ವರುಣನ ಅಬ್ಬರ| ಕೊಪ್ಪಳದಲ್ಲಿ ಬೈಕ್ ಸವಾರ ಬಲಿ, ಹಲವೆಡೆ ಬೆಳೆಗಳು ನಾಶ
x

ವರುಣನ ಅಬ್ಬರ| ಕೊಪ್ಪಳದಲ್ಲಿ ಬೈಕ್ ಸವಾರ ಬಲಿ, ಹಲವೆಡೆ ಬೆಳೆಗಳು ನಾಶ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರ್ಗಿ, ಜಂಬಗಿ, ಕಲುತ್ತಿ ಮತ್ತು ಐಗಳಿ ಗ್ರಾಮಗಳು ದ್ರಾಕ್ಷಿ ಬೆಳೆ ನಾಶವಾಗಿದೆ. ಈ ಮಧ್ಯೆ, ಒಣಗಲು ಹಾಕಿದ್ದ ದ್ರಾಕ್ಷಿ ಕೂಡ ಮಳೆಗೆ ತೊಯ್ದು ಕೊಳೆತು ಹೋಗಿದೆ.


ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಎರಡು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಹಲವು ಅವಾಂತರಗಳಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮರವೊಂದು ಬೈಕ್‌ ಮೇಲೆ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ. ಇನ್ನೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ನಾಶವಾಗಿವೆ. ರಾಜ್ಯಾದ್ಯಂತ ಮೇ 29 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೈಕ್ ಮೇಲೆ ಬಿದ್ದ ಮರ: ಯುವಕ ಸಾವು

ಕೊಪ್ಪಳ ತಾಲೂಕಿನ ಕಾಮನೂರು ಬಳಿ ಭಾನುವಾರ ಬೆಳಗಿನ ಜಾವ ಭಾರಿ ಗಾಳಿ-ಮಳೆ ಸುರಿಯುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಭಾರಿ ಗಾತ್ರದ ಮರ ಮುರಿದು ಬಿದ್ದಿದೆ. ಬೈಕ್ ಸವಾರ ಕಿರಣ್ ಕರಬಡಿಗೆ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯ ತೀವ್ರತೆಗೆ ರಸ್ತೆ ಬದಿಯ ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಬೆಳಗಾವಿಯಲ್ಲಿ ಆಲಿಕಲ್ಲು ಮಳೆಯ ಅರ್ಭಟ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರ್ಗಿ, ಜಂಬಗಿ ಹಾಗೂ ಕಲುತ್ತಿ ಗ್ರಾಮೀಣ ಭಾಗಗಳಲ್ಲಿ ಆಲಿಕಲ್ಲು ಸಹಿತ ಮುಂಗಾರು ಪೂರ್ವ ಮಳೆ ಆರ್ಭಟಿಸಿದೆ. ದಿಢೀರ್‌ ಸುರಿದ ಬಿರುಗಾಳಿ ಸಹಿತ ಮಳೆಗೆ ಕೈಗೆ ಬಂದ ಬೆಳೆಗಳು ನಾಶವಾಗುವ ಭೀತಿ ಎದುರಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಹಲವು ಕಡೆ ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.

ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ರಾಜ್ಯದಲ್ಲಿ ಮೇ 29ರವರೆಗೂ ಮಳೆಯ ಆರ್ಭಟ ಮುಂದುವರಿಯಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ತೀವ್ರ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾವಾರು ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇದೆ. ರಾಜ್ಯದ ಇತರೆ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆ ಹಾಗೂ ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ಹಳೆಯ ಕಟ್ಟಡಗಳ ಆಶ್ರಯ ಪಡೆಯಬಾರದು. ವಿದ್ಯುತ್ ಕಂಬಗಳಿಂದ ದೂರವಿರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹೇಳಿದೆ.

ರಾಜ್ಯದ ಹಲವೆಡೆ ಬೆಳೆ ನಾಶ

ಬಿರುಗಾಳಿ ಸಹಿತ ಭಾರೀ ಮಳೆಗೆ ಕೊಪ್ಪಳ ಜಿಲ್ಲೆಯಲ್ಲಿ ಕಟಾವಿಗೆ ಬಂದಿದ್ದ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ತಾಲೂಕಿನ ಹಟ್ಟಿ, ಮೆಲ್ಲಿಕೇರಿ, ಲಾಚನಕೇರೆ ಮತ್ತು ಕಾಮನೂರು ರಸ್ತೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿಯ ಹೊಡೆತಕ್ಕೆ ನೂರಾರು ಎಕರೆ ಪ್ರದೇಶದಲ್ದ್ದ, ಕಟಾವಿಗೆ ಸಿದ್ಧವಾಗಿದ್ದ ಬಾಳೆ ಗಿಡಗಳು ನೆಲಕಚ್ಚಿವೆ. ಮಾವಿನ ತೋಟಗಳು, ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳಿಗೂ ವ್ಯಾಪಕ ಹಾನಿಯಾಗಿದೆ.

ಬೆಳಗಾವಿಯ ಗಡಿ ಭಾಗಗಳಲ್ಲಿ ಆಲಿಕಲ್ಲು ಮಳೆಯಿಂದ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿದೆ. ಅಥಣಿ ತಾಲೂಕಿನ ಸಂಬರ್ಗಿ, ಜಂಬಗಿ, ಕಲುತ್ತಿ ಮತ್ತು ಐಗಳಿ ಗ್ರಾಮಗಳು ದ್ರಾಕ್ಷಿ ಬೆಳೆ ನಾಶವಾಗಿದೆ. ಈ ಮಧ್ಯೆ, ಒಣಗಲು ಹಾಕಿದ್ದ ದ್ರಾಕ್ಷಿ ಕೂಡ ಮಳೆಗೆ ತೊಯ್ದು ಕೊಳೆತು ಹೋಗಿದೆ. ಮಾವು, ಕಲ್ಲಂಗಡಿ, ದಾಳಿಂಬೆ, ಹಾಗೂ ಜಮೀನಿನಲ್ಲಿ ನಿಂತಿದ್ದ ಜೋಳದ ಬೆಳೆಗಳು ಹಾನಿಗೊಳಗಾಗಿವೆ.

ಗದಗದ ಗಂಗಿಮಡಿ ಭಾಗ ಹಾಗೂ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕಟಾವು ಮಾಡಿ ಕಣಗಳಲ್ಲಿ ರಾಶಿ ಹಾಕಲಾಗಿದ್ದ ಭತ್ತ ಮಳೆ ನೀರಿಗೆ ಕೊಚ್ಚಿ ಹೋಗಿದೆ. ತಗ್ಗು ಪ್ರದೇಶದಲ್ಲಿರುವ ಹಲವು ಬೆಳೆಗಳು ಜಲಾವೃತವಾಗಿವೆ.

Read More
Next Story