ಯುದ್ಧದ ಅನಿಶ್ಚಿತತೆಯಲ್ಲೂ ವಿದೇಶಿಗರಿಗೆ ರಾಜ್ಯವೇ ಸುರಕ್ಷಿತ - ಸಚಿವ ಎಚ್.ಕೆ. ಪಾಟೀಲ್
x

ಯುದ್ಧದ ಅನಿಶ್ಚಿತತೆಯಲ್ಲೂ ವಿದೇಶಿಗರಿಗೆ ರಾಜ್ಯವೇ ಸುರಕ್ಷಿತ - ಸಚಿವ ಎಚ್.ಕೆ. ಪಾಟೀಲ್

ಸಂಘರ್ಷದ ಕಾರಣದಿಂದ ಸಿಲುಕಿರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಆತಿಥ್ಯ ನೀಡಲು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯ ಸಂದರ್ಭದಲ್ಲಿಯೂ ರಾಜ್ಯವು ಪ್ರವಾಸಿಗರ ಪಾಲಿಗೆ ಸುರಕ್ಷಿತ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ಹೇಳಿದ್ದಾರೆ.

ನಗರದಲ್ಲಿ ನಡೆದ ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳ (ಟಿಟಿಎಫ್‌) ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಭೂಪಟದಲ್ಲಿ ಉತ್ತುಂಗಕ್ಕೆ ಏರಿಸಲು ಮತ್ತು ಸಂಘರ್ಷದ ಕಾರಣದಿಂದ ಸಿಲುಕಿರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಆತಿಥ್ಯ ನೀಡಲು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಯುದ್ಧದಂತಹ ಪರಿಸ್ಥಿತಿಯು ಜಾಗತಿಕ ಪ್ರವಾಸೋದ್ಯಮದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಭಾರತದ ಮೇಲೆ ಇದು ನೇರವಾಗಿ ಪ್ರಭಾವ ಬೀರದಿದ್ದರೂ, ಮಧ್ಯಪ್ರಾಚ್ಯ ದೇಶಗಳಿಂದ ಬಂದಿರುವ ಪ್ರವಾಸಿಗರು ಮತ್ತು ಅಲ್ಲಿಗೆ ತೆರಳಬೇಕಾದ ವಿದೇಶಿ ಪ್ರವಾಸಿಗರು ವೀಸಾ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಅನೇಕ ವಿದೇಶಿ ಪ್ರವಾಸಿಗರು ವೀಸಾ ಸಮಸ್ಯೆಗಳಿಂದಾಗಿ ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಇಲ್ಲಿಯೇ ಉಳಿಯುವಂತಾಗಿದೆ. ಅಂತಹ ಪ್ರವಾಸಿಗರಿಗೆ ರಾಜ್ಯವು ಒಂದು ಸುಭದ್ರ ಆಶ್ರಯಧಾಮವಾಗಲಿದೆ. ಅವರ ವಾಸ್ತವ್ಯವು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಲು ಮತ್ತು ವೀಸಾ ಅವಧಿ ವಿಸ್ತರಣೆ ಸೇರಿದಂತೆ ಕಾನೂನಾತ್ಮಕ ನೆರವು ನೀಡಲು ಸರ್ಕಾರ ಸನ್ನದ್ಧವಾಗಿದೆ. ಅಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೆ ಅವರು ನಮ್ಮ ಅತಿಥಿಗಳಾಗಿ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಸವಿಯಬಹುದು ಎಂದರು.

ಲಕ್ಕುಂಡಿ: ಸಂಶೋಧನೆ, ಸಾಂಸ್ಕೃತಿಕ ಆಸ್ತಿಗಳ ಅನಾವರಣ

ರಾಜ್ಯದ ಐತಿಹಾಸಿಕ ತಾಣಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿ, ಗದಗ ಜಿಲ್ಲೆಯ ಲಕ್ಕುಂಡಿಯನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಉತ್ಖನನ ಮತ್ತು ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಲಕ್ಕುಂಡಿಯಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಅದ್ಭುತವಾದ ಐತಿಹಾಸಿಕ ವಸ್ತುಗಳು ಲಭ್ಯವಾಗಿವೆ. ಈಗಾಗಲೇ ಸುಮಾರು 1,500 ಕಲಾಕೃತಿಗಳನ್ನು ಸಂಗ್ರಹಿಸಲಾಗಿದ್ದು, 3,500ಕ್ಕೂ ಹೆಚ್ಚು ವಸ್ತುಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಇವುಗಳ ಪ್ರದರ್ಶನಕ್ಕಾಗಿಯೇ ಒಂದು ಬೃಹತ್ ತೆರೆದ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಒಂದು ಕುಟುಂಬವು ಸುಮಾರು 600 ವರ್ಷಗಳಷ್ಟು ಹಳೆಯದಾದ, ಐದು ಕೋಟಿ ರೂಪಾಯಿ ಮೌಲ್ಯದ ಪ್ರಾಚೀನ ಆಭರಣಗಳನ್ನು ದೇವಿಯ ಅಲಂಕಾರಕ್ಕಾಗಿ ದಾನ ಮಾಡಿದೆ. ಇಂತಹ ದಾನಿಗಳು ಮತ್ತು ನಮ್ಮ ಪರಂಪರೆಯ ಮೇಲಿನ ಅವರ ಗೌರವವು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತದೆ. ಕರ್ನಾಟಕವು ಕೇವಲ ಐತಿಹಾಸಿಕ ಸ್ಮಾರಕಗಳಿಗೆ ಸೀಮಿತವಾಗದೆ, ಆಧುನಿಕ ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ತನ್ನನ್ನು ತಾನು ಬದಲಿಸಿಕೊಳ್ಳುತ್ತಿದೆ. ಪಶ್ಚಿಮ ಘಟ್ಟಗಳು ಮತ್ತು ಅರಣ್ಯ ಪ್ರದೇಶಗಳ ಸಂರಕ್ಷಿತ ಪ್ರವಾಸೋದ್ಯಮ, ಚಾರಣ, ಜಲ ಕ್ರೀಡೆಗಳು ಮತ್ತು ಪರ್ವತಾರೋಹಣಕ್ಕೆ ಉತ್ತೇಜನ, ವಿದ್ಯಾರ್ಥಿಗಳಿಗೆ ರಾಜ್ಯದ ಇತಿಹಾಸ ಮತ್ತು ವಿಜ್ಞಾನದ ಅರಿವು ಮೂಡಿಸುವುದು ಮತ್ತು ಕೃಷಿ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಪ್ರವಾಸೋದ್ಯಮ ಉದ್ದೇಶವಾಗಿದೆ ಎಂದು ಹೇಳಿದರು.

ಜಾಗತಿಕ ವೇದಿಕೆಯಾಗಿ ಟಿಟಿಎಫ್‌

ಪ್ರವಾಸೋದ್ಯಮ ಮೇಳಗಳ ಮಹತ್ವಕ್ಕೆ ಒತ್ತು ನೀಡಲಾಗಿದೆ. ಟಿಟಿಎಫ್ ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಕೊಂಡಿಯಾಗಿದೆ. ವಿಯೆಟ್ನಾಂನಂತಹ ದೇಶಗಳ ಪ್ರವಾಸಿಗರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ರಾಜ್ಯದ ಪರಂಪರೆಯನ್ನು ವಿದೇಶಗಳಿಗೆ ತಲುಪಿಸಲು ಸಹಕಾರಿಯಾಗಿದೆ. ಮುಂದಿನ ವರ್ಷದಿಂದ ಇಂತಹ ಮೇಳಗಳಿಗೆ ಸರ್ಕಾರದ ವತಿಯಿಂದ ಹೆಚ್ಚಿನ ಹಣಕಾಸಿನ ನೆರವು ಮತ್ತು ತಾಂತ್ರಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ವಿಶ್ವ ಪರಂಪರೆಯ ತಾಣಗಳ ರಕ್ಷಣೆ, ಅಭಿವೃದ್ಧಿ

ರಾಜ್ಯವು ಸುಮಾರು 25 ಸಾವಿರಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಕಲೆ ಮತ್ತು ವಾಸ್ತುಶಿಲ್ಪದ ಬೀಡಾಗಿದೆ. ಹಂಪಿ, ಬೇಲೂರು, ಬಾದಾಮಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳಂತಹ ವಿಶ್ವ ಪ್ರಸಿದ್ಧ ತಾಣಗಳು ರಾಜ್ಯದಲ್ಲಿವೆ. ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಲಕ್ಕುಂಡಿ, ವಿಜಯಪುರ, ಶ್ರೀರಂಗಪಟ್ಟಣ, ಮೈಸೂರು ಮತ್ತು ಹಳೇಬೀಡು ಸೇರಿವೆ. ಇಷ್ಟು ದೊಡ್ಡ ಮಟ್ಟದ ಆಸ್ತಿ ನಮ್ಮಲ್ಲಿದ್ದರೂ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಾವು ಪಡೆಯಬೇಕಾದ ಲಾಭದ ಪಾಲು ಇನ್ನೂ ಕಡಿಮೆಯಿದೆ. ಇದನ್ನು ಹೆಚ್ಚಿಸಲು ಹೊಸ ಪ್ರವಾಸೋದ್ಯಮ ನೀತಿಗಳನ್ನು ಜಾರಿಗೆ ತರಲಾಗುವುದು ಎಂದು ಅಭಿಪ್ರಾಯಪಟ್ಟರು.

Read More
Next Story