
ರಾಜ್ಯದಲ್ಲಿ ಮತ್ತೆ ಮೊಳಗಿದ 'ಫೋನ್ ಕದ್ದಾಲಿಕೆ' ಸದ್ದು: ಎಚ್ಡಿಕೆಯಿಂದ ಮತ್ತೊಮ್ಮೆ ಆರೋಪ
ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಆಕಾಂಕ್ಷಿಯ ಗುಂಪುಗಳ ನಡುವೆಯೇ ಪರಸ್ಪರ ಗೂಢಚರ್ಯೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ದೂರವಾಣಿ ಕದ್ದಾಲಿಕೆ ಆರೋಪವು ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ರಾಜಭವನ ಹಾಗೂ ಪ್ರತಿಪಕ್ಷ ನಾಯಕರ ಮೇಲೆ ನಿಗಾ ಇಡಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ಸ್ವತಃ ಸಚಿವರು ಮತ್ತು ಶಾಸಕರ ಮೇಲೆ ಗೂಢಚರ್ಯೆ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ವಿಧಾನಸಭೆ ಅಧಿವೇಶನದ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಾ, "ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ದೆಹಲಿಯಿಂದ ದೂರವಾಣಿ ಮೂಲಕ ಬರುವ ಸೂಚನೆಗಳನ್ನು ಪಾಲಿಸುತ್ತಾರೆ" ಎಂದು ನೀಡಿದ್ದ ಹೇಳಿಕೆ ಈ ಎಲ್ಲಾ ಆರೋಪ-ಪ್ರತ್ಯಾರೋಪಗಳಿಗೆ ಮೂಲವಾಯಿತು. ರಾಜ್ಯಪಾಲರ ಫೋನ್ ಸಂಭಾಷಣೆಯ ಮಾಹಿತಿ ಸರ್ಕಾರಕ್ಕೆ ತಿಳಿಯುತ್ತಿರುವುದು ಹೇಗೆ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಮುಂದಿಟ್ಟಿವೆ.
ಸ್ವಪಕ್ಷೀಯರ ಮೇಲೆಯೇ ಗೂಢಚರ್ಯೆ: ಎಚ್‌ಡಿಕೆ ಗಂಭೀರ ಆರೋಪ
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಫೋನ್ ಕದ್ದಾಲಿಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ದೂರವಾಣಿ ಕದ್ದಾಲಿಕೆ ಸಹಜವಾಗಿ ನಡೆಯುತ್ತದೆ. ಆದರೆ, ತಮ್ಮದೇ ಪಕ್ಷದ ಶಾಸಕರು ಮತ್ತು ಸಚಿವರ ಮೇಲೆ ಗೂಢಚರ್ಯೆ ಮಾಡುತ್ತಿರುವುದು ಇದೇ ಮೊದಲು. ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಆಕಾಂಕ್ಷಿಯ ಗುಂಪುಗಳ ನಡುವೆ ಪರಸ್ಪರ ಬೇಹುಗಾರಿಕೆ ನಡೆಯುತ್ತಿದೆ. ಫೋನ್ ಟ್ಯಾಪಿಂಗ್ ಮಾಡಿದವರೇ ಈಗ ಪತಿವ್ರತೆಯರಂತೆ ಮಾತನಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದರು.
ಡಿಕೆಶಿ ಬಣದ ಮೇಲೆ ನಿಗಾ ಇಡಲು 'ಅನಾಮಧೇಯ' ತಂಡ?
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರವು ರಾಜಭವನ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಫೋನ್ ಕದ್ದಾಲಿಸುತ್ತಿದೆ ಎಂದು ಆರೋಪಿಸಿದ್ದಾರೆ. "ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಯಾರೆಲ್ಲಾ ಶಾಸಕರಿದ್ದಾರೆ ಎಂದು ತಿಳಿಯಲು ಸಿಎಂ ಸಿದ್ದರಾಮಯ್ಯ ಅವರೇ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಒಬ್ಬರು ಎಸ್ಪಿಯನ್ನು ನೇಮಕ ಮಾಡಿ, ಆದೇಶವಿಲ್ಲದ 'ಕಣ್ಣಿಗೆ ಕಾಣದ ಎಸ್‌ಐಟಿ' ತಂಡವನ್ನು ರಚಿಸಲಾಗಿದೆ. ಈ ತಂಡವು ಡಿಕೆಶಿ ಬಣದ ಸಭೆಗಳ ಮೇಲೆ ನಿಗಾ ಇಡುತ್ತಿದೆ" ಎಂದು ಅಶೋಕ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಹಳೆಯ ಪ್ರಕರಣದ ನೆನಪು
ಪ್ರತಿಪಕ್ಷಗಳ ಈ ಎಲ್ಲಾ ಗಂಭೀರ ಆರೋಪಗಳನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಳ್ಳಿಹಾಕಿದ್ದಾರೆ. "ಯಾರ ಫೋನ್ ಕದ್ದಾಲಿಕೆ ಮಾಡುವ ಅಗತ್ಯವೂ ನಮಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, 2019 ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇಂತಹುದೇ ಆರೋಪ ಕೇಳಿಬಂದಿತ್ತು. ಆಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು, ಆದರೆ ನಂತರದ ದಿನಗಳಲ್ಲಿ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿತ್ತು. ಇದೀಗ ಮತ್ತೆ ಅದೇ ಆರೋಪದ ಭೂತ ಕಾಂಗ್ರೆಸ್ ಸರ್ಕಾರವನ್ನು ಬೆನ್ನಟ್ಟಿದೆ.

