
ಒಳಮೀಸಲಾತಿ : ನಾಗಮೋಹನ್ ದಾಸ್ ವರದಿ ತಿರಸ್ಕರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ನಿರ್ಧಾರ
ಅಂಗವಾಗಿ ಜ್ಞಾನಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾರ್ಚ್ 25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ನಡೆಯ ವಿರುದ್ಧ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್ ಸಮಿತಿಯ ವರದಿಯು ದೋಷಪೂರಿತವಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು, ಈ ವರದಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿದೆ.
ಅಂಗವಾಗಿ ಜ್ಞಾನಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಮುಂಬರುವ 25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಹೋರಾಟವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಲ್ಲ, ಬದಲಾಗಿ ರೋಸ್ಟರ್ ಪದ್ಧತಿಯಲ್ಲಿ ಆಗಿರುವ ಅನ್ಯಾಯದ ವಿರುದ್ಧದ ಧ್ವನಿಯಾಗಿದೆ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ವರದಿಯಲ್ಲಿ ಜನಸಂಖ್ಯೆ ತಿರುಚಿದ ಗಂಭೀರ ಆರೋಪ
ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಅನ್ವಯ ಆಯಾ ರಾಜ್ಯಗಳು ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಪ್ರಾತಿನಿಧ್ಯ ಸಿಗುವಂತೆ ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ರಚಿಸಿದ್ದ ನ್ಯಾ. ನಾಗಮೋಹನ್ ದಾಸ್ ಏಕಸದಸ್ಯ ಆಯೋಗವು ಸಮರ್ಪಕವಾಗಿ ಸಮೀಕ್ಷೆ ನಡೆಸದೆ, ಕೇವಲ ಒಂದು ಜಾತಿಯನ್ನು ಓಲೈಸುವ ನಿಟ್ಟಿನಲ್ಲಿ ದುರುದ್ದೇಶಪೂರಿತ ವರದಿ ನೀಡಿದೆ ಎಂದು ಬಲಗೈ ಒಕ್ಕೂಟ ಗಂಭೀರವಾಗಿ ಆರೋಪಿಸಿದೆ. ಬಲಗೈ ಸಮುದಾಯದ ಗಣನೀಯ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ ಸೇರಿಸುವುದು ಹಾಗೂ ಆದಿಕರ್ನಾಟಕ, ಆದಿ-ದ್ರಾವಿಡ ಮತ್ತು ಆದಿ-ಆಂಧ್ರ ಸಮುದಾಯಗಳ ಅಂಕಿ-ಅಂಶಗಳನ್ನು ತಪ್ಪಾಗಿ ವರ್ಗೀಕರಿಸುವ ಮೂಲಕ ತಾರತಮ್ಯ ಎಸಗಲಾಗಿದೆ. ಜೊತೆಗೆ ಸಾಮಾನ್ಯ ವರ್ಗದಲ್ಲಿ (ಜನರಲ್ ಮೆರಿಟ್) ಆಯ್ಕೆಯಾದ ನೌಕರರು ಹಾಗೂ ಸಾಮಾನ್ಯ ಕ್ಷೇತ್ರಗಳಲ್ಲಿ ಗೆದ್ದ ಜನಪ್ರತಿನಿಧಿಗಳನ್ನೂ ಮೀಸಲಾತಿ ಲೆಕ್ಕಾಚಾರದಲ್ಲಿ ಪರಿಗಣಿಸಿರುವುದು ವರದಿಯ ಬಹುದೊಡ್ಡ ಲೋಪವಾಗಿದೆ ಎಂದು ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿದೆ.
ರೋಸ್ಟರ್ ಪದ್ಧತಿಯಲ್ಲಿ ತಾರತಮ್ಯ ಹಾಗೂ ಎಚ್ಚರಿಕೆ
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಪ್-ಬಿ ರೋಸ್ಟರ್ ಬಿಂದುಗಳಲ್ಲಿ ಕಡೆಗಣಿಸಿದೆ ಹಾಗೂ ಹೊಲಯ ಮತ್ತು ಛಲವಾದಿ ಸಮುದಾಯಗಳಿಗೆ ಅನ್ಯಾಯವಾಗುವಂತೆ ಮೀಸಲಾತಿ ನಿಗದಿಪಡಿಸಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ದೂರಾಗಿದೆ. ಒಳಮೀಸಲಾತಿ ಪ್ರಮಾಣಕ್ಕೆ ಈಗಾಗಲೇ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೂ, ಫೆಬ್ರವರಿ ೨೭, ೨೦೨೬ರಂದು ನೇರ ನೇಮಕಾತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿ ಗೆಜೆಟ್‌ನಲ್ಲಿ ಪ್ರಕಟಿಸಿರುವುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಮುಂಬರುವ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಈ ವೈಜ್ಞಾನಿಕ ಒಳಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಅಳವಡಿಸಬಾರದು ಎಂದು ಒಕ್ಕೂಟವು ಆಗ್ರಹಿಸಿದೆ. ಒಂದು ವೇಳೆ ಸರ್ಕಾರವು ಈ ದೋಷಪೂರಿತ ವರದಿಯನ್ನು ಜಾರಿಗೊಳಿಸಲು ಮುಂದಾದರೆ, ಭವಿಷ್ಯದಲ್ಲಿ ಉಂಟಾಗುವ ಎಲ್ಲಾ ಅನಾಹುತಗಳಿಗೂ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಖಡಕ್ ಎಚ್ಚರಿಕೆ ರವಾನಿಸಿದೆ.

