ರಾಜ್ಯಾದ್ಯಂತ 42 ಕಡೆ ಏಕಕಾಲಕ್ಕೆ ದಾಳಿ : ಪೊಲೀಸರನ್ನು ಎರಡು ತಾಸು ಸತಾಯಿಸಿದ ಹಾಸನ ಅಧಿಕಾರಿ
x

ರಾಜ್ಯಾದ್ಯಂತ 42 ಕಡೆ ಏಕಕಾಲಕ್ಕೆ ದಾಳಿ : ಪೊಲೀಸರನ್ನು ಎರಡು ತಾಸು ಸತಾಯಿಸಿದ ಹಾಸನ ಅಧಿಕಾರಿ

ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ 40 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಭ್ರಷ್ಟ ಅಧಿಕಾರಿಗಳ ಬಳಿ ಪತ್ತೆಹಚ್ಚಲಾಗಿದೆ. ಇದರಲ್ಲಿ 25 ಕೋಟಿ ರೂ. ಸ್ಥಿರಾಸ್ತಿ, 12 ಕೋಟಿ ರೂ. ಚರಾಸ್ತಿ ಸೇರಿದೆ


Click the Play button to hear this message in audio format

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ರಾಜ್ಯಾದ್ಯಂತ ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳನ್ನೇ ಸುಮಾರು ಎರಡು ತಾಸುಗಳ ಕಾಲ ಸತಾಯಿಸಿದ ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ಸಿ. ಸತ್ಯನಾರಾಯಣ ಸೇರಿದ ಸ್ಥಳಗಳಲ್ಲಿ ತಡರಾತ್ರಿವರೆಗೆ ತಪಾಸಣೆ ಕಾರ್ಯ ನಡೆಸಲಾಗಿದೆ. 15.75 ಲಕ್ಷ ರೂ ನಗದು ಸೇರಿದಂತೆ 6.82 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಹಾಸನ ಸೇರಿದಂತೆ ಬೆಂಗಳೂರು ನಗರ, ಮಂಡ್ಯ, ಗದಗ, ಮೈಸೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಟ್ಟು 9 ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಸೇರಿ 45 ಕ್ಕೂ ಹೆಚ್ಚಿನ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ಸೇರಿದ ಒಟ್ಟು 40 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 25 ಕೋಟಿ ರೂ. ಸ್ಥಿರಾಸ್ತಿ ಹಾಗೂ 12 ಕೋಟಿ ರೂ. ಚರಾಸ್ತಿ ಸೇರಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯನಾರಾಯಣ ಎಂ.ಸಿ., ಮೈಸೂರಿನ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಸಿಫ್ ಇಕ್ಬಾಲ್ ಖಲೀಲ್, ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ವಸಂತ್ ವಾಲಪ್ಪ ನಾಯಕ್, ಬೆಂಗಳೂರಿನ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್.ಆರ್., ಮಂಡ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತೀಶ್.ಎಸ್., ವಿಜಯಪುರದ ಕೆ.ಬಿ.ಜೆ.ಎನ್.ಎಲ್ ಕಿರಿಯ ಎಂಜಿನಿಯರ್‌ ಪ್ರಕಾಶ್ ಈರಪ್ಪ ಗೋಡ್ಬೋಲೆ, ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಹೆಚ್.ಸಿ. ಇಂದ್ರೇಶ್, ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ್, ಯಾದಗಿರಿಯ ಇಂಧನ ಇಲಾಖೆಯ ಎಲೆಕ್ಟ್ರಿಕ್ ಇನ್ಸ್‌ಪೆಕ್ಟರ್‌ ವೀರೇಶ್ ರುದ್ರಯ್ಯ ಹಿರೇಮಠ್ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.

ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯನಾರಾಯಣ ಎಂ.ಸಿ. ಅವರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದ್ದು, ಅಧಿಕಾರಿಯು ತನ್ನ ಆದಾಯಕ್ಕಿಂತ ಶೇ. 200.74 ರಷ್ಟು ಹೆಚ್ಚಿನ ಆಸ್ತಿಯನ್ನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

5.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 52.60 ಲಕ್ಷ ರೂ. ಮೌಲ್ಯದ 06 ನಿವೇಶನಗಳು, 5.30 ಕೋಟಿ ಮೌಲ್ಯದ 3 ಐಷಾರಾಮಿ ಮನೆಗಳು, 15.75 ಲಕ್ಷ ರೂ. ಮೌಲ್ಯದ 3 ಎಕರೆ 33 ಗುಂಟೆ ಕೃಷಿ ಭೂಮಿಯ ದಾಖಲೆಗಳು ಸಿಕ್ಕಿವೆ. 1.46 ಕೋಟಿ ರೂ. ಮೌಲ್ಯದ ಚರಾಸ್ತಿ ಸಿಕ್ಕಿದ್ದು, ದಾಳಿಯ ವೇಳೆ 90.75 ಲಕ್ಷ ರೂ.ಮೌಲ್ಯದ ಕೆಜಿ 36 ಗ್ರಾಂ ಚಿನ್ನದ ಆಭರಣಗಳು ಹಾಗೂ 18.22 ಲಕ್ಷ ರೂ. ಮೌಲ್ಯದ 11 ಕೆಜಿ 208 ಗ್ರಾಂ ಬೆಳ್ಳಿ ಪತ್ತೆಯಾಗಿದೆ. 15,75,990 ನಗದು, 22 ಲಕ್ಷ ಮೌಲ್ಯದ ಎರಡು ಕಾರುಗಳು, ಇದಲ್ಲದೆ, 25 ಲಕ್ಷ ರೂ. ಮೌಲ್ಯದ ಇತರೆ ಸಾಮಗ್ರಿಗಳು ಹಾಗೂ ಎರಡು ಲಾಕರ್‌ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಆಸಿಫ್ ಇಕ್ಬಾಲ್ ಖಲೀಲ್ ಬಳಿ ಬಳಿ ಅತಿ ಹೆಚ್ಚು ಅಂದರೆ 8.81 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಅಸಮತೋಲಿತ ಆಸ್ತಿಯ ಮೌಲ್ಯವೇ ಸುಮಾರು 6.89 ಕೋಟಿ ರೂ.ಗಳಾಗಿವೆ. ವಸಂತ್ ವಾಲಪ್ಪ ನಾಯಕ್ ಬಳಿ 6.40 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರು 22 ಎಕರೆ ಕೃಷಿ ಭೂಮಿ ಹಾಗೂ 7 ಮನೆಗಳನ್ನು ಹೊಂದಿರುವುದು ಕಂಡುಬಂದಿದೆ. ಶಶಿಧರ್.ಆರ್ ಬಳಿ 5.15 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇವರ ಬಳಿ 4 ನಿವೇಶನ ಹಾಗೂ 2 ಮನೆಗಳಿವೆ. ಸತೀಶ್.ಎಸ್ ಬಳಿ 4.46 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಪ್ರಕಾಶ್ ಈರಪ್ಪ ಗೋಡ್ಬೋಲೆ ಬಳಿ 4.60 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇವರ ಬಳಿ 2.64 ಕೋಟಿ ರೂ. ಮೌಲ್ಯದ ವಾಹನಗಳಿರುವುದು ವಿಶೇಷ. ಡಾ. ಹೆಚ್.ಸಿ. ಇಂದ್ರೇಶ್ ಬಳಿ 2.53 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರು 10 ನಿವೇಶನಗಳನ್ನು ಹೊಂದಿರುವುದು ದೃಢಪಟ್ಟಿದೆ. ಎಂ.ಕೆ. ಸುರಕೋಡ್ ಬಳಿ 2.12 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರು 29 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ವೀರೇಶ್ ರುದ್ರಯ್ಯ ಹಿರೇಮಠ್ ಬಳಿ 1.54 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

Read More
Next Story