
Lokayukta Raids| ಕೆಜಿಗಟ್ಟಲೆ ಚಿನ್ನ, ಎಕರೆಗಟ್ಟಲೆ ಭೂಮಿ: ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಪತ್ತೆ
ಆದಾಯಕ್ಕಿಂತ ಹೆಚ್ಚು ಆದಾಯ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಎಂಟು ಅಧಿಕಾರಿಗಳ ಬಳಿ 36.92 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.
ಆದಾಯಕ್ಕಿಂತ ಹೆಚ್ಚು ಆದಾಯ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಎಂಟು ಅಧಿಕಾರಿಗಳಿಗೆ ಸೇರಿದ ಒಟ್ಟು 35 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿದ್ದಾರೆ.
ಪರಿಶೀಲನೆ ವೇಳೆ ಎಂಟು ಅಧಿಕಾರಿಗಳ ಬಳಿಯಿಂದ 36.92 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಮೈಸೂರು, ಬೆಳಗಾವಿ, ಮಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಬೀದರ್ ಮತ್ತು ಕೊಡಗು ವಿಭಾಗಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದೂರುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.
ದಾಳಿ ಸಂದರ್ಭದಲ್ಲಿ ಮೈಸೂರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಜಿ. ಕೆ. ರೇವನ್ ಕುಮಾರ್ ಬಳಿಕ 2.96 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾದರೆ, ಬಳ್ಳಾರಿಯ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ ಬಳಿ 44 ಎಕರೆ, ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಸಹಾಯಕ ಲೆಕ್ಕಾಧಿಕಾರಿ ಸುಶೀಲಮ್ಮ ಬಳಿಕ 34 ಎಕರೆ ಕೃಷಿ ಭೂಮಿ ಇರುವುದು ಗೊತ್ತಾಗಿದೆ.
ದಾಳಿಗೊಳಗಾದ ಅಧಿಕಾರಿಗಳ ಪೈಕಿ ಇವರ ಬಳಿಯೇ ಅತಿ ಹೆಚ್ಚು ಅಸ್ತಿ ಮೌಲ್ಯ ಸಿಕ್ಕಿದ್ದು, 8.32 ಕೋಟಿ ರೂ. ಮೌಲ್ಯದ ಆಸ್ತಿ ಇರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು, ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಜಯ್ ಸಿಂಗ್ ಬಾಪುಸಿಂಗ್ ರಜಪೂತ್ ಬಳಿಕ 12 ಎಕರೆ ಪತ್ತೆಯಾಗಿದೆ. ಇದು ಕಪ್ಪು ಹಣವನ್ನು ಸಕ್ರಮ ಮಾಡಲು ಕೃಷಿ ಕ್ಷೇತ್ರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ದಾಳಿಗೊಳಗಾದ ಅಧಿಕಾರಿಗಳ ಮಾಹಿತಿ
ಮೈಸೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಿ. ಕೆ. ರೇವನ್ ಕುಮಾರ್, ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಜಯ್ ಸಿಂಗ್ ಬಾಪುಸಿಂಗ್ ರಜಪೂತ್, ಮಂಗಳೂರಿನ ಸಹಾಯಕ ಔಷಧ ನಿಯಂತ್ರಕ ಬಾಬು ಬಿ. ಎನ್., ಚಿತ್ರದುರ್ಗ ನಿರ್ಮಿತಿ ಕೇಂದ್ರದ ಸಹಾಯಕ ಲೆಕ್ಕಾಧಿಕಾರಿ ಸುಶೀಲಮ್ಮ ಹೆಚ್. ಜಿ., ಶಿವಮೊಗ್ಗದ ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ. ಆರ್., ಬಳ್ಳಾರಿಯ ಮೀನುಗಾರಿಕೆ ಇಲಾಖೆ ಸಹಯಾಕ ನಿರ್ದೇಶಕ ಶಿವಣ್ಣ, ನಿವೃತ್ತ ಹಣಕಾಸು ನಿಯಂತ್ರಕ ಸುರೇಶ್ ಕೆ. ಎಲ್., ಹಾರಂಗಿ ಪುನರ್ವಸತಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಐ. ಕೆ. ಪುಟ್ಟಸ್ವಾಮಿ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.
ಅಧಿಕಾರಿಗಳ ಬಳಿ ಇರುವ ಆಸ್ತಿ ವಿವರ
ಮೈಸೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಿ. ಕೆ. ರೇವನ್ ಕುಮಾರ್ ಬಳಿ 4.27 ಕೋಟಿ ರೂ. ಮೊತ್ತದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 75 ಲಕ್ಷದ ಸ್ಥಿರಾಸ್ತಿ ಹಾಗೂ ಬರೋಬ್ಬರಿ 3.52 ಕೋಟಿಯ ಚರಾಸ್ತಿ ಇರುವುದು ಪತ್ತೆಯಾಗಿದೆ. ಇವರ ಬಳಿ 2.96 ಕೋಟಿ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ. ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಜಯ್ ಸಿಂಗ್ ಬಾಪುಸಿಂಗ್ ರಜಪೂತ್ ಬಳಿ 5.81 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
ಇದರಲ್ಲಿ 12 ಎಕರೆ ಕೃಷಿ ಭೂಮಿ ಮತ್ತು 2.35 ಕೋಟಿ ರೂಪಾಯಿಗಳ ಬ್ಯಾಂಕ್ ಠೇವಣಿ ಸೇರಿದೆ. ಮಂಗಳೂರಿನ ಸಹಾಯಕ ಔಷಧ ನಿಯಂತ್ರಕ ಬಾಬು ಬಿ. ಎನ್. ಬಳಿ 4.40 ಕೋಟಿ ರೂ. ಆಸ್ತಿ ಇದೆ. 5 ವಾಸದ ಮನೆಗಳು ಮತ್ತು 4 ನಿವೇಶನಗಳನ್ನು ಹೊಂದಿದ್ದಾರೆ. ಚಿತ್ರದುರ್ಗ ನಿರ್ಮಿತಿ ಕೇಂದ್ರದ ಸಹಾಯಕ ಲೆಕ್ಕಾಧಿಕಾರಿ ಸುಶೀಲಮ್ಮ ಹೆಚ್. ಜಿ., ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರ 8.32 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಇದರಲ್ಲಿ 13 ನಿವೇಶನಗಳು, 6 ಮನೆಗಳು ಮತ್ತು 34 ಎಕರೆ ಕೃಷಿ ಭೂಮಿ ಸೇರಿದೆ. ಶಿವಮೊಗ್ಗದ ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ. ಆರ್. ಬಳಿ 3.88 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
ಬಳ್ಳಾರಿಯ ಮೀನುಗಾರಿಕೆ ಇಲಾಖೆ ಸಹಯಾಕ ನಿರ್ದೇಶಕ ಶಿವಣ್ಣ ಬಳಿ 2.82 ಕೋಟಿ ರೂ. ಆಸ್ತಿ ಇದ್ದು, 44 ಎಕರೆಗಳಷ್ಟು ಬೃಹತ್ ಕೃಷಿ ಭೂಮಿಯನ್ನು ಹೊಂದಿದ್ದಾರೆ. ನಿವೃತ್ತ ಹಣಕಾಸು ನಿಯಂತ್ರಕ ಸುರೇಶ್ ಕೆ. ಎಲ್ ಬಳಿ 4.38 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ನಿವೃತ್ತಿಯ ನಂತರವೂ ಇಷ್ಟು ದೊಡ್ಡ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವುದು ಗಮನಾರ್ಹ. ಹಾರಂಗಿ ಪುನರ್ವಸತಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಐ. ಕೆ. ಪುಟ್ಟಸ್ವಾಮಿ ಬಳಿ 2.99 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
21.71 ಕೋಟಿ ರೂ. ಸ್ಥಿರಾಸ್ತಿ ಪತ್ತೆ
ದಾಳಿಯ ಒಟ್ಟು ಮೊತ್ತವನ್ನು ಗಮನಿಸಿದರೆ, ಒಟ್ಟು 21.71 ಕೋಟಿ ರೂ. ಸ್ಥಿರಾಸ್ತಿ (ಜಮೀನು, ಮನೆ, ನಿವೇಶನ) ಹಾಗೂ 15.21 ಕೋಟಿ ರೂ. ಚರಾಸ್ತಿ (ನಗದು, ಚಿನ್ನ, ವಾಹನ, ಠೇವಣಿ) ಪತ್ತೆಯಾಗಿದೆ. ಅಧಿಕಾರಿಗಳು ಹೆಚ್ಚಾಗಿ ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಲು ಒಲವು ತೋರಿರುವುದು ಸ್ಪಷ್ಟವಾಗುತ್ತದೆ. ಭೂಮಿಯ ಮೌಲ್ಯ ದಿನೇ ದಿನೇ ಹೆಚ್ಚಾಗುತ್ತದೆ ಎಂಬ ಭಾವನೆಯಿಂದ ಹೂಡಿಕೆ ಮಾಡಲಾಗಿದೆ. ರೇವನ್ ಕುಮಾರ್ ಅವರ ಬಳಿ ಸಿಕ್ಕಿದ 2.96 ಕೋಟಿ ಮೌಲ್ಯದ ಚಿನ್ನ ಮತ್ತು 42 ಲಕ್ಷ ಮೌಲ್ಯದ ವಾಹನಗಳು ಸಿಕ್ಕಿವೆ. ಲೋಕೋಪಯೋಗಿ, ನಗರಾಭಿವೃದ್ಧಿ, ಔಷಧ ನಿಯಂತ್ರಣ ಮತ್ತು ನಿರ್ಮಿತಿ ಕೇಂದ್ರಗಳಂತಹ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಂಡುಬಂದಿವೆ.

