
Internal Reservation| ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಚರ್ಚೆ ಅಪೂರ್ಣ; ಸರ್ಕಾರದ ವಿರುದ್ಧ ನಾಳೆಯಿಂದ ಎಡಗೈ ಸಮುದಾಯ ಹೋರಾಟ
ಶುಕ್ರವಾರ (ಮಾ.6) ರಾಜ್ಯದ ಎಲ್ಲ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸ್ವಾಭಿಮಾನಿ ಮಾದಿಗ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಒಳ ಮೀಸಲಾತಿಗಾಗಿ ಮೂವತ್ತೈದು ವರ್ಷಗಳಿಂದ ಸುದೀರ್ಘ ಹೋರಾಟ ನಡೆಸಿದ್ದ ಪರಿಶಿಷ್ಟ ಜಾತಿಯ ಎಡಗೈ( ಮಾದಿಗ) ಸಮುದಾಯಗಳು ಮತ್ತೆ ಹೋರಾಟಕ್ಕೆ ಧುಮುಕಿವೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಚರ್ಚೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ.6 ರಿಂದಲೇ 'ಮಾಡು ಇಲ್ಲವೇ ಮಡಿ' ಹೋರಾಟ ಆರಂಭಿಸಲು ತಯಾರಿ ನಡೆಸಿದೆ.
ಶುಕ್ರವಾರ (ಮಾ.6) ರಾಜ್ಯದ ಎಲ್ಲ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸ್ವಾಭಿಮಾನಿ ಮಾದಿಗ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಸಂಪುಟದಲ್ಲಿ ಚರ್ಚೆ ಅಪೂರ್ಣ
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತಂತೆ ಸುದೀರ್ಘ ಚರ್ಚೆ ನಡೆದರೂ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಸಿಎಂ ಸಿದ್ದರಾಮಯ್ಯ ಅವರು ಎಡಗೈ ಹಾಗೂ ಬಲಗೈ ಸಮುದಾಯ ಸಚಿವರ ಅಭಿಪ್ರಾಯ ಆಲಿಸಿದರು.
ರಾಜ್ಯ ಸರ್ಕಾರ ಆರಂಭಿಸಿರುವ 56,000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸಬೇಕು ಎಂದು ಎಡಗೈ ಸಮುದಾಯದ ಸಚಿವರು ಪಟ್ಟು ಹಿಡಿದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಒಳ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಆತುರದ ನಿರ್ಧಾರ ಕೈಗೊಂಡರೆ ಕಾನೂನು ಸಂಕಷ್ಟಗಳು ಎದುರಾಗಬಹುದು ಎಂದು ಸಲಹೆ ನೀಡಿದರು.
ಆಗ ಸಿಎಂ ಸಿದ್ದರಾಮಯ್ಯ ಅವರು ಎಡ ಮತ್ತು ಬಲ ಸಮುದಾಯ ಪ್ರತಿನಿಧಿಸುವ ಪ್ರತಿಯೊಬ್ಬ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿದರು.
ಎಡಗೈ ಸಮುದಾಯದ ಸಚಿವರಾದ ಕೆ.ಹೆಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಅವರು, "ಒಳಮೀಸಲಾತಿ ಜಾರಿಯಾಗದೆ ನೇಮಕಾತಿ ನಡೆದರೆ ಸಮುದಾಯಕ್ಕೆ ಅನ್ಯಾಯವಾಗಲಿದೆ. ತಕ್ಷಣವೇ ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಜಾರಿಗೆ ತರಬೇಕು," ಎಂದು ಪಟ್ಟು ಹಿಡಿದರು.
ಯಾವುದೇ ನಿರ್ಧಾರಕ್ಕೆ ಬಾರದ ಸಭೆ
ಸುದೀರ್ಘ ಚರ್ಚೆಯ ನಂತರವೂ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಿಲ್ಲ. ಒಳ ಮೀಸಲಾತಿ ಕುರಿತು ಸೋಮವಾರ ಅಥವಾ ಮಂಗಳವಾರ ಮತ್ತೊಮ್ಮೆ ಚರ್ಚಿಸೋಣ ಎಂದು ಸಿಎಂ ಹೇಳಿದರು.
ಶೇ.56 ರಷ್ಟು ಮೀಸಲಾತಿ ಮತ್ತು ಶೇ 17 ರಷ್ಟು ಮೀಸಲಾತಿ ಆಧಾರದ ಮೇಲೆ ಹಂಚಿಕೆ ಮಾಡಿರುವ ಒಳಮೀಸಲಾತಿಗೆ ನ್ಯಾಯಾಲಯ ತಡೆ ನೀಡಿದೆ.
ಹೀಗಿರುವಾಗ, ನ್ಯಾಯಾಲಯದ ಆದೇಶ ಬಳಿಕವೇ ಒಳ ಮೀಸಲಾತಿ ಅನುಸಾರ ಹುದ್ದೆಗಳನ್ನು ಭರ್ತಿ ಮಾಡಬಹುದು ಎಂದು ಸಚಿವರಾದ ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ ಸೇರಿ ಬಲಗೈ ಸಮುದಾಯದ ನಾಯಕರು ಹೇಳಿದರು. ಎರಡೂ ಕಡೆ ಒಮ್ಮತದ ತೀರ್ಮಾನಕ್ಕೆ ಬಾರದ ಕಾರಣ ಚರ್ಚೆ ಮುಂದೂಡಲಾಯಿತು.
ಕಾನೂನು ತಜ್ಞರ ಮೊರೆ
ಪ್ರಸ್ತುತ, 56 ಸಾವಿರ ಹುದ್ದೆಗಳಿಗೆ ಶೇ 15 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲು ಹಂಚಿಕೆ ಮಾಡುವ ಸಂಬಂಧ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ, ಕಾನೂನು ತೊಡಕುಗಳಿಲ್ಲದೆ ಒಳಮೀಸಲಾತಿ ಹೇಗೆ ಜಾರಿಗೊಳಿಸಬಹುದು ಎಂಬ ಬಗ್ಗೆ ವರದಿ ಪಡೆಯಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಮಾದಿಗ ಸಮುದಾಯ ಕಿಡಿ
ಒಳಮೀಸಲಾತಿ ಜಾರಿ ಮಾಡದೇ ನೇಮಕಾತಿ ನಡೆಸುವುದಕ್ಕೆ ಮಾದಿಗ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮತ್ತೆ ಹೋರಾಟಕ್ಕಿಳಿಯಲು ಅಣಿಯಾಗಿವೆ.
ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕ್ಷಣದಿಂದಲೂ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಗೆ ಬದ್ಧವಿರುವಂತೆ ತೋರಿಸಿಕೊಳ್ಳುತ್ತಿದೆ. ಒಳ ಮೀಸಲಾತಿ ನೀಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಕಾಂಗ್ರೆಸ್ ವಿರುದ್ಧದ ನಮ್ಮ ಹೋರಾಟ ಹತ್ತಿಕ್ಕಲು ಈಗ ಶೇ 15 ರಲ್ಲೇ ಒಳಮೀಸಲಾತಿ ಒದಗಿಸುವ ಸುಳ್ಳು ಭರವಸೆ ನೀಡುತ್ತಿದೆ. ಯಾವುದೇ ಕಾರಣಕ್ಕೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರಾಜ್ಯಾದ್ಯಂತ ಎಡಗೈ ಸಮುದಾಯ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸ್ವಾಭಿಮಾನಿ ಮಾದಿಗ ಸಮುದಾಯಗಳ ಒಕ್ಕೂಟದ ಸಂಚಾಲಕ ಕೇಶವಮೂರ್ತಿ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಮಾ.6 ರಂದು ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದು. ಮಾ.12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಉದ್ದೇಶಪೂರ್ವಕ ನಾಟಕ ಆರೋಪ
ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಒಳ ಮೀಸಲಾತಿ ನೀಡಲು ಇಷ್ಟವಿಲ್ಲ, ವೋಟ್ ಬ್ಯಾಂಕ್ ಗಾಗಿ ಮತ್ತೊಮ್ಮೆ ನಾಟಕ ಆರಂಭಿಸಿದೆ. ಒಳ ಮೀಸಲಾತಿ ಜಾರಿಗೂ ಮುನ್ನ ರಾಜ್ಯಪಾಲರು ಹಾಗೂ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ. ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ತೋರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ನಾಟಕವಾಡಿದ್ದಾರೆ. ಈಗ ಶೇ 15 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲು ನೀಡುವ ಭರವಸೆ ನೀಡುತ್ತಿದೆ. ಇಂತಹ ಭರವಸೆಗಳನ್ನು ನೋಡಿ ಸಾಕಾಗಿದೆ. ಆಂತರ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ ಎಂಬುದು ಸಮುದಾಯಕ್ಕೆ ಮನವರಿಕೆಯಾಗಿದೆ. ಕಾಂಗ್ರೆಸ್ ವಿರುದ್ದ ರಾಜ್ಯಾದ್ಯಂತ ಇಡೀ ಸಮುದಾಯ ಹೋರಾಟ ನಡೆಸಲಿದೆ. ಜತೆಗೆ ಮುಂದಿನ ಚುನಾವಣೆಯಲ್ಲೂ ಪಾಠ ಕಲಿಸುತ್ತೇವೆ ಎಂದು ಕೇಶವ ಮೂರ್ತಿ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಶೇ 15 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲಾತಿ ಕಲ್ಪಿಸುವುದಾದರೆ ಸದಾಶಿವ ಆಯೋಗ ವರದಿ ಅನ್ವಯ ಜಾರಿ ಮಾಡಬೇಕು. ಇದಕ್ಕೆ ನ್ಯಾ.ನಾಗಮೋಹನ್ ದಾಸ್ ವರದಿ ವೈಜ್ಞಾನಿಕ ಅಂಕಿಅಂಶಗಳನ್ನು ಬಳಸಿಕೊಳ್ಳಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಸಲಹೆ ನೀಡಿದೆ.

