x

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಯಾವಾಗ?

ಕರ್ನಾಟಕದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸರೋಜಿನಿ ಮಹಿಷಿ ವರದಿ, ಸರ್ಕಾರದ ಭರವಸೆ ಮತ್ತು ಸ್ಥಳೀಯ ಯುವಕರ ಉದ್ಯೋಗಾವಕಾಶಗಳ ಕುರಿತು ಅರುಣ್ ಜಾವಗಲ್ ಮಾತುಗಳು.


Click the Play button to hear this message in audio format

ಕರ್ನಾಟಕದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಮತ್ತು ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕನ್ನಡ ಭಾಷೆಯ ವಿಚಾರದಲ್ಲಿ ತಾರತಮ್ಯವಾಗುತ್ತಿದೆ ಎಂಬ ಉದ್ಯೋಗಾಕಾಂಕ್ಷಿ ಯುವತಿಯೊಬ್ಬರ ಆರೋಪದ ಬೆನ್ನಲ್ಲೇ, ಈ ಕುರಿತು ಕ್ರಮ ಕೈಗೊಳ್ಳುವ ಸುಳಿವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. ಆದರೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಭರವಸೆಗಳು ಈಡೇರಲು ಇನ್ನೆಷ್ಟು ಕಾಲ ಕಾಯಬೇಕು ಎಂಬ ಪ್ರಶ್ನೆ ಈಗ ಚರ್ಚೆಯ ಕೇಂದ್ರವಾಗಿದೆ.

ಈ ಕುರಿತು ಫೆಡರಲ್ ಕರ್ನಾಟಕದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಹಾಗೂ ತಂತ್ರಜ್ಞಾನ ಉದ್ಯಮಿಯಾಗಿರುವ ಅರುಣ್ ಜಾವಗಲ್, ಸರ್ಕಾರ ಕೇವಲ ಭರವಸೆ ನೀಡದೆ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವೂ ಉದ್ಯೋಗ ಮೀಸಲಾತಿ ಜಾರಿಗೆ ತರುವ ಕುರಿತು ಪ್ರಸ್ತಾಪಿಸಿತ್ತು. ಸರೋಜಿನಿ ಮಹಿಷಿ ವರದಿಯ ಪರಿಷ್ಕರಣೆಯೂ ನಡೆದಿತ್ತು. ಆದರೆ, ಈವರೆಗೂ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಅಭಿಪ್ರಾಯ.

ಖಾಸಗಿ ಕಂಪನಿಗಳಲ್ಲಿ ಅಧಿಕೃತವಾಗಿ ಭಾಷೆಯ ಆಧಾರದಲ್ಲಿ ಉದ್ಯೋಗ ನಿರಾಕರಿಸುವ ನೀತಿ ಇಲ್ಲದಿದ್ದರೂ, ಕೆಲವು ಸಂಸ್ಥೆಗಳಲ್ಲಿ ಭಾಷಿಕ ಗುಂಪುಗಾರಿಕೆ ಮತ್ತು ತಮ್ಮದೇ ಭಾಷೆಯವರಿಗೆ ಆದ್ಯತೆ ನೀಡುವ ಪ್ರವೃತ್ತಿ ಇದೆ ಎಂದು ಅರುಣ್ ಜಾವಗಲ್ ಆರೋಪಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾನೂನಿನ ಜೊತೆಗೆ ಉದ್ಯೋಗ ಮಾರುಕಟ್ಟೆಯಲ್ಲಿನ ಅಸಮಾನತೆಗಳನ್ನೂ ಸರಿಪಡಿಸಬೇಕಿದೆ ಎಂದಿದ್ದಾರೆ.

ಮತ್ತೊಂದೆಡೆ, ಎಲ್ಲ ಹುದ್ದೆಗಳಿಗೂ ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವ ಬದಲು, ಕಂಪನಿಗಳ ಸಹಯೋಗದಲ್ಲಿ ಕರ್ನಾಟಕದ ಯುವಕರ ಕೌಶಲ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಬೇಕಾದ ಪ್ರತಿಭೆಯನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳ ಮೂಲಕ ರೂಪಿಸಬೇಕು ಎಂಬುದು ಅವರ ಸಲಹೆ.

ಸಂವಿಧಾನಾತ್ಮಕ ಮಿತಿಗಳು, ಉದ್ಯಮಗಳ ಅಗತ್ಯಗಳು ಮತ್ತು ಸ್ಥಳೀಯರ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಬೇಡಿಕೆ ರಾಜಕೀಯ ಭರವಸೆಯಾಗಿಯೇ ಉಳಿಯುತ್ತದೆಯೇ ಅಥವಾ ಪರಿಣಾಮಕಾರಿ ನೀತಿಯಾಗಿ ರೂಪುಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story