ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ; ಆದೇಶದ ಮರ್ಮವೇನು?
x
ವಿದ್ಯಾರ್ಥಿಗಳಿಂದ ಪತ್ರಿಕೆ ಓದು ಸಾಂದರ್ಭಿಕ ಚಿತ್ರ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ; ಆದೇಶದ ಮರ್ಮವೇನು?

ಮಕ್ಕಳಲ್ಲಿ ಶಬ್ದಕೋಶ ಹೆಚ್ಚುತ್ತದೆ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯವೂ ಸುಧಾರಿಸಲಿದೆ. ಅಲ್ಲದೇ ಸಮಾಜದ ವಿದ್ಯಮಾನಗಳನ್ನು ವಿಶ್ಲೇಷಿಸುವ ಸಾಮರ್ಥ್ಯವೂ ಬೆಳೆಯಲಿದೆ.


ಡಿಜಿಟಲ್ ಯುಗದಲ್ಲಿ ಪುಸ್ತಕ ಮತ್ತು ಪತ್ರಿಕೆಗಳಿಂದ ದೂರವಾಗುತ್ತಿರುವ ಶಾಲಾ ಮಕ್ಕಳಿಗೆ ಮತ್ತೆ ಓದಿನ ಅಭ್ಯಾಸ ರೂಢಿಸಲು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಕ್ರಮಕ್ಕೆ ಮುನ್ನುಡಿ ಬರೆದಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆ ವೇಳೆ ಕನಿಷ್ಠ 10 ನಿಮಿಷ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ಮೊಬೈಲ್ ವ್ಯಸನಕ್ಕೆ ಬ್ರೇಕ್ ಹಾಕಲು ಕ್ರಮ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಗೇಮ್ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಜ್ಞಾಪಕ ಶಕ್ತಿ ಕುಂದುವಿಕೆ, ಶ್ರವಣ ದೋಷ ಹಾಗೂ ದೈಹಿಕ ಚಟುವಟಿಕೆಗಳ ಬಗ್ಗೆ ನಿರಾಸಕ್ತಿಯಂತಹ ಗಂಭೀರ ಸಮಸ್ಯೆಗಳು ಕಂಡುಬರುತ್ತಿವೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ಪತ್ರಿಕೆ ಓದುವ ಹವ್ಯಾಸ ಬೆಳೆಸುವಂತೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಡಿ ನಡೆಯುವ ವಸತಿ ಶಾಲೆಗಳು, ಮಕ್ಕಳ ಪಾಲನಾ ಸಂಸ್ಥೆಗಳು ಮತ್ತು ಹಾಸ್ಟೆಲ್ಗಳಲ್ಲಿ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯು ಆದೇಶದಲ್ಲಿ ತಿಳಿಸಿದೆ.

ಪತ್ರಿಕೆ ಓದಿನ ಪ್ರಯೋಜನಗಳೇನು?

ಶಾಲೆಗಳಲ್ಲಿ ಪತ್ರಿಕೆ ಓದಿಸುವುದರಿಂದ ಕೇವಲ ಸುದ್ದಿ ತಿಳಿಯುವುದು ಮಾತ್ರವಲ್ಲದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದು ಇಲಾಖೆಯ ವಾದವಾಗಿದೆ.

ವಿದ್ಯಾರ್ಥಿಗಳಲ್ಲಿ ದೇಶ-ವಿದೇಶಗಳ ಪ್ರಚಲಿತ ವಿದ್ಯಮಾನಗಳ ಅರಿವು ಮೂಡಲಿದೆ. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಅಡಿಪಾಯ ಹಾಕಿದಂತಾಗಲಿದೆ. ಮಕ್ಕಳಲ್ಲಿ ಶಬ್ದಕೋಶ ಹೆಚ್ಚುತ್ತದೆ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯವೂ ಸುಧಾರಿಸಲಿದೆ. ಅಲ್ಲದೇ ಸಮಾಜದ ವಿದ್ಯಮಾನಗಳನ್ನು ವಿಶ್ಲೇಷಿಸುವ ಸಾಮರ್ಥ್ಯವೂ ಬೆಳೆಯಲಿದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಹಾಗೂ ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರಿಗಳ ಹದ್ದಿನ ಕಣ್ಣು

ಪತ್ರಿಕೆಯನ್ನು ಕಡ್ಡಾಯವಾಗಿ ಓದಿಸುವ ನಿಯಮವನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲು ಅಧಿಕಾರಿಗಳು ಶಾಲೆಗಳ ಮೇಲೆ ಹದ್ದಿನ ಕಣ್ಣಿರಿಸಲಿದ್ದಾರೆ.

ಇಲಾಖೆಯ ಆದೇಶವು ಕೇವಲ ಕಾಗದಕ್ಕಷ್ಟೇ ಸೀಮಿತವಾಗದೇ ಶಾಲಾ ಭೇಟಿಯ ಸಮಯದಲ್ಲಿ ಪತ್ರಿಕೆ ಓದಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

"ಓದುವ ಹವ್ಯಾಸವು ಮಕ್ಕಳಲ್ಲಿ ಸೃಜನಶೀಲತೆಯನ್ನು ಜಾಗೃತಗೊಳಿಸಲಿದೆ. ಡಿಜಿಟಲ್ ಜಗತ್ತಿನ ದುಷ್ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಿ, ಅವರನ್ನು ಸುಜ್ಞಾನಿಗಳನ್ನಾಗಿ ಮಾಡಲು ಈ ಉಪಕ್ರಮ ಸಹಕಾರಿಯಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಎದುರಾಗುವ ಸವಾಲುಗಳೇನು?

ಗ್ರಾಮೀಣ ಭಾಗದ ಸಣ್ಣ ಸರ್ಕಾರಿ ಶಾಲೆಗಳಿಗೆ ಪ್ರತಿದಿನ ಪತ್ರಿಕೆ ಖರೀದಿಸುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗಬಹುದು. ಇದಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕಾಗುತ್ತದೆ.

ಪತ್ರಿಕೆ ಓದುವುದನ್ನು ಕಡ್ಡಾಯ ಮಾಡುವುದರಿಂದ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಮೂಡುವುದಿಲ್ಲ. ಶಿಕ್ಷಕರು ಮಾರ್ಗದರ್ಶನ ನೀಡದಿದ್ದರೆ ಇದು ಕೇವಲ ಒಂದು ಔಪಚಾರಿಕ ಕ್ರಿಯೆಯಾಗಿ ಉಳಿಯುವ ಅಪಾಯವಿದೆ.

ಪತ್ರಿಕೆಗಳಲ್ಲಿ ಬರುವ ಅಪರಾಧ ಸುದ್ದಿಗಳು ಅಥವಾ ರಾಜಕೀಯ ತಿಕ್ಕಾಟಗಳು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಶಿಕ್ಷಕರು ಸುದ್ದಿಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ರಾಜ್ಯದ ಎಲ್ಲಾ ಮೂಲೆಗಳಲ್ಲಿರುವ ಶಾಲೆಗಳಲ್ಲಿ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇರಲಿದೆ.

Read More
Next Story