ಗರ್ಭಪೂರ್ವ ಆರೈಕೆ ಘಟಕ ಸ್ಥಾಪನೆಗೆ ಆರೋಗ್ಯ ಇಲಾಖೆ ನಿರ್ಧಾರ
x

ಗರ್ಭಪೂರ್ವ ಆರೈಕೆ ಘಟಕ ಸ್ಥಾಪನೆಗೆ ಆರೋಗ್ಯ ಇಲಾಖೆ ನಿರ್ಧಾರ

ಹೊಸ ಯೋಜನೆಯ ಮೂಲಕ ಗರ್ಭಧಾರಣೆಗೆ ಮುನ್ನವೇ ಮಹಿಳೆಯರ ಆರೋಗ್ಯದ ಮೇಲೆ ನಿಗಾ ಇಡಲು ಮತ್ತು ಸುರಕ್ಷಿತ ಹೆರಿಗೆಗೆ ಬುನಾದಿ ಹಾಕಲು ಆರೋಗ್ಯ ಇಲಾಖೆ ನಿರ್ಧರಿಸಿದೆ.


ರಾಜ್ಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ, ತಾಯಂದಿರ ಮರಣ ಪ್ರಮಾಣವನ್ನು ಸಂಪೂರ್ಣ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಇಲಾಖೆ ದೇಶದಲ್ಲೇ ಪ್ರಥಮ ಬಾರಿಗೆ ನೂತನ ವ್ಯವಸ್ಥೆಯೊಂದನ್ನು ರೂಪಿಸಲು ಮುಂದಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 'ಗರ್ಭಪೂರ್ವ ಆರೈಕೆ ಘಟಕ'ಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಸಾಮಾನ್ಯವಾಗಿ ಗರ್ಭಧಾರಣೆಯಾದ ಬಳಿಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈ ಹೊಸ ಯೋಜನೆಯ ಮೂಲಕ ಗರ್ಭಧಾರಣೆಗೆ ಮುನ್ನವೇ ಮಹಿಳೆಯರ ಆರೋಗ್ಯದ ಮೇಲೆ ನಿಗಾ ಇಡಲು ಮತ್ತು ಸುರಕ್ಷಿತ ಹೆರಿಗೆಗೆ ಬುನಾದಿ ಹಾಕಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಗರ್ಭಧಾರಣೆಗೆ ಮುನ್ನವೇ ಮಹಿಳೆಯರ ಆರೋಗ್ಯ ಸ್ಥಿತಿ, ರಕ್ತಹೀನತೆ, ಪೌಷ್ಟಿಕತೆಯ ಕೊರತೆ ಹಾಗೂ ಇತರೆ ವೈದ್ಯಕೀಯ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗಬಹುದಾದ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ತಾಯಿ ಮರಣಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ.

ಗರ್ಭಿಣಿಯಾದ ಬಳಿಕವೂ ಅವರಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತೆ ನೋಡಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಕೇವಲ ಆಸ್ಪತ್ರೆಗಳಿಗೆ ಸೀಮಿತಗೊಳ್ಳದೆ, ತಾಯಿ ಮರಣ ತಡೆ ಹಾಗೂ ಆರೋಗ್ಯದ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಅರಿವು ಮೂಡಿಸಲಾಗುತ್ತದೆ. ಮಹಿಳೆಯರಿಗೆ ಅಗತ್ಯ ತಪಾಸಣೆ ಮಾಡಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.

ರಾಜ್ಯದಲ್ಲಿ ತಾಯಿ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ, ಮುಂದಿನ ದಿನಗಳಲ್ಲಿ 'ಶೂನ್ಯ ತಾಯಿ ಮರಣ'ದ ಗುರಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಈ ವಿನೂತನ ಹೆಜ್ಜೆ ಇಟ್ಟಿದೆ. ಗರ್ಭಿಣಿಯರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ವಿತರಣೆ, ಸುರಕ್ಷಿತ ಹೆರಿಗೆ ಹಾಗೂ ಹೆರಿಗೆಯ ನಂತರದ ಆರೈಕೆಗೂ ಈ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದ ಮಾತೃ ಮತ್ತು ಶಿಶು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ.

Read More
Next Story