
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ
ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ: ಪಡಿತರ ಹಣ ಬಿಡುಗಡೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹ
ರಾಜ್ಯ ಸರ್ಕಾರವು ಜನವರಿ 2025ಕ್ಕೆ ಸಂಬಂಧಿಸಿದ ಪಡಿತರ ಚೀಟಿದಾರರಿಗೆ 657 ಕೋಟಿ ರೂ. ಹಣವನ್ನಾದರೂ ಹಾಕಲಿ ಅಥವಾ 5 ಕೆ.ಜಿ. ಅಕ್ಕಿಯನ್ನಾದರೂ ಮಾರ್ಚ್ ತಿಂಗಳ ಒಳಗೆ ಕೊಡಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಒತ್ತಾಯಿಸಿದರು.
ಎರಡು ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದ ಶಾಸಕ ಮಹೇಶ್ ಟೆಂಗಿನಕಾಯಿ, ಇದೀಗ ವಿಶೇಷ ಅಧಿವೇಶನದಲ್ಲಿಯೂ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಬಹುದೊಡ್ಡ ಮೋಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ(ಜ.30) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಜನವರಿ 2025ರ ಹಣವನ್ನಾದರೂ ಹಾಕಿ ಅಥವಾ ಅಕ್ಕಿಯನ್ನಾದರೂ ಕೊಡಿ ಎಂದು ಆಗ್ರಹಿಸಿದರು. ಗೃಹಲಕ್ಷ್ಮಿಯ 2025ರ ಫೆಬ್ರವರಿ, ಮಾರ್ಚ್ ತಿಂಗಳ 5 ಸಾವಿರ ಕೋಟಿ ಹಣವನ್ನು ಕೊಟ್ಟಿಲ್ಲ, ಬಡವರ ಪಾಲಿನ ಪಡಿತರವನ್ನೂ ವಿತರಿಸಿಲ್ಲ ಎಂದು ಟೀಕಿಸಿದರು.
657 ಕೋಟಿ ರೂ. ಹಣ ಜಮೆ ಮಾಡಲಿ
ರಾಜ್ಯ ಸರ್ಕಾರವು ಜನವರಿ 2025ಕ್ಕೆ ಸಂಬಂಧಿಸಿದ ಪಡಿತರ ಚೀಟಿದಾರರಿಗೆ 657 ಕೋಟಿ ರೂ. ಹಣವನ್ನಾದರೂ ಹಾಕಲಿ ಅಥವಾ 5 ಕೆ.ಜಿ. ಅಕ್ಕಿಯನ್ನಾದರೂ ಮಾರ್ಚ್ ತಿಂಗಳ ಒಳಗೆ ಕೊಡಬೇಕು ಎಂದು ಒತ್ತಾಯಿಸಿದರು. ಇದು ಭಿಕ್ಷೆ ಹಾಕುವುದಲ್ಲ. ಗ್ಯಾರಂಟಿ ಘೋಷಿಸುವಾಗ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿದ್ದರು. ಆದರೆ, 5 ಕೆ.ಜಿ. ಅಕ್ಕಿ ಕೊಡುತ್ತಿದ್ದಾರೆ. ಉಳಿದ 5 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದರು.
ಕೊಟ್ಟ ಮಾತನ್ನು ಉಳಿಸಿಕೊಳ್ಳಿ
ಒಂದು ತಿಂಗಳು ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸದಿರುವುದಕ್ಕೆ 657 ಕೋಟಿ ರೂ. ಉಳಿತಾಯವಾಯಿತೇ? ಹಣಕಾಸಿನ ತೊಂದರೆ ಇದೆಯೇ? ಎಂದು ಕೇಳಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ಸಚಿವರು ಮಾಡಬೇಕು. 1 ಕೋಟಿ 27 ಲಕ್ಷ ಜನರಿಗೆ ಅಕ್ಕಿ ಕೊಡುವುದಾಗಲಿ ಅಥವಾ ಹಣ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಿಂದ ಮೋಸ
ಸಚಿವರು ಸದನದಲ್ಲಿ ಉತ್ತರ ಕೊಡುವ ವೇಳೆ ಇದನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಪ್ರಯತ್ನ ಮಾಡಿದ್ದರು. ಇದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರ ಹಣ ಪಾವತಿಸಿದರೆ ಶೀಘ್ರವೇ ಅಕ್ಕಿ ಕೊಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ರೀತಿಯ ಪಾಲಿಲ್ಲ. ರಾಜ್ಯ ಸರ್ಕಾರವೇ ಮೋಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

