
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಿಹಾರದ 24 ಅಪ್ರಾಪ್ತ ಬಾಲಕರ ರಕ್ಷಣೆ.
ಬಾಲಕಾರ್ಮಿಕ ಪದ್ಧತಿ ವಿರುದ್ಧ ರಾಜ್ಯಾದ್ಯಂತ ಪೊಲೀಸ್ ಕಾರ್ಯಾಚರಣೆ: 800 ಮಕ್ಕಳ ರಕ್ಷಣೆ
ಬೆಂಗಳೂರು ನಗರವನ್ನು ಹೊರತುಪಡಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ 1,156 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಒಟ್ಟು 72 ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ.
ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಒಟ್ಟು 800 ಬಾಲಕಾರ್ಮಿಕರನ್ನು ರಕ್ಷಿಸಿದೆ.
ಸೆಪ್ಟೆಂಬರ್ 12ರಂದು ಬಿಡುಗಡೆಯಾದ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನಿಯಂತ್ರಣ ಕೊಠಡಿಯ ವರದಿಯ ಪ್ರಕಾರ, ರಾಜ್ಯದ 962 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಬೃಹತ್ ತಪಾಸಣಾ ಕಾರ್ಯವನ್ನು ನಡೆಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಒಟ್ಟು 16,951 ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು ಮತ್ತು ಇತರೆ ಅನುಮಾನಾಸ್ಪದ ಸ್ಥಳಗಳ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಪತ್ತೆ
ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಬಾಲಕಾರ್ಮಿಕ ಪದ್ಧತಿಯ ಪ್ರಕರಣಗಳು ವರದಿಯಾಗಿರುವುದು ಈ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ. ವರದಿಯ ಅಂಕಿ ಅಂಶಗಳ ಪ್ರಕಾರ, ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 188 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 5,897 ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಟ್ಟು 503 ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಕಾನೂನು ಉಲ್ಲಂಘಿಸಿದ 18 ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 450 ಸ್ಥಳಗಳಲ್ಲಿ ತಪಾಸಣೆ ನಡೆಸಿ 9 ಮಕ್ಕಳನ್ನು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸಿ, ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಒಪ್ಪಿಸಲಾಗಿದೆ.
ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ವಸ್ತುಸ್ಥಿತಿ
ಬೆಂಗಳೂರು ನಗರವನ್ನು ಹೊರತುಪಡಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ 1,156 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಒಟ್ಟು 72 ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ 25 ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಮತ್ತು ಮೂವರ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ 33, ಕೊಪ್ಪಳದಲ್ಲಿ 27, ಕಲಬುರಗಿ ನಗರದಲ್ಲಿ 22, ಚಿಕ್ಕಬಳ್ಳಾಪುರದಲ್ಲಿ 16 ಹಾಗೂ ಬಳ್ಳಾರಿಯಲ್ಲಿ 15 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಮೈಸೂರು ಜಿಲ್ಲೆ, ಹಾಸನ, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಕಾರವಾರ, ಚಿಕ್ಕಮಗಳೂರು, ಗದಗ, ರಾಯಚೂರು ಹಾಗೂ ರೈಲ್ವೆ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಯಾವುದೇ ಬಾಲಕಾರ್ಮಿಕರು ಪತ್ತೆಯಾಗಿಲ್ಲ ಎಂದು ವರದಿ ದೃಢಪಡಿಸಿದೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಮತ್ತು ಮಕ್ಕಳ ಪುನರ್ವಸತಿ
ರಕ್ಷಿಸಲ್ಪಟ್ಟ ಎಲ್ಲ ಮಕ್ಕಳಿಗೂ ಸೂಕ್ತ ಪುನರ್ವಸತಿ ಕಲ್ಪಿಸಲು ಇಲಾಖೆ ಕ್ರಮ ಕೈಗೊಂಡಿದೆ. ರಕ್ಷಣೆಗೊಳಗಾದ ಬಹುಪಾಲು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಸಮಿತಿಯ ಮೂಲಕ ಮುಂದಿನ ಪುನರ್ವಸತಿ ಪ್ರಕ್ರಿಯೆಗಳು ನಡೆಯಲಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ಷಿಸಲ್ಪಟ್ಟ ಮಕ್ಕಳನ್ನು ಅವರ ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಉಡುಪಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಯಮಾನುಸಾರ ಮಕ್ಕಳನ್ನು ಹಸ್ತಾಂತರಿಸಲಾಗಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರಿಗೆ ಬಹುತೇಕ ಕಡೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ. ಗಂಭೀರ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ 2 ಮತ್ತು ವಿಜಯಪುರದಲ್ಲಿ 3 ಸೇರಿದಂತೆ ಒಟ್ಟು 5 ಎಫ್‌ಐಆರ್‌ಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

