ಹಸು ಹಾಲಿಗೆ 7 ರೂ. ಹೆಚ್ಚಳ, ಎಮ್ಮೆ ಹಾಲಿಗೆ 4 ರೂ. ಕಡಿತ- ಖರೀದಿ ದರದಲ್ಲಿ ತಾರತಮ್ಯವೇಕೆ?
ನವೆಂಬರ್ 1, 2026ಕ್ಕೂ ಮುನ್ನ ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ 47 ರೂ. ಖರೀದಿ ದರವಿತ್ತು. ಆದರೆ ಹೊಸ ಪರಿಷ್ಕರಣೆಯಲ್ಲಿ ಈ ದರವನ್ನು ₹4 ಕಡಿತಗೊಳಿಸಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹಾಲಿನ ಖರೀದಿ ದರ ಪರಿಷ್ಕರಣೆಯ ಬೆನ್ನಲ್ಲೇ ಉತ್ತರ ಕರ್ನಾಟಕದ ಎಮ್ಮೆ ಸಾಕಾಣಿಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಸುವಿನ ಹಾಲಿಗೆ ಪ್ರತಿ ಲೀಟರ್‌ಗೆ 7 ರೂ. ಹೆಚ್ಚುವರಿ ದರ ನೀಡಲಾಗಿದ್ದರೆ, ಎಮ್ಮೆ ಹಾಲಿಗೆ 4 ರೂ. ಕಡಿತ ಮಾಡಲಾಗಿದೆ ಎಂಬುದು ರೈತರ ಆರೋಪ. ಇದರಿಂದ ಎಮ್ಮೆ ಸಾಕಾಣಿಕೆದಾರರು ಪ್ರತಿ ಲೀಟರ್‌ಗೆ ಒಟ್ಟು 11 ರೂ.ಗಳಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆತಂಕ ವ್ಯಕ್ತಪಡಿಸಿದೆ.
ನವೆಂಬರ್ 1, 2026ಕ್ಕೂ ಮುನ್ನ ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ 47 ರೂ. ಖರೀದಿ ದರವಿತ್ತು. ಆದರೆ ಹೊಸ ಪರಿಷ್ಕರಣೆಯಲ್ಲಿ ಈ ದರವನ್ನು ೪ರೂ. ಕಡಿತಗೊಳಿಸಲಾಗಿದೆ ಎಂದು ರೈತರು ತಿಳಿಸಿದ್ದಾರೆ. ಹೀಗಾಗಿ ಹಳೆಯ ದರಕ್ಕೆ 7 ರೂ. ಸೇರಿಸಿ, ಎಮ್ಮೆ ಹಾಲಿಗೂ ಪ್ರತಿ ಲೀಟರ್‌ಗೆ 54 ರೂ. ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಾವೇರಿ, ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎಮ್ಮೆ ಸಾಕಾಣಿಕೆ ಅನೇಕ ಕುಟುಂಬಗಳ ಪ್ರಮುಖ ಆದಾಯದ ಮೂಲವಾಗಿದೆ. ಹಸುವಿಗೆ ಹೋಲಿಸಿದರೆ ಎಮ್ಮೆಯ ಹಾಲಿನ ಇಳುವರಿ ಕಡಿಮೆ. ಮೇವು, ಪಶು ಆಹಾರ, ಔಷಧೋಪಚಾರ ಮತ್ತು ಕಾರ್ಮಿಕರ ವೆಚ್ಚವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಖರೀದಿ ದರ ಕಡಿತ ಮಾಡಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ ಎಂಬುದು ಸಂಘಟನೆಯ ವಾದ.
ಎಮ್ಮೆ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಿದ್ದರೂ ಕಡಿಮೆ ಬೆಲೆ ನೀಡುತ್ತಿರುವುದೇಕೆ? ಗ್ರಾಹಕರಿಗೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸುವ ಕೆಎಂಎಫ್, ರೈತರಿಂದ ಖರೀದಿಸುವಾಗ ನ್ಯಾಯಯುತ ದರ ನೀಡುತ್ತಿಲ್ಲವೇಕೆ ಎಂದು ರೈತರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಕೆಎಂಎಫ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿರುವ ರೈತರು, ಸರ್ಕಾರ ಮತ್ತು ಕೆಎಂಎಫ್ ಕೂಡಲೇ ಮಧ್ಯಪ್ರವೇಶಿಸಿ ಎಮ್ಮೆ ಹಾಲಿಗೆ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಚಾರ ವಿಧಾನಸಭೆಯಲ್ಲೂ ಚರ್ಚೆಯಾಗಬೇಕು ಎಂಬುದು ಅವರ ಆಗ್ರಹವಾಗಿದೆ.
