ʼಕರಾವಳಿ ಟೂರಿಸಂʼಗೆ ಬೂಸ್ಟರ್ ಡೋಸ್, ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಕಾಂಗ್ರೆಸ್ ಫೈಟ್, ತಮಿಳುನಾಡಿನ ಅನಧಿಕೃತ ಹಣ ಜಪ್ತಿ
ಸೆ.7ರೊಳಗೆ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತವಾಗಿ ಸಾಗಣೆ ಮಾಡುತ್ತಿದ್ದ 9ಕೋಟಿ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಲು ರಾಜ್ಯ ಸರ್ಕಾರವು ಸೆಪ್ಟೆಂಬರ್ 7ರೊಳಗೆ ಕರಡು ನೀತಿಯನ್ನು ಸಿದ್ಧಪಡಿಸಲಿದೆ. ಶುಕ್ರವಾರ ವಿಧಾನಸಭೆಯ ಸಮಿತಿ ಕೊಠಡಿಯಲ್ಲಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ನಡೆದ ಕರಾವಳಿ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳ ಸಭೆಯಲ್ಲಿ ಪ್ರವಾಸೋದ್ಯಮ ನೀತಿಯ ಕುರಿತು ಸಮಾಲೋಚನೆ ನಡೆಸಲಾಯಿತು.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 718.63 ಕೋಟಿ ರೂ. ಮೊತ್ತದ 45 ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಅಲ್ಲದೇ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಈ ಭಾಗದ ಪ್ರವಾಸೋದ್ಯಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿತ್ತು. ಅದರ ಭಾಗವಾಗಿಯೇ ಇಂದು ನಡೆದ ಈ ಸಭೆಯಲ್ಲಿ ಜನಪ್ರತಿನಿಧಿಗಳು ಹೂಡಿಕೆ ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಜಾರಿ, CRZ ಮತ್ತು ಅರಣ್ಯ ನಿಯಮಗಳ ಸರಳೀಕರಣ, ಚಲನಚಿತ್ರ ಚಿತ್ರೀಕರಣ ಮತ್ತು ಹೆಲಿ-ಟೂರಿಸಂ ಉತ್ತೇಜನಕ್ಕೆ ಕ್ರಮ ವಹಿಸಲು ಸಲಹೆ ನೀಡಿದರು.
ಜನಪ್ರತಿನಿಧಿಗಳ ಸಲಹೆ ಹಾಗೂ ಅಭಿಪ್ರಾಯ ಆಲಿಸಿದ ಸಚಿವರು, ಮಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿಗೆ ಅಂತಿಮ ರೂಪ ನೀಡಲಾಗುವುದು ಎಂದು ಭರವಸೆ ನೀಡಿದರು. ಇನ್ನು ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಸದಸ್ಯರು ಇಂದು ಸದನದ ಹೊರಗೂ ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧದ ಹೊರಗೆ ಕಪ್ಪುಬಟ್ಟೆ ಧರಿಸಿ ಪಾದಯಾತ್ರೆ ನಡೆಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಕಪ್ಪು ಬಟ್ಟೆ ಧರಿಸಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದರು.
ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಕೂಡ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು. ಆರೋಪ ಸಾಬೀತಾಗುವ ಮುನ್ನ ರಾಜೀನಾಮೆ ಕೇಳುವುದು ಸರಿಯಲ್ಲ; ಪ್ರಕರಣದ ತನಿಖೆ ನಡೆದು ಹಣ ವಶಪಡಿಸಿಕೊಳ್ಳಲಾಗಿದೆ. ಸದನದಲ್ಲಿ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡದೇ ಈ ರೀತಿ ಕಲಾಪಕ್ಕೆ ಅಡ್ಡಿಪಡಿಸುವುದು ಬಿಜೆಪಿ ಸದಸ್ಯರ ಘನತೆಗೆ ತಕ್ಕುದಲ್ಲ ಎಂದು ತಿರುಗೇಟು ನೀಡಿದರು.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯಿಲ್ಲದ 9 ಕೋಟಿ ರೂ. ನಗದನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಾಗೂ ಐಟಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಿಂದ ಹೊಸೂರಿಗೆ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವೀರಸಂದ್ರ ಸಿಗ್ನಲ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಣ ತಮಿಳುನಾಡಿನ ಜುವೆಲ್ಲರಿ ಶಾಪ್ ಮಾಲೀಕ ಸಚಿನ್ ಎಂಬುವರಿಗೆ ಸೇರಿದ್ದೆನ್ನಲಾಗಿದೆ. ಅಲ್ಲದೇ ಆತನನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನ ತೂತುಕುಡಿಯಲ್ಲಿರುವ ಸಚಿನ್ ನಿವಾಸದ ಮೇಲೆ ದಾಳಿ ನಡೆಸಿದಾಗಲೂ ಹೆಚ್ಚುವರಿ 1.3 ಕೋಟಿ ರೂ. ಪತ್ತೆಯಾಗಿದೆ. ಒಟ್ಟಾರೆ 10.3 ಕೋಟಿ ರೂ. ನಗದನ್ನು ಜಪ್ತಿ ಮಾಡಲಾಗಿದ್ದು, ಹಣದ ಮೂಲ ಹಾಗೂ ಇದರ ಹಿಂದಿರುವ ಜಾಲದ ಕುರಿತು ಐಟಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ.

