ಬೈಸಿಕಲ್‌ ಯೋಜನೆ ಮರು ಆರಂಭ; ಸರ್ಕಾರಕ್ಕೆ ನೀತಿ ಆಯೋಗದ ಸಲಹೆ ಏನು?
x
ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್‌ ಸಂಗ್ರಹ ಚಿತ್ರ

ಬೈಸಿಕಲ್‌ ಯೋಜನೆ ಮರು ಆರಂಭ; ಸರ್ಕಾರಕ್ಕೆ ನೀತಿ ಆಯೋಗದ ಸಲಹೆ ಏನು?

ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದು ಇನ್ನಷ್ಟು ವಿಸ್ತಾರವಾಗದಂತೆ ತಡೆಯಲು 'ಹಸಿರು ಗೋಡೆʼ ನಿರ್ಮಾಣ ಆಗಬೇಕು.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಆರಂಭಿಸಿದ್ದ ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್ ನೀಡುವ ಯೋಜನೆಯನ್ನು ಮರು ಆರಂಭಿಸುವಂತೆ ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ನೀತಿ ಹಾಗೂ ಯೋಜನಾ ಆಯೋಗವು ಪ್ರಮುಖ ಶಿಫಾರಸುಗಳನ್ನು ಮಾಡಿದ್ದು, ಬಜೆಟ್‌ನಲ್ಲಿ ಅವುಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದೆ.

ಮಾಧ್ಯಮಿಕ ಶಿಕ್ಷಣ ಬಲಪಡಿಸಲು, ಸುರಕ್ಷಿತ ಹಾಗೂ ಕೈಗೆಟುಕುವ ಚಲನಶೀಲತೆಯ ಕೊರತೆಯಿಂದ ಕರ್ನಾಟಕದಲ್ಲಿ ಯಾವುದೇ ಬಾಲಕಿಯರು ಶಾಲಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ, ವಿದ್ಯಾರ್ಥಿನಿಯರಿಗೆ ಉಚಿತ್ ಬೈಸಿಕಲ್ ವಿತರಣಾ ಕಾರ್ಯಕ್ರಮ ಮರು ಆರಂಭಿಸಬೇಕು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಪ್ರವೇಶದಲ್ಲಿ ಸುಧಾರಣೆ ಕಾಣಲಿದೆ. ಶಾಲೆ ಬಿಟ್ಟವರ ಪ್ರಮಾಣವೂ ಕಡಿಮೆಯಾಗಲಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ ಎಂದು ಆಯೋಗ ಹೇಳಿದೆ.

ಪ್ರಸ್ತುತ, ಮಾಧ್ಯಮಿಕ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣವು ಶೇ 22.9 ರಷ್ಟು ಇರುವುದರಿಂದ ಈ ಯೋಜನೆ ಮರು ಜಾರಿ ಅತ್ಯಂತ ಅಗತ್ಯವಾಗಿದೆ ಎಂದು ಶಿಫಾರಸಿನಲ್ಲಿ ತಿಳಿಸಿದೆ.

ಕಲಿಕೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಪರಿವರ್ತಕ ಸಾಮರ್ಥ್ಯ ಗುರುತಿಸಲು ಸರ್ಕಾರವು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ಸಾಮರ್ಥ್ಯವನ್ನು ಜವಾಬ್ದಾರಿಯಿಂದ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಮಗ್ರ ನೀತಿ ರೂಪಿಸಬೇಕು. ಅದಕ್ಕಾಗಿ ಉನ್ನತಾಧಿಕಾರ ಸಮಿತಿ ರಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಸರ್ಕಾರವು ಸಾರ್ವಜನಿಕ ಶಿಕ್ಷಣದ ಮೇಲ್ವಿಚಾರಣೆ ಮತ್ತು ಸಂಘಟಿತ ಸುಧಾರಣೆ ಮೂಲಕ ಗುಣಾತ್ಮಕ ಶಿಕ್ಷಣದ ಗ್ಯಾರಂಟಿಯನ್ನು ಖಚಿತಪಡಿಸಬೇಕಾಗಿದೆ. ಸರ್ಕಾರಿ ಶಾಲಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು. ಈ ಪ್ರಾಧಿಕಾರವು ಆರ್ಟಿಇ ಕಾಯ್ದೆ ಸೇರಿದಂತೆ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಮೇ ಲ್ವಿಚಾರಣೆ ಮಾಡಲಿದೆ. ಸರ್ಕಾರ ಮತ್ತು ಶಾಸಕಾಂಗಕ್ಕೂ ವರದಿ ಒದಗಿಸಲಿದೆ. ಸಮಯೋಚಿತವಾಗಿ ಕೋರ್ಸ್ಗಳ ತಿದ್ದುಪಡಿಗೂ ಶಿಫಾರಸು ಮಾಡಲಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ತರಾತುರಿಯಲ್ಲಿ ಹುದ್ದೆ ಭರ್ತಿ ಬೇಡ

ಕರ್ನಾಟಕದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿ ಅಗತ್ಯವಾದರೂ ಉನ್ನತ ಶಿಕ್ಷಣದ ಬಗ್ಗೆ ಮರುಪರಿಶೀಲನೆ ಮಾಡದೇ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕತೆಯೊಂದಿಗೆ ಹೊಂದಾಣಿಕೆ ಆಗುವ ಅಪಾಯ ಉಂಟು ಮಾಡುತ್ತದೆ.

ಉಪಸಮಿತಿಗಳ ಶಿಫಾರಸುಗಳು ಏನು?

3-16 ವರ್ಷದ ಮಕ್ಕಳನ್ನು ಆರ್‌ಟಿಇಗೆ ಸೇರಿಸಲು ವ್ಯಾಪ್ತಿಯನ್ನು ವಿಸ್ತರಿಸಬೇಕು. ಅತಿಥಿ ಶಿಕ್ಷಕರನ್ನು ಕೊನೆಗೊಳಿಸಿ, ಆದ್ಯತೆ ಮೇಲೆ ಮಂಜೂರಾದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಶಾಲೆಗಳ ದೃಢವಾದ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರಿ ಶಾಲಾ ಅಭಿವೃದ್ಧಿ ಪ್ರಾಧಿಕಾರ (ಜಿಎಸ್ ಡಿಎ) ಸ್ಥಾಪಿಸುವುದು.

ಉತ್ತರ ಕರ್ನಾಟಕದಲ್ಲಿ 'ಹಸಿರು ದೀರ್ಘ ಗೋಡೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಏಕೆಂದರೆ ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದು ಇನ್ನಷ್ಟು ವಿಸ್ತಾರವಾಗದಂತೆ ತಡೆಯಲು 'ಹಸಿರು ಗೋಡೆʼ ನಿರ್ಮಾಣ ಆಗಬೇಕು. ಇದಕ್ಕೆ ಎರಡು ಮಾದರಿಗಳೂ ಇವೆ. ಆಫ್ರಿಕಾ ಖಂಡದಲ್ಲಿ 22 ರಾಷ್ಟ್ರಗಳು ಸೇರಿ 7800 ಕಿ.ಮೀ. ಉದ್ದದ ದಿ ಗ್ರೇಟ್ ಗ್ರೀನ್ ವಾಲ್ ನಿರ್ಮಾಣದಲ್ಲಿ ತೊಡಗಿವೆ.

ಭಾರತದಲ್ಲಿ ಗುಜರಾತ್ನಿಂದ ಹರ್ಯಾಣದವರೆಗೆ 4 ರಾಜ್ಯಗಳು ಸೇರಿ 1400 ಕಿ.ಮೀ. ಉದ್ದದ ‘ಗ್ರೇಟ್ ಗ್ರೀನ್ ವಾಲ್ ಆಫ್ ಇಂಡಿಯಾʼ ನಿರ್ಮಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬೆಳಗಾವಿಯಿಂದ ಬೀದರ್ವರೆಗೆ ಐದು ಜಿಲ್ಲೆಗಳು ಸೇರಿ 350 ಕಿ.ಮೀ. ಉದ್ದದ ‘ಹಸಿರು ದೀರ್ಘ ಗೋಡೆʼ ನಿರ್ಮಾಣದ ಆರಂಭಿಕ ಅಧ್ಯಯನಕ್ಕೆ 15 ಕೋಟಿ ರೂ. ಮೀಸಲಿಡಬೇಕು ಎಂದು ಶಿಫಾರಸು ಮಾಡಿದೆ.

ಕೃಷಿ ಕ್ಯಾಬಿನೆಟ್ ರಚನೆ, ಕೃಷಿ, ತೋಟಗಾರಿಕೆ, ಕೃಷಿ ಮಾರುಕಟ್ಟೆ ಇಲಾಖೆಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಿಸಬೇಕು. ಕರ್ನಾಟಕ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯ ಉನ್ನತ ಪರಿಷತ್ ಸ್ಥಾಪಿಸಬೇಕು.

ʼಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿʼ ಎಂಬ ಪರಿಷ್ಕೃತ ವರದಿಯನ್ನು ಆಧರಿಸಿ ರಾಜ್ಯ ಲಿಂಗ ನೀತಿ ರೂಪಿಸಬೇಕು. ವಲಸೆ ಪ್ರಮಾಣ ಮತ್ತು ಕಾರ್ಮಿಕರ ವರ್ಗದ ಅಂಕಿ ಅಂಶಗಳನ್ನು ಆಧರಿಸಿ, ನಗರ ಹಾಗೂ ಉಪನಗರಗಳಲ್ಲಿ ಮಹಿಳಾ ಕಾರ್ಮಿಕರಿಗಾಗಿ ಹಾಸ್ಟೆಲ್ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನದ ಮೊತ್ತ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದೆ.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಸಮಾನ ಸ್ವರೂಪದ ಸೇವೆ ನಿರ್ವಹಿಸುವ ಕಾರ್ಮಿಕರನ್ನು ಗೌರವಧನ ಆಧರಿತ ವ್ಯವಸ್ಥೆಯಿಂದ ಹೊರತಂದು ನ್ಯಾಯ ಸಮ್ಮತ ವೇತನದೊಂದಿಗೆ ಕಾಯಂ ಮಾಡಬೇಕು. ಕನಿಷ್ಠ 24 ಸಾವಿರ ಮಾಸಿಕ ವೆೇತನ ನಿಗದಿಪಡಿಸಬೇಕು. ಇತರ ಕಾರ್ಮಿಕರಿಗೆ ಅನ್ವಯಿಸುವ ಕನಿಷ್ಠ ವೇತನವನ್ನು ಅಧಿಸೂಚಿಸಬೇಕು.

ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಗತ್ಯ ಮೂಲಸೌಕರ್ಯ, ಸಿಬ್ಬಂದಿ ಹಾಗೂ ಲಾಜಿಸ್ಟಿಕ್ ಬೆಂಬಲ ಒದಗಿಸಿ, ವಿಶೇಷ ಪೊಲೀಸ್ ಠಾಣೆಗಳನ್ನು ಬಲಪಡಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.

Read More
Next Story