
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪೂನಡ್ಕ ಸೇರಿದಂತೆ 2 ರಿಂದ 3 ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕೇರಳ ಸಂಪರ್ಕಕ್ಕೆ 3 ಕರ್ನಾಟದಿಂದ ಹೊಸ ಸೇತುವೆಗಳ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ
ಸುಳ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇತರೆ ಭಾಗಗಳಲ್ಲಿ ಸೇತುವೆಗಳ ನಿರ್ಮಾಣಕ್ಕಾಗಿ ದೀರ್ಘಕಾಲದಿಂದ ಬೇಡಿಕೆಗಳಿದ್ದು, ಕಾಲುಸಂಕಗಳು ಸೇರಿದಂತೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಸೇತುವೆಗಳ ನಿರ್ಮಾಣಕ್ಕೆ ಇಲಾಖೆಯು ಹೆಚ್ಚಿನ ಒತ್ತು ನೀಡಲಿದೆ
ನೆರೆಯ ಕೇರಳ ರಾಜ್ಯಕ್ಕೆ ಸುಗಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪೂನಡ್ಕ ಸೇರಿದಂತೆ 2 ರಿಂದ 3 ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮಾಣಿಲ ಗ್ರಾಮದ ಕಾಮಜಲು ಮೂಲಕ ಪ್ರಸ್ತಾವಿತ ಪೂನಡ್ಕ ಸೇತುವೆ ನಿರ್ಮಾಣ ಸ್ಥಳವನ್ನು ಭಾನುವಾರ ಪರಿಶೀಲಿಸಿದ ಬಳಿಕ ಸಚಿವರು ಈ ಮಾಹಿತಿ ಹಂಚಿಕೊಂಡರು. ಪೂನಡ್ಕ ಸೇತುವೆ ನಿರ್ಮಾಣವು ಈ ಭಾಗದ ಜನರ ಕನಿಷ್ಠ 50 ವರ್ಷಗಳ ಹಳೆಯ ಬೇಡಿಕೆಯಾಗಿದೆ. ಸ್ಥಳದ ತಾಂತ್ರಿಕ ಹಾಗೂ ಭೌಗೋಳಿಕ ಅಂಶಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಈ ಅಂತರರಾಜ್ಯ ಸೇತುವೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅಂತರರಾಜ್ಯ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ
ಸುಳ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇತರೆ ಭಾಗಗಳಲ್ಲಿ ಸೇತುವೆಗಳ ನಿರ್ಮಾಣಕ್ಕಾಗಿ ದೀರ್ಘಕಾಲದಿಂದ ಬೇಡಿಕೆಗಳಿದ್ದು, ಕಾಲುಸಂಕಗಳು ಸೇರಿದಂತೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಸೇತುವೆಗಳ ನಿರ್ಮಾಣಕ್ಕೆ ಇಲಾಖೆಯು ಹೆಚ್ಚಿನ ಒತ್ತು ನೀಡಲಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಡಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಗಾರು ಮಳೆಯ ಸಂದರ್ಭದಲ್ಲಿ ಮೂಲಸೌಕರ್ಯಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ ತಿಂಗಳಿನಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಸಚಿವರು ವಿವರಿಸಿದರು.
ಅನುದಾನದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಸೇತುವೆ ಕಾಮಗಾರಿಗಳಿಗೆ 80 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಆದರೂ ಬಿಜೆಪಿ ಶಾಸಕರು ಅನುದಾನದ ಕೊರತೆಯಿದೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪಗಳನ್ನು ಮಾಡದಿದ್ದರೆ ಅವರಿಗೆ ಮತಗಳು ಹೇಗೆ ಸಿಗುತ್ತವೆ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು. ಇದೇ ವೇಳೆ ಪ್ರತಿಕ್ರಿಯಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಚಿವರು ಪ್ರಾಯೋಗಿಕವಾಗಿ ಸ್ಪಂದಿಸಿದ್ದು, ಲೋಕೋಪಯೋಗಿ ಇಲಾಖೆಯಿಂದ ತಮ್ಮ ಕ್ಷೇತ್ರಕ್ಕೆ ಒಟ್ಟು 250 ಕೋಟಿ ರೂಪಾಯಿ ಅನುದಾನ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

