ಕೆಪಿಕೆಎಸ್‌ನ 127 ಕೋಟಿ ರೂ. ಬಾಡಿಗೆ ಮನ್ನಾಕ್ಕೆ ಚರ್ಚಿಸಿ ಕ್ರಮ: ನರೇಂದ್ರ ಸ್ವಾಮಿ
x

ಕೆಪಿಕೆಎಸ್‌ನ 127 ಕೋಟಿ ರೂ. ಬಾಡಿಗೆ ಮನ್ನಾಕ್ಕೆ ಚರ್ಚಿಸಿ ಕ್ರಮ: ನರೇಂದ್ರ ಸ್ವಾಮಿ

ರೈತರ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಸಂಸ್ಥೆಗೆ ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ವಿಧಿಸುವುದು ಸರಿಯಲ್ಲ. ಈ ನೋಟಿಸ್ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ರೈತರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜಕ್ಕೆ (ಕೆಪಿಕೆಎಸ್‌) ಲೋಕೋಪಯೋಗಿ ಇಲಾಖೆ ನೀಡಿರುವ ಬರೋಬ್ಬರಿ 127 ಕೋಟಿ ರೂಪಾಯಿಗಳ ನೆಲಬಾಡಿಗೆ ನೋಟಿಸ್ ಈಗ ರಾಜ್ಯ ರಾಜಕೀಯ ಹಾಗೂ ಕೃಷಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಗುರುವಾರ ಬೆಂಗಳೂರಿನ ಹಡ್ಸನ್ ವೃತ್ತದಲ್ಲಿ ನಡೆದ ಕೆಪಿಕೆಎಸ್ ರಾಜ್ಯಮಟ್ಟದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು, ಈ ನೋಟಿಸ್‌ನಿಂದ ಸಮಾಜದ ಮೇಲೆ ಬಿದ್ದಿರುವ ಹೊರೆ ತಪ್ಪಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಬಾಡಿಗೆ ಮನ್ನಾ ಮಾಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜವು ರೈತರ ಅಭಿವೃದ್ಧಿ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಯು ಅನಿರೀಕ್ಷಿತವಾಗಿ 127 ಕೋಟಿ ರೂ.ಗಳ ನೆಲಬಾಡಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿರುವುದು ಆಡಳಿತ ಮಂಡಳಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, "ರೈತರ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಸಂಸ್ಥೆಗೆ ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ವಿಧಿಸುವುದು ಸರಿಯಲ್ಲ. ಈ ನೋಟಿಸ್ ಬಗ್ಗೆ ನಮಗೆ ಮಾಹಿತಿ ಇದೆ. ಸಮಾಜದ ಎಲ್ಲ ಅಧ್ಯಕ್ಷರು ಹಾಗೂ ನಿರ್ದೇಶಕರ ನಿಯೋಗವನ್ನು ಸದ್ಯದಲ್ಲೇ ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು, ಈ ಬಾಡಿಗೆಯನ್ನು ಮನ್ನಾ ಮಾಡುವಂತೆ ಮನವಿ ಮಾಡಲಾಗುವುದು" ಎಂದು ಸ್ಪಷ್ಟಪಡಿಸಿದರು.

ಹೊಸ ಸದಸ್ಯತ್ವ ನೋಂದಣಿ ಹಾಗೂ ಆದಾಯದ ಮೂಲ

ಸಭೆಯಲ್ಲಿ ಸಮಾಜದ ಆರ್ಥಿಕ ಸ್ವಾವಲಂಬನೆಯ ಕುರಿತೂ ಚರ್ಚೆ ನಡೆಯಿತು. 2023ರಿಂದ ಸ್ಥಗಿತಗೊಂಡಿದ್ದ ಹೊಸ ಸದಸ್ಯತ್ವ ನೋಂದಣಿಯನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸಚಿವರು ಮುಂದಿಟ್ಟರು. "ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದರಿಂದ ಸಮಾಜದ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಇದಕ್ಕೆ ಪೂರಕವಾಗಿ ಶುಲ್ಕವನ್ನು ತುಸು ಹೆಚ್ಚಿಸಿ, ಹೆಚ್ಚು ರೈತರನ್ನು ಸಂಸ್ಥೆಯ ಭಾಗವಾಗಿಸಬೇಕು" ಎಂಬ ಸಚಿವರ ಅಭಿಪ್ರಾಯಕ್ಕೆ ಆಡಳಿತ ಮಂಡಳಿ ಒಮ್ಮತದ ಸಮ್ಮತಿ ಸೂಚಿಸಿತು.

ಭತ್ಯೆ ಹೆಚ್ಚಳಕ್ಕೆ ತಡೆ: ಬರಗಾಲದ ನೆಪ

ಸಭೆಯಲ್ಲಿ ನಿರ್ದೇಶಕರ ಭತ್ಯೆ ಹೆಚ್ಚಳದ ಕುರಿತೂ ಚರ್ಚೆ ನಡೆಯಿತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನರೇಂದ್ರ ಸ್ವಾಮಿ, ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. "ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಆರ್ಥಿಕ ಸ್ಥಿತಿಯ ಮೇಲೆ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಭತ್ಯೆ ಹೆಚ್ಚಳದ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡುವುದು ಸೂಕ್ತ. 2027ರ ಮಾರ್ಚ್ ನಂತರ ಈ ಕುರಿತು ಮರುಪರಿಶೀಲನೆ ನಡೆಸಲಾಗುವುದು" ಎಂದು ತಿಳಿಸುವ ಮೂಲಕ ಆಡಳಿತಾತ್ಮಕ ಜವಾಬ್ದಾರಿಯನ್ನು ಮೆರೆದರು.

ಕೃಷಿ ಭೂಮಿಯ ಸಂರಕ್ಷಣೆ: ಸಚಿವರ ಖಡಕ್ ಎಚ್ಚರಿಕೆ

ಸಭೆಯ ಮತ್ತೊಂದು ಮುಖ್ಯ ಭಾಗ ಕೊಡಗು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನಿವೇಶನ ಕೋರಿ ಬಂದ ಮನವಿಗಳ ಕುರಿತಾದ ಚರ್ಚೆಯಾಗಿತ್ತು. ಇದಕ್ಕೆ ಸಚಿವ ನರೇಂದ್ರ ಸ್ವಾಮಿ ನೀಡಿದ ಉತ್ತರ ಕೃಷಿ ಇಲಾಖೆಯ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಕಠಿಣ ನಿರ್ಧಾರವನ್ನು ಪ್ರತಿಬಿಂಬಿಸಿತು. "ಬೆಂಗಳೂರಿನ ಜಿಕೆವಿಕೆ ಜಾಗದ ಬಹುಭಾಗವನ್ನು ಬೇರೆ ಉದ್ದೇಶಗಳಿಗೆ ಹಂಚಿಕೆ ಮಾಡಿರುವುದರಿಂದ ಕೃಷಿ ಸಂಶೋಧನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ. ಇನ್ನು ಮುಂದೆ ಯಾವುದೇ ಕೃಷಿ ವಿಶ್ವವಿದ್ಯಾಲಯ ಅಥವಾ ಕೃಷಿ ಇಲಾಖೆಯ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಿಟ್ಟುಕೊಡುವಂತಿಲ್ಲ. ಇದು ಸಂಪುಟದ ನಿರ್ಧಾರವೂ ಹೌದು," ಎಂದು ಅವರು ಸ್ಪಷ್ಟಪಡಿಸಿದರು. ಅಗತ್ಯಬಿದ್ದರೆ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಜಾಗ ಕೊಡಿಸುವ ಪ್ರಯತ್ನ ಮಾಡಲಾಗುವುದು, ಆದರೆ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

ಕಲ್ಯಾಣ ಕರ್ನಾಟಕದ ತೊಗರಿ ಜಿಐ ಟ್ಯಾಗ್ ಮತ್ತು ಆಸ್ಪತ್ರೆ ವಿವಾದ

ಕಲಬುರಗಿ ಕೃಷಿಕ ಸಮಾಜದ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ವಿಜ್ಞಾನ ವಿವಿಯ 500 ಎಕರೆ ಭೂಮಿಯನ್ನು ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ನೀಡಲು ನಡೆಯುತ್ತಿರುವ ಚರ್ಚೆಯ ಬಗ್ಗೆ ಗಮನ ಸೆಳೆದಾಗ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. "ಕೃಷಿ ವಿಜ್ಞಾನ ವಿವಿ ಇರಬಹುದು ಅಥವಾ ಕೃಷಿ ಇಲಾಖೆಯ ಯಾವುದೇ ಜಾಗವಿರಬಹುದು, ಒಂದಿಂಚೂ ಜಾಗವನ್ನು ಅನ್ಯ ಸಂಸ್ಥೆಗಳಿಗೆ ನೀಡುವ ಪ್ರಶ್ನೆಯೇ ಇಲ್ಲ. ಅಂತಹ ಪ್ರಸ್ತಾವನೆಗಳಿದ್ದರೆ ನಾನು ತಕ್ಷಣ ಪರಿಶೀಲಿಸುತ್ತೇನೆ. ರೈತರ ಜಮೀನು ರೈತರ ಹಿತಕ್ಕಾಗಿ ಮಾತ್ರ ಬಳಕೆಯಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ಕೃಷಿಕ ಸಮಾಜದ ಪ್ರತಿನಿಧಿಗಳಿಗೂ ಕೆಡಿಪಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಸಂಪುಟ ಮಟ್ಟದ ತೀರ್ಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.

Read More
Next Story