ್ರಮಗಳಿಂದಾಗಿ ಸರ್ಕಾರವೇ ಖಾಸಗಿ ಸಾರಿಗೆ ಉದ್ಯಮದ ಕತ್ತು ಹಿಸುಕುತ್ತಿದೆ. ಈ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಜನರ ಬದುಕನ್ನು ಬೀದಿಗೆ ತರುತ್ತಿದೆ ಎಂದು ಆರೋಪಿಸಿದರು.

ಇನ್ನು ಕೇಂದ್ರ ಸರ್ಕಾರವು ಅಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಜಾರಿಗೆ ತಂದಿದ್ದು, ಇದೂ ಕೂಡ ದೊಡ್ಡ ಅಕ್ರಮಕ್ಕೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ಪರ್ಮಿಟ್ ಪಡೆಯಬೇಕಾದರೆ ದುಬಾರಿ ತೆರಿಗೆ ಪಾವತಿಸಬೇಕು. ಅದೇ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿದರೆ ಅಲ್ಲಿ ಕಡಿಮೆ ತೆರಿಗೆ ಇರಲಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ಅಕ್ರಮಕ್ಕೆ ಇಳಿಯುತ್ತಿದ್ದಾರೆ. ಬಸ್‌ಗಳು ಯಾವ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿವೆಯೇ ಆ ರಾಜ್ಯಕ್ಕೆ 60 ದಿನಗಳಿಗೆ ಒಮ್ಮೆ ಹೋಗಬೇಕೆಂಬ ನಿಯಮವಿದೆ. ಆದರೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ರಾಜೀ ಮಾಡಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಇನ್ನು ಕೆಎಸ್ಆರ್ಟಿಸಿಯಲ್ಲಿ ಪ್ಯಾಸೆಂಜರ್ ಇಲ್ಲದಿದ್ದರೂ ಟಿಕೆಟ್ ಇಶ್ಯೂ ಮಾಡುವ ಪರಿಪಾಠವಿದೆ. ಇದರಿಂದ ಆ ಸಂಸ್ಥೆಗಳು ಲಾಭ ಗಳಿಸುತ್ತಿವೆ ಎಂದು ನಟರಾಜ ಶರ್ಮಾ ದೂರಿದರು.

Read More
Next Story