ಕೊಡವ ತಕ್ಕ್‌ಗೆ ಮಾನ್ಯತೆ, ಸಚಿವರ ವಿವಾದಾತ್ಮಕ ಹೇಳಿಕೆಯವರೆಗೆ ದಿನದ ಪ್ರಮುಖ ಸುದ್ದಿಗಳು
ದ ಫೆಡರಲ್ ಕರ್ನಾಟಕ ಸಂಜೆ ಐದು ಗಂಟೆಗೆ ನಡೆಸುವ ಕರುನಾಡ ಕನ್ನಡಿ ಕಾರ್ಯಕ್ರಮದಲ್ಲಿ ದಿನ ಪ್ರಮುಖ ಮೂರು ಸುದ್ದಿಗಳನ್ನು ವಿಶ್ಲೇಷಣೆ ನಡೆಸಲಾಗುತ್ತದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಇತ್ತೀಚೆಗೆ ಹೆಚ್ಚುವರಿ ಆಡಳಿತಾತ್ಮಕ ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಇದೇ ಮಾದರಿಯನ್ನು ಅನುಸರಿಸಿ, ಕೊಡಗು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ವ್ಯಾಪಕವಾಗಿ ಬಳಸಲಾಗುವ 'ಕೊಡವ ತಕ್ಕ್' ಭಾಷೆಗೂ ಸರ್ಕಾರ ಸೂಕ್ತ ಆಡಳಿತಾತ್ಮಕ ಮಾನ್ಯತೆ ನೀಡಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ಸ್ಥಳೀಯ ಭಾಷೆಗಳು ಕೇವಲ ಸಂವಹನ ಮಾಧ್ಯಮಗಳಲ್ಲ, ಬದಲಾಗಿ ಆಯಾ ಸಮುದಾಯಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೇತುವೆಗಳಾಗಿವೆ ಎಂದಿದ್ದಾರೆ. ಹೀಗಾಗಿ, ಕರ್ನಾಟಕದ ಶ್ರೀಮಂತ ಭಾಷಾ ವೈವಿಧ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ತಕ್ಕ್ ಹಾಗೂ ಅರೆಭಾಷೆಯಂತಹ ಸ್ಥಳೀಯ ಭಾಷಾ ಪ್ರಭೇದಗಳಿಗೆ ಅಗತ್ಯ ಬೆಂಬಲ ಹಾಗೂ ಪ್ರೋತ್ಸಾಹ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳಿಗೆ 'ಗೌರವ' ನೀಡುವ ಕುರಿತು ಶಿವಲಿಂಗೇಗೌಡರ ಹೇಳಿಕೆ ವಿವಾದಕ್ಕೆ
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಸಾರ್ವಜನಿಕರ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ 'ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ' ಎಂದು ಅವರು ಹೇಳಿದ್ದು, ಅಧಿಕಾರಿಗಳಿಗೆ ಸರ್ಕಾರ ಸಂಬಳ ನೀಡುತ್ತಿರುವಾಗ ಸಾರ್ವಜನಿಕರು ಪ್ರತ್ಯೇಕವಾಗಿ ಹಣವೇಕೆ ನೀಡಬೇಕು ಎಂದು ಸಭೆಯಲ್ಲಿದ್ದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪದಬಳಕೆ ಲಂಚವನ್ನು ಪರೋಕ್ಷವಾಗಿ ಸಮರ್ಥಿಸಿದಂತಿದೆ ಎಂಬ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ. ತಾವು ಹಣ ಕೊಡುವ ಬಗ್ಗೆ ಮಾತನಾಡಿಲ್ಲ, ಬದಲಾಗಿ ಕೆಲಸ ಮಾಡಿದವರಿಗೆ ಕೃತಜ್ಞತೆ ಹಾಗೂ ಗೌರವ ಸೂಚಿಸುವ ಅರ್ಥದಲ್ಲಿ ಆ ಮಾತು ಹೇಳಿದ್ದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬಾರದು ಹಾಗೂ ಬಲವಂತವಾಗಿ ಹಣ ವಸೂಲಿ ಮಾಡಬಾರದು ಎಂದೂ ಅವರು ಸೂಚನೆ ನೀಡಿದ್ದಾರೆ.
ಬಯಲು ಸೀಮೆ ಚಿತ್ರದುರ್ಗಕ್ಕೆ ಹರಿದುಬಂದ ಭದ್ರಾ ಜಲ
ಬರಪೀಡಿತ ಬಯಲು ಸೀಮೆ ಚಿತ್ರದುರ್ಗದ ರೈತರು ದಶಕಗಳಿಂದ ಕಾಯುತ್ತಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಕೊನೆಗೂ ನನಸಾಗಿದೆ. ಮರೀಚಿಕೆಯಾಗಿದ್ದ ಭದ್ರಾ ಜಲ ಇದೀಗ ಪ್ರಾಯೋಗಿಕವಾಗಿ ಮೂರು ಟಿಎಂಸಿಯಷ್ಟು ಚಿತ್ರದುರ್ಗದ ಶಾಖಾ ಕಾಲುವೆಗೆ ಹರಿದುಬಂದಿದ್ದು, ಸೆಪ್ಟೆಂಬರ್ 24ರಂದು ಡಿ.ಕೆ. ಶಿವಕುಮಾರ್ ಅವರು ಭದ್ರಾ ಜಲಕ್ಕೆ ಗಂಗಾಪೂಜೆ ನೆರವೇರಿಸುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲಿದ್ದಾರೆ. 21,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಬೃಹತ್ ಯೋಜನೆಗಾಗಿ ರಾಜ್ಯ ಸರ್ಕಾರ ಈಗಾಗಲೇ 12 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ತುಂಗಾ ನದಿಯಿಂದ ನೀರು ಲಿಫ್ಟ್ ಮಾಡಿ ಭದ್ರಾ ಜಲಾಶಯದ ಮುಖಾಂತರ ಚಿತ್ರದುರ್ಗ ಮತ್ತು ತುಮಕೂರು ಭಾಗಗಳಿಗೆ ಹರಿಸಲಾಗುತ್ತಿದ್ದು, ಇದು 2.25 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಹಾಗೂ ಐತಿಹಾಸಿಕ ವಾಣಿ ವಿಲಾಸ ಸಾಗರಕ್ಕೆ ನೀರು ಒದಗಿಸಲಿದೆ.

