
Internal Reservation| ಸಂಪುಟ ಸಭೆ ಮುಂದೂಡಿಕೆ; ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ 'ಎಡಗೈ' ಆಗ್ರಹ,
ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದಾಗಿ ಸಮುದಾಯವು ಇಂತಹ ಪರಿಸ್ಥಿತಿ ಎದುರಿಸುತ್ತಿದೆ. "ನಮ್ಮ ಜನರಿಗೆ ನಾವು ಹೇಳುವುದು ಇಷ್ಟೇ, ನಿಮ್ಮ ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ. ಯಾರು ಒಳ ಮೀಸಲಾತಿ ಪರವಾಗಿ ದೃಢವಾಗಿ ನಿಲ್ಲುತ್ತಾರೋ ಅವರಿಗೆ ಮಾತ್ರ ಮತ ಹಾಕಬೇಕು" ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತಾಂತ್ರಿಕ ಕಾರಣ ಮುಂದಿಟ್ಟು ಅನಗತ್ಯ ವಿಳಂಬ ಮಾಡುತ್ತಿರುವುದಕ್ಕೆ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರವು ಮಾದಿಗ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂಬುದು ವಿಶೇಷ ಸಂಪುಟ ಸಭೆ ಮುಂದೂಡಿಕೆಯಿಂದ ಋಜುವಾತಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಆರೋಪಿಸಿದೆ.
ಶೇ 50 ಮೀಸಲಾತಿ ಹಾಗೂ ಹಳೆಯ ರೋಸ್ಟರ್‌ನಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಉಳಿಸಿಕೊಳ್ಳಲು ಹಾಗೂ ಬಲಗೈ ಸಮುದಾಯದವರನ್ನು ಓಲೈಸಲು ನೀತಿ ಸಂಹಿತೆ ಅಡ್ಡಿಯಾಗುವ ಎಂಬ ಕುಂಟು ನೆಪ ಹೇಳಿದೆ. ನೇಮಕಾತಿ ಅಧಿಸೂಚನೆಗೆ 30 ದಿನಗಳ ಗಡುವು ಮುಗಿದ ಹಿನ್ನೆಲೆ ದಿಢೀರನೇ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿದೆ. ಆ ಮೂಲಕ ಮಾದಿಗ ಸಮುದಾಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಿ.ಎ.ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸಮಿತಿಯು ಈಗಾಗಲೇ ಕೈಗೊಂಡಿರುವ ನಿರ್ಣಯದಂತೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಲಾಗುವುದು. ಆದಾರೂ, ರಾಜ್ಯ ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದು, ಒಳ ಮೀಸಲಾತಿ ಜಾರಿ ತಡೆ ಹಿಡಿದಿದೆ. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮತ ಬ್ಯಾಂಕ್ ಮೂಲಕವೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುವ ಮೂಲಕ ರಾಜ್ಯದಲ್ಲಿ ಅಸಂವಿಧಾನಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಗೃಹ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಸಮುದಾಯದ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಅಲೆಮಾರಿಗೂ ದ್ರೋಹ ಬಗೆದ ಸರ್ಕಾರ
"ಅಲೆಮಾರಿಗಳು ಕೇವಲ ಒಂದು ಜಾತಿಯಲ್ಲ. ಅದರಲ್ಲಿ ಅತ್ಯಂತ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದಿದ ಜಾತಿಗಳೂ ಇವೆ. ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿರುವ ಅಲೆಮಾರಿಗಳನ್ನು ಮಾದಿಗ ಸಂಬಂಧಿತ ಜಾತಿಗಳಲ್ಲೇ ಮುಂದುವರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದಕ್ಕಲಿಗ ಸೇರಿದಂತೆ ಹಲವು ಸಮುದಾಯಗಳನ್ನು ಸೇರಿಸಲು ಒತ್ತಾಯಿಸಲಾಗಿದೆ ಎಂದರು.
ಒಳ ಮೀಸಲಾತಿ ಜಾರಿಗೆ ಚುನಾವಣಾ ನೀತಿ ಸಂಹಿತೆ ಯಾವುದೇ ಕಾರಣಕ್ಕೂ ಅಡ್ಡಿ ಬರುವುದಿಲ್ಲ. ಈಗಾಗಲೇ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಅದು ಕಾನೂನುಬದ್ಧವಾಗಿದೆ. ಆದರೆ, ಸರ್ಕಾರವು ಜಾತಿ ಸಂಘರ್ಷದ ನೆಪ ಹೇಳಿ ಬಲಗೈ ಸಮುದಾಯದ ನಡುವೆ 'ಒಳ ಒಪ್ಪಂದ' ಮಾಡಿಕೊಂಡು ವಿಶೇಷ ಸಂಪುಟ ಸಭೆ ಮುಂದೂಡಿದೆ ಎಂದು ಕೇಶವಮೂರ್ತಿ ಆರೋಪಿಸಿದರು.
ಮತ ಮಾರಿಕೊಳ್ಳದಂತೆ ಸಮುದಾಯದವರಿಗೆ ಕರೆ
ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದಾಗಿ ಸಮುದಾಯವು ಇಂತಹ ಪರಿಸ್ಥಿತಿ ಎದುರಿಸುತ್ತಿದೆ. "ನಮ್ಮ ಜನರಿಗೆ ನಾವು ಹೇಳುವುದು ಇಷ್ಟೇ, ನಿಮ್ಮ ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ. ಯಾರು ಒಳ ಮೀಸಲಾತಿ ಪರವಾಗಿ ದೃಢವಾಗಿ ನಿಲ್ಲುತ್ತಾರೋ ಅವರಿಗೆ ಮಾತ್ರ ಮತ ಹಾಕಬೇಕು" ಎಂದು ಮನವಿ ಮಾಡಿದರು.
ಎಡಗೈ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಅವರಂತಹ ಹಿರಿಯ ಸಚಿವರ ಒತ್ತಡದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಬಲಗೈ ಸಮುದಾಯದ ಒತ್ತಡಕ್ಕೆ ಮಣಿದು, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಗುರುವಾರವೇ(ಮಾ.26) ಸಂಪುಟ ಸಭೆ ನಡೆಸಿ, ನಾಳಿನ ವಿಶೇಷ ಸಚಿವ ಸಂಪುಟ ಮುಂದೂಡಿದೆ. ಇದರ ವಿರುದ್ಧ ಸಮುದಾಯವು ಕಾನೂನು ಸೇರಿದಂತೆ ಎಲ್ಲ ರೀತಿಯ ಹೋರಾಟ ಮುಂದುವರಿಸಲಿದೆ. ಮಾದಿಗ ಸಮುದಾಯವನ್ನು ಇಷ್ಟೊಂದು ಕ್ರೂರವಾಗಿ ಯಾವ ಸರ್ಕಾರವೂ ನಡೆಸಿಕೊಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಕೆಟ್ಟ ರೀತಿಯಲ್ಲಿ ನಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

