
ಸಿದ್ದರಾಮಯ್ಯ - ಎಚ್.ಡಿ.ಕುಮಾರಸ್ವಾಮಿ ನಡುವೆ ತಾರಕಕ್ಕೇರಿದ 'ಕದ್ದಾಲಿಕೆ' ಸಮರ
ಗೂಢಚರ್ಯೆ ನಿಮಗೇನು ಹೊಸತಲ್ಲ, ಅದು ನಿಮ್ಮ ರಕ್ತದಲ್ಲೇ ಇದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಟೀಕಿಸಿದರೆ, "ಅಗ್ರಿಮೆಂಟ್ ರಾಮಯ್ಯ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ 'ಫೋನ್ ಕದ್ದಾಲಿಕೆ' ವಿವಾದವು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ನೇರ ಸಮರಕ್ಕೆ ಕಾರಣವಾಗಿದೆ. ಫೋನ್ ಕದ್ದಾಲಿಕೆ ಆರೋಪಗಳಿಗೆ ಉಭಯ ಮುಖಂಡರು ಆರೋಪ-ಪ್ರತ್ಯಾರೋಪ ಮಾಡಿ ಟೀಕಾಪ್ರಹಾರ ನಡೆಸಿದ್ದಾರೆ.
ಗೂಢಚರ್ಯೆ ನಿಮಗೇನು ಹೊಸತಲ್ಲ, ಅದು ನಿಮ್ಮ ರಕ್ತದಲ್ಲೇ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾಲದ ಹಳೆಯ ಘಟನೆಯನ್ನು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನೆನಪಿಸಿ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು "ಅಗ್ರಿಮೆಂಟ್ ರಾಮಯ್ಯ" ಎಂದು ಲೇವಡಿ ಮಾಡಿದ್ದಾರೆ. ಆಡಳಿತಕ್ಕಿಂತ ಕುರ್ಚಿ ಉಳಿಸಿಕೊಳ್ಳುವ, ಪ್ರತಿಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಾಯಕದಲ್ಲೇ ಮುಖ್ಯಮಂತ್ರಿ ಮಗ್ನರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಫೋನ್ ಕದ್ದಾಲಿಕೆಯಂತಹ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ (ಎಚ್.ಡಿ. ದೇವೇಗೌಡರು) ಹೇಳಿ ಕೊಟ್ಟಿರಬಹುದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ತಮ್ಮ ವಿರುದ್ಧ ಕೇಳಿಬಂದಿದ್ದ ಫೋನ್ ಕದ್ದಾಲಿಕೆ ಆರೋಪಗಳನ್ನು ಮರೆಮಾಚಲು ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ದೇವೇಗೌಡರು ಗೂಢಚರ್ಯೆ ಮಾಡಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಅಂದು ವಾಪಸ್ ಪಡೆದಿತ್ತು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂದು ದೇವೇಗೌಡರು ಮಾಡಿದ ಆ ಒಂದು 'ಸಣ್ಣತನ' ಮತ್ತು 'ಅಪನಂಬಿಕೆ'ಯ ರಾಜಕಾರಣದಿಂದಾಗಿ ಒಬ್ಬ ಕನ್ನಡಿಗ ಪ್ರಧಾನಿ ಹುದ್ದೆಯಲ್ಲಿ ಸುದೀರ್ಘ ಕಾಲ ಮುಂದುವರಿಯುವ ಅವಕಾಶ ತಪ್ಪಿಹೋಯಿತು. ಇದು ಕನ್ನಡಿಗರಿಗೆ ಆದ ದೊಡ್ಡ ನಷ್ಟ ಮತ್ತು ವಿಷಾದನೀಯ ವಾಸ್ತವ ಎಂದು ಕಿಡಿಕಾರಿದ್ದಾರೆ.
'ಕುಂಬಳಕಾಯಿ ಕಳ್ಳ' ಗಾದೆ ನೆನಪಾಗುತ್ತಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದು ನೋಡಿದರೆ 'ಕುಂಬಳಕಾಯಿ ಕಳ್ಳ' ಎಂಬ ಗಾದೆ ನೆನಪಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರ್ಕಾರದೊಳಗಿನ ಆಂತರಿಕ ಕುರ್ಚಿ ಕಾಳಗವೇ ಈ ಫೋನ್ ಕದ್ದಾಲಿಕೆಗೆ ಮೂಲ ಕಾರಣ ಎಂದಿದ್ದಾರೆ.
ನಿಮ್ಮ ಪಕ್ಷದಲ್ಲಿನ ಶಾಸಕರು, ಉಪಮುಖ್ಯಮಂತ್ರಿಗಳ ಮೇಲೆ ನಿಗಾ ಇಡಲು ನೀವು ಫೋನ್ ಕದ್ದಾಲಿಕೆ ಮಾಡುತ್ತಿದ್ದೀರಿ ಎಂಬುದು ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳ ಶಂಕೆ. ಇದಕ್ಕೆ ನೇರ ಉತ್ತರ ನೀಡುವ ಬದಲು ವಿಷಯಾಂತರ ಮಾಡುತ್ತಿರುವುದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಸಹನೆ ವೇದಿಕೆಗಳ ಮೇಲೆ ಸ್ಫೋಟಿಸುತ್ತಿದೆ. ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳಿಕೊಳ್ಳುವ ಸಿದ್ದರಾಮಯ್ಯ ಅಸಹಾಯಕತೆ ರಾಜ್ಯದ ಜನರಿಗೆ ಅರ್ಥವಾಗುತ್ತಿದೆ. ಸ್ನೇಹಿತನಿಗಾಗಿ ಕೊಟ್ಟ ವಚನ ಉಳಿಸಿಕೊಳ್ಳಿ 'ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ' ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಒಪ್ಪಂದದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.
ಸಿದ್ದರಾಮಯ್ಯ ಅವರು ದೇವೇಗೌಡರ ಹೆಸರನ್ನು ಪ್ರಸ್ತಾಪಿಸುವುದರ ವಿರುದ್ಧ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ, ರಾಜಕೀಯವಾಗಿ ಜನ್ಮ ನೀಡಿದ ಗುರು ದ್ರೋಹದ ಕಥೆಯನ್ನು ನೆನಪಿಸಿದ್ದಾರೆ. ನಿಮ್ಮನ್ನು ಗುರುತಿಸಿ ಬೆಳೆಸಿದ ದೇವೇಗೌಡರಿಗೆ ನೀವು ಸಮಯ ಸಾಧಕತನದಿಂದ ಗುನ್ನ ಇಟ್ಟಿರಿ. ನಿಮ್ಮ ಕಪಟತನ ಮತ್ತು ಕುಟಿಲತೆ ಎಲ್ಲರಿಗೂ ತಿಳಿದಿದೆ. ಅಧಿಕಾರಕ್ಕಾಗಿ ಸೋನಿಯಾ ಗಾಂಧಿ ಮತ್ತು ಸೀತಾರಾಂ ಕೇಸರಿ ಅವರನ್ನು ಹಿಂದೆ ಹೇಗೆ ನಿಂದಿಸಿದ್ದೀರಿ ಎಂಬುದು ನಮಗೂ ನೆನಪಿದೆ ಎಂದು ಇತಿಹಾಸವನ್ನು ಕೆದಕಿದ್ದಾರೆ. ದೇವೇಗೌಡರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯನವರೇ, ಅಧಿಕಾರ ತ್ಯಾಗ ಮಾಡಬೇಕೆಂದರೆ ವಿರೋಚಿತವಾಗಿ ಮಾಡಬೇಕು. ನಿಮ್ಮ ಕುಚುಕು ಗೆಳೆಯನ (ಉಪಮುಖ್ಯಂಮತ್ರಿ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಒಮ್ಮೆ ಆ ಕೆಚ್ಚನ್ನು ತೋರಿಸಿ ಕುರ್ಚಿ ಬಿಟ್ಟುಕೊಡಿ ಎಂದು ಸವಾಲು ಹಾಕಿದ್ದಾರೆ.
ಫೋನ್ ಕದ್ದಾಲಿಕೆ ಎನ್ನುವುದು ಕಾಂಗ್ರೆಸ್ ಪಕ್ಷದ ಆವಿಷ್ಕಾರವೇ ಹೊರತು ನನ್ನದಲ್ಲ ಎಂದು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ, ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಫೋನ್ ಕದ್ದಾಲಿಕೆ ಮಾಡುವ ಹೀನ ಕೆಲಸಕ್ಕೆ ಕೈ ಹಾಕಲಿಲ್ಲ. ಹಾಗೆ ಮಾಡಿದ್ದಿದ್ದರೆ ಅಧಿಕಾರವನ್ನೇ ಉಳಿಸಿಕೊಳ್ಳುತ್ತಿದ್ದೆ. ಆದರೆ ಕದ್ದಾಲಿಕೆ ಮಾಡುವುದು ಮತ್ತು ಬ್ರೇನ್ ವಾಶ್ ಮಾಡುವುದು ಕಾಂಗ್ರೆಸ್‌ನ ಸಂಸ್ಕಾರ. ತಮ್ಮ ವಿರುದ್ಧ ಸರ್ಕಾರ ಎಸ್‌ಐಟಿ ತನಿಖೆಗಳನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆಯೂ ಕಿಡಿಕಾರಿದ್ದು, ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (ಎಸ್‌ಐಟಿ) ಏನೇನು ಮಾಡುತ್ತಿದೆ ಎಂಬುದು ನನಗೆ ಗೊತ್ತಿದೆ. ಪ್ರತಿಪಕ್ಷಗಳ ವಿರುದ್ಧ ಸೇಡು ಸಾಧಿಸುವುದೇ ನಿಮ್ಮ ನೈಜ ಗುಣ. ಅಧಿಕಾರ ದುರ್ಬಳಕೆ ಮಾಡಿಕೊಂಡು ಇನ್ನೊಬ್ಬರನ್ನು ನಿಂದಿಸುವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

