
ರಾಜ್ಯದಲ್ಲಿ ಮಳೆ ಕೊರತೆ ಭೀತಿ; ಬರ ಎದುರಿಸಲು ಸರ್ಕಾರದಿಂದ 'ಪಂಚಸೂತ್ರ'
ಎದುರಾಗಬಹುದಾದ ಬರಗಾಲ, ಕುಡಿಯುವ ನೀರಿನ ಸಮಸ್ಯೆಯ ಸವಾಲು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸರ್ಕಾರ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ರಾಜ್ಯದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ, ಮುಂಬರುವ ಮಳೆ ಕೊರತೆಯ ಭೀತಿ, ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿಯ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಬರಗಾಲ, ಕುಡಿಯುವ ನೀರಿನ ಸಮಸ್ಯೆ, ಸಿಡಿಲು ಹಾಗೂ ಭೂಕುಸಿತದಂತಹ ಸವಾಲುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ ರಾಜ್ಯದ ಮಳೆ ಮಾರುತಗಳ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಲಾಯಿತು. ಪೂರ್ವ ಮುಂಗಾರಿನಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, 5 ಜಿಲ್ಲೆಗಳಲ್ಲಿ ಅಧಿಕ ಹಾಗೂ 6 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಆದರೆ, 3 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ವರ್ಷದ ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆಯಿದ್ದರೂ, ತದನಂತರದ ದಿನಗಳಲ್ಲಿ ಮಳೆ ಕೊರತೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ವರದಿಗಳನ್ನು ಆಧರಿಸಿ ಚರ್ಚಿಸಲಾಯಿತು.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಲಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗಲಿದೆ. ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯು ಮೇ-ಜುಲೈ ವರೆಗೆ ತಟಸ್ಥವಾಗಿರಲಿದ್ದು, ನಂತರ ವರ್ಷಾಂತ್ಯದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂಬುದರ ಕುರಿತು ಸಮಾಲೋಚನೆ ನಡೆಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆ - ಟ್ಯಾಂಕರ್ ಪೂರೈಕೆ
ಬೇಸಿಗೆಯ ತಾಪ ಏರುತ್ತಿದ್ದಂತೆ ರಾಜ್ಯದ 207 ತಾಲೂಕುಗಳ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಈ ಪೈಕಿ ಈಗಾಗಲೇ 60 ತಾಲೂಕುಗಳು ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಹಳ್ಳಿ ಅಥವಾ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಮತ್ತು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೃಷಿಗಿಂತ ಮೊದಲು ಕುಡಿಯುವ ಉದ್ದೇಶಕ್ಕಾಗಿ ಆದ್ಯತೆಯ ಮೇರೆಗೆ ಕಾಯ್ದಿರಿಸಲು ನಿರ್ಧರಿಸಲಾಗಿದೆ.
ಪ್ರಾಣಹಾನಿ ತಡೆಗೆ ಕ್ರಮ
ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 60 ರಿಂದ 70 ಜನರು ಸಿಡಿಲಿನ ಅಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಅಮೂಲ್ಯ ಜೀವಗಳನ್ನು ಉಳಿಸಲು ಜನರಲ್ಲಿ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಸಿಡಿಲು ಬರುವ ಮುನ್ಸೂಚನೆ ಸಂದರ್ಭದಲ್ಲಿ ಜನರು ಮಾಡಬೇಕಾದ ಮತ್ತು ಮಾಡಬಾರದು ಕೆಲಸಗಳ ಕುರಿತು ಸಣ್ಣ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಗ್ರಾಮೀಣ ಭಾಗದ ಜನರಿಗೆ ಹವಾಮಾನ ಎಚ್ಚರಿಕೆಗಳನ್ನು ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಬಾಕಿ ಇರುವ ಬೆಳೆಹಾನಿ ಪರಿಹಾರವನ್ನು ರೈತರಿಗೆ ಶೀಘ್ರವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರವು 2025ರ ನ.17 ರಂದು ಕೇಂದ್ರ ಸರ್ಕಾರಕ್ಕೆ ಎರಡು ಪತ್ರಗಳನ್ನು ಸಲ್ಲಿಸಿದೆ. ಬೆಳೆ ಇನ್ಪುಟ್ ಸಬ್ಸಿಡಿಗಾಗಿ 614.90 ಕೋಟಿ ರೂ. ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳ ಮರುಸ್ಥಾಪನೆ ಮತ್ತು ಪುನರ್ ನಿರ್ಮಾಣಕ್ಕಾಗಿ 1521.67 ಕೋಟಿ ರೂ.ಗಳ ಪರಿಹಾರವನ್ನು ಕೋರಲಾಗಿದೆ. ಕೇಂದ್ರ ಸರ್ಕಾರದ ಐಎಮ್‌ಸಿಟಿ ತಂಡವು ಈಗಾಗಲೇ ಜ.11 ರಿಂದ 13 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ.
ಕರಾವಳಿ, ಮಲೆನಾಡು ರಕ್ಷಣೆಗೆ ಕ್ರಮ
ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತದ ಭೀತಿ ಹೆಚ್ಚಾಗಿರುವುದರಿಂದ, 2025-26ನೇ ಸಾಲಿನಲ್ಲಿ ಭೂಕುಸಿತ ಉಪಶಮನ ಕಾಮಗಾರಿಗಳಿಗಾಗಿ 466.63 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೆ, ಸಮುದ್ರ ಕೊರೆತವನ್ನು ತಡೆಯಲು ೧೯೮.೮೮ ಕೋಟಿ ರೂ.ಗಳ ಆರ್ಥಿಕ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗದ ಜನರ ಜೀವ ಮತ್ತು ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸಮಿತಿ ತಿಳಿಸಿದೆ.
ಮಳೆ ಕೊರತೆ ಎದುರಿಸಲು ಪಂಚಸೂತ್ರ ಕ್ರಮಗಳು
ಮುಂಬರುವ ಮಳೆ ಕೊರತೆಯನ್ನು ಎದುರಿಸಲು ಸರ್ಕಾರ ಐದು ಪ್ರಮುಖ ಕಾರ್ಯತಂತ್ರಗಳನ್ನು ರೂಪಿಸಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಾರಕ್ಕೊಮ್ಮೆ ಮಳೆಯ ಪ್ರಮಾಣ ಮತ್ತು ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸುವುದು, ಜಿಲ್ಲಾವಾರು ಬೆಳೆ ಆಕಸ್ಮಿಕ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಬರವನ್ನು ತಡೆದುಕೊಳ್ಳಬಲ್ಲ ಸುಧಾರಿತ ಬಿತ್ತನೆ ಬೀಜಗಳನ್ನು ರೈತರಿಗೆ ಒದಗಿಸಬೇಕು ಎಂದು ಸೂಚನೆ ನೀಡಲಾಗಿದೆ.
ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣದಂತಹ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವುದು ಮತ್ತು ಮೇವಿನ ಲಭ್ಯತೆಯ ಬಗ್ಗೆ ನಿರಂತರ ನಿಗಾ ವಹಿಸುವುದು. ಜಲಾಶಯಗಳ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮೊದಲ ಆದ್ಯತೆಯಾಗಿ ಮೀಸಲಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

