‘ಆರ್ಡರ್ಲಿ’ ಪದ್ಧತಿಯಿಂದ ಪೊಲೀಸರಿಗೆ ಮುಕ್ತಿ; ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಪಿ ಆದೇಶ
x
ಡಿಐಜಿ ಎಂ.ಎ.ಸಲೀಂ

‘ಆರ್ಡರ್ಲಿ’ ಪದ್ಧತಿಯಿಂದ ಪೊಲೀಸರಿಗೆ ಮುಕ್ತಿ; ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಪಿ ಆದೇಶ

ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕಾಗಿ ನೇಮಿಸಿಕೊಳ್ಳುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಮರಳಿ ಇಲಾಖೆ ಕೆಲಸಕ್ಕೆ ಪಡೆಯುವಂತೆ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಆದೇಶದಲ್ಲಿ ತಿಳಿಸಿದ್ದಾರೆ.


ಪೊಲೀಸ್‌ ಇಲಾಖೆಯಲ್ಲಿ ಬ್ರಿಟಿಷರ ಕಾಲದ ಗುಲಾಮಗಿರಿ ಪದ್ಧತಿ ಎಂದೇ ಬಿಂಬಿತವಾಗಿದ್ದ ‘ಆರ್ಡರ್ಲಿ’ ವ್ಯವಸ್ಥೆಗೆ ಕರ್ನಾಟಕ ಪೊಲೀಸ್ ಇಲಾಖೆ ಬ್ರೇಕ್‌ ಹಾಕಿದೆ.

ಆರ್ಡರ್ಲಿಗೆ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಇನ್ನು ಮುಂದೆ ಪೊಲೀಸ್‌ ಸಿಬ್ಬಂದಿಯ ಬದಲು ಹೊರಗುತ್ತಿಗೆ ಸಿಬ್ಬಂದಿಯನ್ನು ಆರ್ಡರ್ಲಿ ವ್ಯವಸ್ಥೆಗೆ ನೇಮಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕಾಗಿ ನೇಮಿಸಿಕೊಳ್ಳುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ಮರಳಿ ಇಲಾಖೆಯ ಕೆಲಸಕ್ಕೆ ನಿಯೋಜಿಸಿಕೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಏನು?

ಇನ್ನು ಮುಂದೆ ಎಸ್ಪಿ ಶ್ರೇಣಿಯಿಂದ ಡಿಜಿಪಿ, ಐಜಿಪಿ ಹಂತದ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡಲು ಪೊಲೀಸ್ ಸಿಬ್ಬಂದಿಯ ಬದಲಿಗೆ ಹೋಮ್ ಗಾರ್ಡ್ಸ್ (ಗೃಹ ರಕ್ಷಕ ದಳ) ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ, ತರಬೇತಿ ಪಡೆದ ಪೊಲೀಸರನ್ನು ಮನೆಗೆಲಸದಿಂದ ಮುಕ್ತಗೊಳಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ವಿವಿಧ ಶ್ರೇಣಿಯ ಅಧಿಕಾರಿಗಳಿಗೆ ಒಟ್ಟು 373 ಪರ್ಯಾಯ ಸಿಬ್ಬಂದಿ ಅಥವಾ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಒಂದು ವೇಳೆ ಅಧಿಕಾರಿಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಬೇಡವೆಂದಾದಲ್ಲಿ, ತಮಗೆ ನಿಗದಿಪಡಿಸಿದ ಮಿತಿಯೊಳಗೆ ಸಿಬ್ಬಂದಿಯನ್ನು ನೇಮಿಸಿಕೊಂಡು ಅದಕ್ಕೆ ತಗಲುವ ವೆಚ್ಚವನ್ನು 'ಆರ್ಡರ್ಲಿ ಭತ್ಯೆ'ಯಾಗಿ ಪಡೆಯಬಹುದಾಗಿದೆ. ಮನೆಗೆಲಸಕ್ಕೆ ನಿಯೋಜನೆಗೊಂಡಿದ್ದ ನೂರಾರು ಕಾನ್ಸ್ಟೇಬಲ್‌ಗಳು ಮತ್ತು ಹೆಡ್ ಕಾನ್ಸ್ಟೇಬಲ್‌ಗಳು ಈಗ ಮರಳಿ ಪೊಲೀಸ್ ಠಾಣೆಗಳಿಗೆ ಬರಲಿದ್ದು, ಇದರಿಂದ ಇಲಾಖೆಯ ದಕ್ಷತೆ ಹೆಚ್ಚಲಿದೆ.

ಆರ್ಡರ್ಲಿಗೆ ಹೆಚ್ಚಿದ್ದ ವಿರೋಧ

ದಶಕಗಳಿಂದಲೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಪೊಲೀಸ್ ಸಿಬ್ಬಂದಿ ಅಡುಗೆ ಮಾಡುವುದು, ತರಕಾರಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು ಮತ್ತು ಕುಟುಂಬದ ಸದಸ್ಯರೊಂದಿಗೆ ಶಾಪಿಂಗ್‌ಗೆ ಹೋಗುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಸಮವಸ್ತ್ರಧಾರಿ ಪೊಲೀಸರಿಂದ ಇಂತಹ ಮನೆಗೆಲಸ ಮಾಡಿಸುವುದು ಅವರ ಘನತೆಗೆ ಧಕ್ಕೆ ತರುತ್ತದೆ ಎಂಬ ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿತ್ತು.

ಈ ಹಿಂದಿನ ಹಲವು ಸರ್ಕಾರಗಳು ಆರ್ಡರ್ಲಿ ಪದ್ಧತಿ ರದ್ದುಗೊಳಿಸಲು ಪ್ರಯತ್ನಿಸಿದ್ದರೂ ಅದು ಸಂಪೂರ್ಣವಾಗಿ ಜಾರಿಯಾಗಿರಲಿಲ್ಲ. ಈಗ ಡಿಜಿಪಿ ಎಂ.ಎ. ಸಲೀಂ ಅವರು ಹೊರಡಿಸಿರುವ ಕಟ್ಟುನಿಟ್ಟಿನ ಆದೇಶವು ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಕೆಳಹಂತದ ಸಿಬ್ಬಂದಿಯಲ್ಲಿ ಸಂತಸ ತಂದಿದೆ.

Read More
Next Story