ಕೇಂದ್ರ ಬಜೆಟ್ ವಿರುದ್ಧ ರಾಜ್ಯ ಸರ್ಕಾರ ಕಿಡಿ: ರಾಜ್ಯದ ಹಿತಾಸಕ್ತಿ ಬಲಿ ಎಂದ ಸಚಿವರು
x

ಕೇಂದ್ರ ಬಜೆಟ್ ವಿರುದ್ಧ ರಾಜ್ಯ ಸರ್ಕಾರ ಕಿಡಿ: ರಾಜ್ಯದ ಹಿತಾಸಕ್ತಿ ಬಲಿ ಎಂದ ಸಚಿವರು

ಯಾವ ಹೈ ಸ್ಪೀಡ್‌ ರೈಲು ರೀ.. ಯಾವ ಸ್ಫಿಡ್‌ ರೈಲೂ ಬರುವುದಿಲ್ಲ. ಬೇರೆ ರಾಜ್ಯಗಳಿಗೆ ನೀಡುವಂತೆ ಕರ್ನಾಟಕಕ್ಕೂ 90:10 ಅನುಪಾತದಲ್ಲಿ ಅನುದಾನ ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌, ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ರಾಜಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಅನುದಾನವನ್ನು ಒದಗಿಸಿಲ್ಲ. ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಏನಾದರೂ ಸಿಕ್ಕಿದೆಯೇ ಎಂಬುದನ್ನು ಗಮನಿಸಿದರೆ ಏನೂ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರ ಟೀಕಿಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಂ.ಪಿ.ಪಾಟೀಲ್‌, ಶಿವಾನಂದ ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕೇಂದ್ರದ ಬಜೆಟ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಹೈ ಸ್ಪೀಡ್‌ ರೈಲು ಕೇವಲ ಘೋಷಣೆಗೆ ಸೀಮಿತ, ಯಾವ ರೈಲೂ ಬರುವುದಿಲ್ಲ ಎಂದು ಲೇವಡಿ ಮಾಡಿದರು. ಬೇರೆ ರಾಜ್ಯಗಳಿಗೆ ನೀಡುವಂತೆ ಕರ್ನಾಟಕಕ್ಕೂ 90:10 ಅನುಪಾತದಲ್ಲಿ ಅನುದಾನ ನೀಡಲಿ, ರಾಜ್ಯದ ಮೇಲೆ ಶೇ. 50ರಷ್ಟು ಹೊರೆ ಹಾಕುವುದು ಸರಿಯಲ್ಲ. ಈ ಬಜೆಟ್​​ನಿಂದ ಯಾವುದೇ ಅನುಕೂಲ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ಕೊಡಲಾಗಿದೆ. ವಿಬಿ ಜಿ ರಾಮ್‌ ಜಿ ಯೋಜನೆಯಲ್ಲೂ ಎಐ ಬಳಕೆ‌ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೃಷಿಯಲ್ಲಿ ಎಐ ಬಳಕೆ ಎಂಬುದೇ ಹಾಸ್ಯಾಸ್ಪದ. ಎಐನಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರಾಶಾದಾಯಕ ಬಜೆಟ್‌ : ಎಂ.ಬಿ.ಪಾಟೀಲ್‌

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ಕಾರ್ಯಪರಿಸರ ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಪರಿಗಣಿಸಲು ಮನವಿ ಮಾಡಿದ್ದೆವು. ಆದರೆ, ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಚಕಾರ ಎತ್ತಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದರೂ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದನ್ನು ನರೇಂದ್ರ ಮೋದಿ ಸರ್ಕಾರವು ಪರಿಗಣಿಸದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜವಳಿ ಕ್ಷೇತ್ರ ನಿರ್ಲಕ್ಷ್ಯ : ಸಚಿವ ಶಿವಾನಂದ ಪಾಟೀಲ

ಜವಳಿ ಸಚಿವ ಶಿವಾನಂದ ಪಾಟೀಲ್‌ ಮಾತನಾಡಿ, ಬಾಂಗ್ಲಾದ ಪರಿಸ್ಥಿತಿಯ ಲಾಭ ಪಡೆದು ದೇಶದ ಜವಳಿ ಉದ್ಯಮ ಪುನಶ್ಚೇತನ ಹಾಗೂ ಕೃಷಿ ಆದಾಯ ದುಪ್ಟಟ್ಟುಗೊಳಿಸಿ ರೈತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿನ ನಿರೀಕ್ಷೆಗಳು ಹುಸಿಯಾಗಿವೆ. ದೇಶದ ಜವಳಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಬಜೆಟ್ ಸೋತಿದೆ. ರೈತರ ಆದಾಯ ದ್ವಿಗುಣಕ್ಕೆ ಪೂರಕವಾಗಿ ರೈತರ ಹಿತರಕ್ಷಣೆಯ ಕ್ರಮಗಳನ್ನು ಪ್ರಸ್ತಾಪ ಮಾಡಿಲ್ಲ. ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಯ ಪ್ರಮಾಣ ಹೆಚ್ಚಳ ಮಾಡುವ ಅಗತ್ಯವಿದೆ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಸಮಸ್ಯೆ ಇದೆ. ಈ ಸಚಿವ ಪ್ರಲ್ಹಾದ ಜೋಶಿ ಕೇಂದ್ರದ ಮೇಲೆ ಒತ್ತಡ ತರಬೇಕಾಗಿದೆ ಎಂದು ಆಗ್ರಹಿಸಿದರು.

ರಾಜ್ಯವನ್ನು ನಿರ್ಲಕ್ಷ್ಯಿಸಿದ ಬಜೆಟ್‌: ಲಕ್ಷ್ಮೀ ಹೆಬ್ಬಾಳ್ಕರ್‌

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಾಜ್ಯದ ಹಿರಿಯ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯದ ವಿರುದ್ಧ ಸೊಲ್ಲೆತ್ತುತ್ತಿಲ್ಲ. ರಾಜ್ಯದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರಂತಹ ಹಿರಿಯ ನಾಯಕರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ ಎಂದು ಕಿರಿಕಾಡಿದರು.

ರೈತ ಸಂಘಟನೆಗಳ ಒಕ್ಕೂಟ ಆಕ್ರೋಶ

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಯಾವುದೇ ಕ್ರಾಂತಿಕಾರಿ ಯೋಜನೆಗಳಿಲ್ಲದಿರುವುದು ನಿರಾಸೆ ತಂದಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಸಬ್ಸಿಡಿ ಮೂಲಕ ಒತ್ತು ನೀಡಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ಎಂದು ಹೇಳಿದ್ದಾರೆ.

ನಕಲಿ ಅಂಕಿ ಅಂಶಗಳಿಂದ ಕೂಡಿದ ಬಜೆಟ್‌

2026ನೇ ಸಾಲಿನ ಬಜೆಟ್‌, ನೈಜ ಆರ್ಥಿಕತೆಯ ಪ್ರತಿಬಿಂಬವಾಗಿರದೇ ಪ್ರಶ್ನಾರ್ಹ ರೀತಿಯಲ್ಲಿ ಸಂಗ್ರಹಿಸಿದ ನಕಲಿ ಅಂಕಿ ಅಂಶಗಳಿಂದ ಕೂಡಿದ ಬಿಜೆಪಿ ಸರ್ಕಾರದ 'ಅದ್ಭುತ' ಕಾರ್ಯಕ್ಷಮತೆಯ ಬಗ್ಗೆ ರೂಪಿಸಲಾದ ಸ್ವಯಂ ಪ್ರಶಂಸೆಯ ದಾಖಲೆಯಾಗಿದೆ ಎಂದು ಎಸ್‌ಯುಸಿಐ ಟೀಕಿಸಿದೆ.

ಯಾವುದೇ ಸ್ಪಷ್ಟ ವಲಯವಾರು ಅನುದಾನದ ಹಂಚಿಕೆಯನ್ನು ಬಜೆಟ್‌ನಲ್ಲಿ ವಿವರಿಸಿಲ್ಲ. ಬಜೆಟ್ ಭಾಷಣವು ಅತಿಯಾದ ಶೈಕ್ಷಣಿಕ ಪಾರಿಭಾಷಿಕ ಪದಗಳಬಳಕೆಯಿಂದ ಗೊಂದಲಮಯವಾಗಿದೆ. ದೊಡ್ಡ ಉದ್ಯಮಿಗಳಿಗೆ ಮತ್ತು ತೆರಿಗೆ ಕಳ್ಳರಿಗೆ ಹೆಚ್ಚಿನ ರಿಯಾಯಿತಿ ಮತ್ತು ಸೌಲಭ್ಯ ಕಲ್ಪಿಸಿದೆ. ಜನರ ಜೀವನದಲ್ಲಿ ತಲ್ಲಣ ಮೂಡಿಸುತ್ತಿರುವ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗ, ಕೈಗಾರಿಕೆಗಳ ಸ್ಥಗಿತ, ಉದ್ಯೋಗ ನಷ್ಟಕ್ಕೆ ಯಾವುದೇ ಪರಿಹಾರ ಸೂಚಿಸಿಲ್ಲ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story