World Water Day | Revival of 700 lakes in the state, 100 MW floating solar project announced
x

ಕೆರೆಗಳಲ್ಲಿ ಸೋಲರ್‌ ಅಳವಡಿಕೆ (ಸಾಂದರ್ಭಿಕ ಚಿತ್ರ)

ವಿಶ್ವ ಜಲ ದಿನ| ರಾಜ್ಯದ 700 ಕೆರೆಗಳ ಪುನರುಜ್ಜೀವನ, 100 ಮೆ.ವ್ಯಾ ತೇಲುವ ಸೌರ ಯೋಜನೆ

ಈಗಾಗಲೇ ಕೆಸಿ ವ್ಯಾಲಿ ಯೋಜನೆಯಡಿಯಲ್ಲಿ 143 ಕೆರೆಗಳು ಹಾಗೂ ಹೆಚ್‌ಎನ್‌ ವ್ಯಾಲಿ ಅಡಿಯಲ್ಲಿ 65 ಕೆರೆಗಳಿಗೆ ಮರುಜೀವ ನೀಡಲಾಗಿದೆ ಎಂದು ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದರು.


Click the Play button to hear this message in audio format

ಬಯಲು ಸೀಮೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಸಮಸ್ಯೆಯಾದ ನೀರಿನ ಅಭಾವ ಮತ್ತು ಇಂಧನ ಅಗತ್ಯತೆಗಳನ್ನು ಪೂರೈಸಲು ರಾಜ್ಯ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಅಂತರ್ಜಲ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಅಂದಾಜು 1,081 ಕೋಟಿ ರೂ. ವೆಚ್ಚದಲ್ಲಿ ಹಲವಾರು ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.

ಸರ್ಕಾರವು ಕೆರೆಗಳ ಪುನರುಜ್ಜೀವನದ ಜತೆಜತೆಯಲ್ಲೇ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಕೆಸಿ ವ್ಯಾಲಿ (KC Valley) ಯೋಜನೆಯಡಿ 143 ಕೆರೆಗಳು ಹಾಗೂ ಹೆಚ್‌ಎನ್‌ ವ್ಯಾಲಿ (HN Valley) ಯೋಜನೆಯಡಿ 65 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಿ ಮರುಜೀವ ನೀಡಲಾಗಿದೆ. ಈ ಯೋಜನೆಗಳ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತಗೊಂಡು, ಬಯಲು ಸೀಮೆಯ ಒಟ್ಟು 700 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಬೃಹತ್ ಗುರಿಯನ್ನು ಸರ್ಕಾರ ಹಮ್ಮಿಕೊಂಡಿದೆ. ಇದೇ ಮಾದರಿಯಲ್ಲಿ, ರಾಜ್ಯದ ಇತರ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಿಸಲು 'ವೃಷಭಾವತಿ ವ್ಯಾಲಿ' ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ.

ಸುಸ್ಥಿರ ಜಲ ಸಂಗ್ರಹಣಾ ವ್ಯವಸ್ಥೆ

ರಾಜ್ಯದಾದ್ಯಂತ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 472 ಏತ ನೀರಾವರಿ ಯೋಜನೆಗಳ ಮೂಲಕ ಒಟ್ಟು 1,318 ಕೆರೆಗಳನ್ನು ತುಂಬಿಸಲಾಗುತ್ತಿದೆ. ಬರೀ ಕೆರೆ ತುಂಬಿಸುವುದಷ್ಟೇ ಅಲ್ಲದೆ, ನೀರು ಪೋಲಾಗದಂತೆ ತಡೆಯಲು ಮತ್ತು ಅಂತರ್ಜಲ ಮರುಪೂರಣಕ್ಕೆ ಉತ್ತೇಜನ ನೀಡಲು 8,000ಕ್ಕೂ ಹೆಚ್ಚು ಚೆಕ್ ಡ್ಯಾಂಗಳು, ಬ್ರಿಡ್ಜ್-ಕಂ-ಬ್ಯಾರೇಜ್‌ಗಳು ಮತ್ತು ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಸಮಗ್ರ ಯೋಜನೆಗಳ ಫಲವಾಗಿ ರಾಜ್ಯದ ಹಲವೆಡೆ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸರ್ಕಾರ ಹೇಳಿದೆ.

ಅಂತರ್ಜಲ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನ

ಅಂತರ್ಜಲದ ನಿಖರ ನಿರ್ವಹಣೆಗಾಗಿ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಡೇಟಾ ಅನಾಲಿಟಿಕ್ಸ್, ರಿಯಲ್ ಟೈಮ್ ಮಾನಿಟರಿಂಗ್ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ನೀರಿನ ಲಭ್ಯತೆ ಮತ್ತು ಬಳಕೆಯ ಕುರಿತು ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೋಲಾರದಲ್ಲಿ ತೇಲುವ ಸೌರ ಯೋಜನೆ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಕೋಲಾರ ಜಿಲ್ಲೆಯ ಎಸ್. ಅಗ್ರಹಾರ ಕೆರೆಯಲ್ಲಿ 100 ಮೆ.ವ್ಯಾ. ಸಾಮರ್ಥ್ಯದ ಬೃಹತ್ 'ತೇಲುವ ಸೌರ ಯೋಜನೆ'ಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಮೂಲಕ ಕೆರೆಯ ನೀರು ಆವಿಯಾಗುವುದನ್ನು ತಡೆಯುವ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸ್ವಚ್ಛ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಎಂಜಿನಿಯರ್‌ಗಳ ಪಾತ್ರ ಹಿರಿದು

ಈ ಕುರಿತು ಮಾಹಿತಿ ನೀಡಿರುವ ಸಣ್ಣ ನೀರಾವರಿ ಸಚಿವ ಎನ್‌. ಎಸ್‌. ಬೋಸರಾಜು ಅವರು, "ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ತಾಂತ್ರಿಕ ಪರಿಣಿತಿ ಮತ್ತು ಶ್ರಮದಿಂದಾಗಿ ರಾಜ್ಯದಲ್ಲಿ ಲಭ್ಯವಿರುವ ನೀರಿನ ಸದ್ಬಳಕೆ ಸಾಧ್ಯವಾಗುತ್ತಿದೆ ಮತ್ತು ಅಂತರ್ಜಲ ವೃದ್ಧಿಯಂತಹ ಕಠಿಣ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿದೆ," ಎಂದು ಪ್ರಶಂಸಿದ್ದಾರೆ.

Read More
Next Story