ಶಕ್ತಿ ಯೋಜನೆ| ಆರ್ಥಿಕ ನಷ್ಟದಲ್ಲಿ 4 ಸಾರಿಗೆ ನಿಗಮಗಳು; ಕೋಟ್ಯಂತರ ರೂ. ಬಡ್ಡಿ ಪಾವತಿ
x
ಶಕ್ತಿ ಯೋಜನೆ

ಶಕ್ತಿ ಯೋಜನೆ| ಆರ್ಥಿಕ ನಷ್ಟದಲ್ಲಿ 4 ಸಾರಿಗೆ ನಿಗಮಗಳು; ಕೋಟ್ಯಂತರ ರೂ. ಬಡ್ಡಿ ಪಾವತಿ

ಶಕ್ತಿ ಯೋಜನೆಯ ಯಶಸ್ಸಿನ ನಡುವೆಯೂ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ.


Click the Play button to hear this message in audio format

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಬಹುಮುಖ್ಯವಾದ ‘ಶಕ್ತಿ’ ಯೋಜನೆ ಜಾರಿಯಿಂದ ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ.

2023 ಜೂನ್ 11ರಿಂದ ಚಾಲನೆ ಪಡೆದ ಶಕ್ತಿ ಯೋಜನೆಯಡಿ ಫೆ.2026ರವರೆಗೆ ಒಟ್ಟು 680.87 ಕೋಟಿ ಮಹಿಳಾ ಫಲಾನುಭವಿಗಳು ಉಚಿತವಾಗಿ ಪ್ರಯಾಣಿಸಿದ್ದಾರೆ. ಉಚಿತ ಪ್ರಯಾಣದ ಒಟ್ಟು ವೆಚ್ಚ ಬರೋಬ್ಬರಿ 1,76,474.99 ಕೋಟಿ ರೂ. ಗಳಾಗಿದ್ದು, ಈ ಪೈಕಿ ಸರ್ಕಾರವು ಈವರೆಗೆ 1,30,737.49 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಉಳಿದ ಸುಮಾರು 45,737 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಫೆಬ್ರವರಿ ತಿಂಗಳಿಂದ ಮುಂಗಡವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಆರ್ಥಿಕ ಸಂಕಷ್ಟದಲ್ಲಿ ಸಾರಿಗೆ ನಿಗಮಗಳು

ಶಕ್ತಿ ಯೋಜನೆಯ ಯಶಸ್ಸಿನ ನಡುವೆಯೂ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ.

2023ರ ಮೇ ತಿಂಗಳವರೆಗೆ ನಾಲ್ಕೂ ನಿಗಮಗಳು ಒಟ್ಟು 4,099.38 ಕೋಟಿ ರೂ. ಗಳಷ್ಟು ಬಾಕಿ ಉಳಿಸಿಕೊಂಡಿವೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿಗಳ ವೇತನ ಪರಿಷ್ಕರಣೆ ಮತ್ತು ವಾಹನ ಬಿಡಿಭಾಗಗಳ ವೆಚ್ಚ ಹೆಚ್ಚಾಗಿರುವುದರಿಂದ ನಿಗಮಗಳ ಮೇಲೆ ಶಕ್ತಿ ಯೋಜನೆ ಮತ್ತಷ್ಟು ಆರ್ಥಿಕ ಹೊರೆ ಹಾಕಿದೆ ಎಂಬ ದೂರುಗಳು ಕೇಳಿಬಂದಿವೆ.

ಮಾಸಿಕ ಸರಾಸರಿ 2 ಕೋಟಿ ಬಡ್ಡಿ ಪಾವತಿ

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು, ಹೊಸ ಬಸ್‌ಗಳ ಖರೀದಿ, ಇಂಧನ ವೆಚ್ಚ, ಸಂಸ್ಥೆಯ ಬಂಡವಾಳ ವೆಚ್ಚ ಹಾಗೂ ಭವಿಷ್ಯ ನಿಧಿ ಬಾಕಿ ತೀರುವಳಿಗಾಗಿ ಪಡೆದಿರುವ ಸಾಲಕ್ಕೆ ದೊಡ್ಡ ಮೊತ್ತದ ಬಡ್ಡಿ ಪಾವತಿಸಲಾಗುತ್ತಿದೆ. 2024-25ರಲ್ಲಿ ಕೆಎಸ್‌ಆರ್‌ಟಿಸಿ ನಿಗಮವೊಂದೇ ಪ್ರತಿ ತಿಂಗಳು ಸುಮಾರು 1.97 ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ.

ಕೆಎಸ್‌ಆರ್‌ಟಿಸಿ ನಿಗಮವು 2020-21ರಲ್ಲಿ 2.63 ಕೋಟಿ ರೂ,. 2021-22 ರಲ್ಲಿ 2.13ಕೋಟಿ ರೂ., 2022-23 ರಲ್ಲಿ 1.63 ಕೋಟಿ ರೂ., 2023-24ರಲ್ಲಿ 1.20 ಕೋಟಿ ರೂ. ಬಡ್ಡಿ ಪಾವತಿಸಿದೆ. ಅದೇ ರೀತಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2020-21 ರಲ್ಲಿ 1.82 ಕೋಟಿ ರೂ., 2021-22ರಲ್ಲಿ 1.77 ಕೋಟಿ ರೂ., 2022-23ರಲ್ಲಿ 1.45 ಕೋಟಿ ರೂ, 2023-24 ರಲ್ಲಿ 1.08 ಕೋಟಿ ಹಾಗೂ 2024-25 ರಲ್ಲಿ 73 ಲಕ್ಷ ರೂ. ಬಡ್ಡಿ ಪಾವತಿಸಿದೆ.

ಬಿಎಂಟಿಸಿ ಸಂಸ್ಥೆಯು 2020-21 ರಲ್ಲಿ 4.80 ಕೋಟಿ ರೂ., 2021-22ರಲ್ಲಿ 5.69 ಕೋಟಿ ರೂ, 2022-23 ರಲ್ಲಿ 4.99 ಕೋಟಿ ರೂ., 2023-24ರಲ್ಲಿ4.01 ಕೋಟಿ ರೂ, 2024-25 ರಲ್ಲಿ 2.24 ಕೋಟಿ ರೂ. ಬಡ್ಡಿ ಪಾವತಿಸಲಾಗಿದೆ. ಕೆಕೆಆರ್‌ಟಿಸಿಯು 2020-21ರಲ್ಲಿ 62 ಲಕ್ಷ ಬಡ್ಡಿ ಪಾವತಿಸಿತ್ತು. 2023ರಿಂದ 2025ರವರೆಗೆ ಬಡ್ಡಿಯ ಮೊತ್ತ 1ಕೋಟಿ ರೂ. ದಾಟಿದೆ.

ನೆರವಿಗೆ ಧಾವಿಸಿದ ಸರ್ಕಾರ

ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ರಾಜ್ಯದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನೌಕರರ ಭವಿಷ್ಯ ನಿಧಿ ಮತ್ತು ಇಂಧನ ಬಾಕಿ ತೀರಿಸಲು ಸರ್ಕಾರಿ ಗ್ಯಾರಂಟಿಯೊಂದಿಗೆ 2,000 ಕೋಟಿ ರೂ. ಸಾಲ ಪಡೆಯಲು ಅನುಮೋದನೆ ನೀಡಲಾಗಿದ್ದು, ಈ ಸಾಲದ ಮೊತ್ತವನ್ನು ಸರ್ಕಾರವೇ ಮರುಪಾವತಿಸಲಿದೆ.

2023-24 ಮತ್ತು 2024-25ನೇ ಸಾಲಿನಲ್ಲಿ ನಿಗಮಗಳು ಪಾವತಿಸಬೇಕಿದ್ದ ಒಟ್ಟು 1,219.23 ಕೋಟಿ ರೂ. ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ನಿವೃತ್ತ ನೌಕರರ ಉಪಧನ ಮತ್ತು ರಜೆ ನಗದೀಕರಣಕ್ಕಾಗಿ 224.05 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಹೊಸ ಬಸ್‌ಗಳ ಸೇರ್ಪಡೆ

ಸಾರಿಗೆ ವ್ಯವಸ್ಥೆ ಬಲಪಡಿಸಲು 2025-26ನೇ ಸಾಲಿನ ಅಂತ್ಯದೊಳಗೆ ಸಾವಿರಾರು ಹೊಸ ಬಸ್ಸುಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆದಿದೆ. ಇದರಲ್ಲಿ 2,000 ಹೊಸ ಡೀಸೆಲ್ ಬಸ್ಸುಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಡಿ ವಿದ್ಯುತ್ ಚಾಲಿತ ಬಸ್ಸುಗಳ ಸೇರ್ಪಡೆಯೂ ಸೇರಿದೆ.

ವೇತನ ಪರಿಷ್ಕರಣೆ ಭರವಸೆ

ಕಳೆದ ಹಲವು ವರ್ಷಗಳಿಂದ ವೇತನ ಪರಿಷ್ಕರಣೆ ಕಾಣದ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 2021 ರಿಂದ 2023ರ ವರೆಗಿನ 26 ತಿಂಗಳ ಹಿಂಬಾಕಿ ಮೊತ್ತ 1,271.92 ಕೋಟಿ ರೂ. ಪಾವತಿಸಲು ಹಾಗೂ ಹೊಸ ವೇತನ ಪರಿಷ್ಕರಣೆ ಕುರಿತು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಲು ಫೆಬ್ರವರಿ 18, 2026 ರಂದು ಆದೇಶ ಹೊರಡಿಸಲಾಗಿದೆ.

Read More
Next Story