
ಅನ್ಯಧರ್ಮೀಯ ವಿವಾಹವಾಗಿದ್ದಕ್ಕೆ ಗರ್ಭಿಣಿ ತಂಗಿ ಮೇಲೆ ಅಣ್ಣನಿಂದ ಕೊಡಲಿ ಹಲ್ಲೆ!
ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆಕೆಯ ಅಣ್ಣನೇ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅನ್ಯಧರ್ಮೀಯ ವ್ಯಕ್ತಿಯನ್ನು ವಿವಾಹವಾಗಿದ್ದ ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆಕೆಯ ಅಣ್ಣನೇ ಕೊಡಲಿಯಿಂದ ಹಲ್ಲೆ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ನಗರದಲ್ಲಿ ಬುಧವಾರ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ಮೀನಾಕ್ಷಿ ಮತ್ತು ಆಕೆಯ ಪತಿ ಉದಯ್ ಕುಮಾರ್ ಅವರ ಮೇಲೆ ಮೀನಾಕ್ಷಿಯ ಸಹೋದರ ಮಂಜುನಾಥ್ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಮೀನಾಕ್ಷಿ ಮತ್ತು ಆಕೆಯ ಪತಿ ಉದಯ್ ಕುಮಾರ್ ಆಗಮಿಸಿದ್ದಾಗ ಈ ಘಟನೆ ಸಂಭವಿಸಿದೆ. ಅನ್ಯಧರ್ಮೀಯ ವಿವಾಹ ಎಂಬ ಕಾರಣಕ್ಕೆ ಕುಟುಂಬದ ವಿರೋಧದ ನಡುವೆಯೂ ಈ ದಂಪತಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅಂದಿನಿಂದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಈ ದಂಪತಿಯೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಮೀನಾಕ್ಷಿಯ ಕುಟುಂಬದವರು, ಅಂದಿನಿಂದಲೂ ಈ ದಂಪತಿಯ ಮೇಲೆ ಹಗೆ ಸಾಧಿಸುತ್ತಿದ್ದರು ಎನ್ನಲಾಗಿದೆ. ಅನ್ಯಧರ್ಮದ ಯುವಕನನ್ನು ಮದುವೆಯಾಗಿದ್ದಕ್ಕೆ ತಂಗಿಯ ಮೇಲೆ ಕೋಪಗೊಂಡಿದ್ದ ಮಂಜುನಾಥ್ (35), ತಂಗಿಯ ಕುಟುಂಬದ ಮೇಲೆ ಹಲ್ಲೆ ನಡೆಸಲು ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.
ಇದೇ ಸಮಯದಲ್ಲಿ ಕೊಪ್ಪಳದಲ್ಲಿ ನಡೆದ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದ ಮೀನಾಕ್ಷಿಯ ಮೇಲೆ, ಕೊಡಲಿಯಿಂದ ಸಾರ್ವಜನಿಕರ ಮುಂದೆಯೇ ಹಲ್ಲೆ ನಡೆಸಿದ್ದಾನೆ. ಕಾರ್ಯಕ್ರಮದಲ್ಲಿದ್ದ ಅತಿಥಿಗಳು ತಕ್ಷಣ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.
"ಗಾಯಗೊಂಡ ಮಹಿಳೆಯನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ," ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

