ಅಬಕಾರಿ ಇಲಾಖೆ ಭ್ರಷ್ಟಾಚಾರದ ವಿರುದ್ಧ ಮದ್ಯ ಮಾರಾಟಗಾರರ ಬೃಹತ್ ಪ್ರತಿಭಟನೆ
x

ಅಬಕಾರಿ ಇಲಾಖೆ ಭ್ರಷ್ಟಾಚಾರದ ವಿರುದ್ಧ ಮದ್ಯ ಮಾರಾಟಗಾರರ ಬೃಹತ್ ಪ್ರತಿಭಟನೆ

ಅಬಕಾರಿ ಇಲಾಖೆಯಲ್ಲಿನ ಮಿತಿಮೀರಿದ ಲಂಚದ ಹಾವಳಿ ಆರೋಪ ಮತ್ತು ಅಧಿಕಾರಿಗಳ ಕಿರುಕುಳವನ್ನು ಖಂಡಿಸಿ ಮದ್ಯ ಮಾರಾಟಗಾರರು ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.


Click the Play button to hear this message in audio format

ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಲಂಚದ ಹಾವಳಿಯನ್ನು ಖಂಡಿಸಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಮದ್ಯ ಮಾರಾಟಗಾರರು ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯು, ಮದ್ಯ ಮಾರಾಟಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳ ಲಂಚದ ಹಾವಳಿ ಮತ್ತು ಅವೈಜ್ಞಾನಿಕ ನಿಯಮಗಳಿಂದಾಗಿ ರಾಜ್ಯದ ಮದ್ಯ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಲವೆಡೆ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಮದ್ಯ ಮಾರಾಟಗಾರರು ಒಂದೆಡೆ ಜಮಾಯಿಸಿ, ಪ್ರತಿಭಟನೆ ನಡೆಸಿದರು. "ನಾವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದರೂ, ಸರ್ಕಾರದ ಬೊಕ್ಕಸ ತುಂಬಿಸುವ ನಮಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಈ ಲಂಚದ ಹಾವಳಿಯನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು" ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

ಪ್ರತಿಭಟನಾ ನಿರತ ಮದ್ಯ ಮಾರಾಟಗಾರರು, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶದ ಸುರಿಮಳೆಗೈದಿದ್ದಾರೆ. "ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅಧಿಕಾರಿಗಳು ಮಾಸಿಕ ಲಂಚವನ್ನು ನಿಗದಿಪಡಿಸಿದ್ದಾರೆ. ಪ್ರತಿ ತಿಂಗಳು ಇಂತಿಷ್ಟು ಹಣ ನೀಡಲೇಬೇಕು ಎಂದು ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಲಂಚ ನೀಡಲು ನಿರಾಕರಿಸಿದರೆ, ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕೇಸ್ ದಾಖಲಿಸುವುದು ಅಥವಾ ವ್ಯಾಪಾರ ಮಾಡಲು ಬಿಡದೆ ಕಿರುಕುಳ ನೀಡುತ್ತಿದ್ದಾರೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಮುಖ ಬೇಡಿಕೆಗಳೇನು?

ಮದ್ಯ ಮಾರಾಟಗಾರರ ಒಕ್ಕೂಟವು ಒಟ್ಟು 9ಕ್ಕೂ ಹೆಚ್ಚು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ರಷ್ಟು ಲಾಭಾಂಶ ನೀಡಬೇಕು. ಮದ್ಯದ ಸನ್ನದ್ದುಗಳನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಇತ್ತೀಚೆಗೆ ಹೆಚ್ಚಳ ಮಾಡಿರುವ ಸನ್ನದ್ದು ಶುಲ್ಕ ಮತ್ತು ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಸಿಎಲ್‌-2 ಮತ್ತು ಸಿಎಲ್‌-9 ಸನ್ನದ್ದುಗಳಂತೆ, ಸಿಎಲ್‌-7 ಸನ್ನದ್ದುಗಳನ್ನೂ ಸಹ ಸ್ಥಳಾಂತರ ಮಾಡಲು ಅವಕಾಶ ನೀಡಬೇಕು. ಸಿಎಲ್‌-2 ಮತ್ತು ಸಿಎಲ್‌-9 ಮದ್ಯದ ಅಂಗಡಿಗಳ ವ್ಯಾಪಾರದ ಸಮಯವನ್ನು ರಾತ್ರಿ 9 ಗಂಟೆಯ ಬದಲು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಬೇಕು. ಅಬಕಾರಿ ಇಲಾಖೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು ಮತ್ತು ಅಧಿಕಾರಿಗಳ ಕಿರುಕುಳವನ್ನು ನಿಲ್ಲಿಸಬೇಕು. ಭ್ರಷ್ಟಚಾರ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಅಕ್ರಮ ಮದ್ಯ ಮಾರಾಟ

ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿರುವ ಮದ್ಯಮಾರಾಟಗಾರರು, ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಮುಂದಿರುವ ಸವಾಲು

ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಅಬಕಾರಿ ಇಲಾಖೆಯ ಮೇಲೆ ಅವಲಂಬಿತವಾಗಿದೆ. ಇಂತಹ ಸಂದರ್ಭದಲ್ಲಿ ಮಾರಾಟಗಾರರ ಈ ಬೃಹತ್ ಪ್ರತಿಭಟನೆ ಮತ್ತು ಭ್ರಷ್ಟಾಚಾರದ ಆರೋಪಗಳು ಸರ್ಕಾರಕ್ಕೆ ಮುಜುಗರ ತಂದಿವೆ. ಲಾಭಾಂಶ ಹೆಚ್ಚಳದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಒಪ್ಪುವುದೇ ಅಥವಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.

ಈ ಬಗ್ಗೆ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ರಾಜ್ಯಾಧ್ಯಕ್ಷ ಗುರುಸ್ವಾಮಿ ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಸರ್ಕಾರವು ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ, ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು". ಅಬಕಾರಿ ಇಲಾಖೆಯಲ್ಲಿ ಕೆಳಗಡೆಯಿಂದ ಮೇಲಿನವರೆಗೂ ಲಂಚ ಇದೆ. ಯಾವುದಾರೂ ಅಧಿಕಾರಿ ಲಂಚ ಪಡೆದು ಟ್ರ್ಯಾಪ್‌ ಆಗಿ, ಮತ್ತೆ ಅಧಿಕಾರಕ್ಕೆ ಬಂದರೆ, ನಾವು ವ್ಯವಹಾರವನ್ನೆ ನಡೆಸಲು ಸಾಧ್ಯವಿಲ್ಲ. ಪೊಲೀಸರು ಸಹ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Read More
Next Story