
Recruitment delay| ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜಾದ ಸ್ಪರ್ಧಾರ್ಥಿಗಳು; ಸರ್ಕಾರಕ್ಕೆ ಸಂಕಟ
ಏ.8 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಸಜ್ಜಾಗಿದ್ದ ಉದ್ಯೋಗಾಕಾಂಕ್ಷಿಗಳಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಇದರ ವಿರುದ್ಧ ಸ್ಪರ್ಧಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸಾಕಷ್ಟು ಹೋರಾಟ ಮಾಡಿದರೂ ತಲೆ ಕೆಡಿಸಿಕೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಮತ್ತೆ ಹೋರಾಟದ ಹಾದಿ ತುಳಿಯಲು ಸಜ್ಜಾಗಿದ್ದಾರೆ. ಒಳ ಮೀಸಲಾತಿ ಗೊಂದಲದಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಸ್ಪರ್ಧಾರ್ಥಿಗಳ ಹೋರಾಟ ಹೊಸ ಸಂಕಷ್ಟ ತಂದೊಡ್ಡಿದೆ.
ಧಾರವಾಡದಲ್ಲಿ ಬೃಹತ್ ಪ್ರತಿಭಟನೆಗೆ ಬೆದರಿದ ರಾಜ್ಯ ಸರ್ಕಾರ ದಿಢೀರ್ ಸಂಪುಟ ಸಭೆ ನಡೆಸಿ ಒಂದು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಭರವಸೆ ನೀಡಿತ್ತು. ಈಗ ಸರ್ಕಾರದ ಗಡುವು ಮುಗಿದರೂ ಅಧಿಸೂಚನೆ ಹೊರಬೀಳದ ಕಾರಣ ಸ್ಪರ್ಧಾರ್ಥಿಗಳು ಮತ್ತೆ ಹೋರಾಟದ ಹಾದಿ ತುಳಿದಿದ್ದಾರೆ.
ಏ.8 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಸಜ್ಜಾಗಿದ್ದ ಉದ್ಯೋಗಾಕಾಂಕ್ಷಿಗಳಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಇದರ ವಿರುದ್ಧ ಸ್ಪರ್ಧಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ (ಏ.10) ಹೈಕೋರ್ಟ್ ಧಾರವಾಡ ಪೀಠವು ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ ನೀಡಿರುವುದು ಸರ್ಕಾರವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ನ್ಯಾಯಾಲಯದ ಷರತ್ತುಗಳೇನು?
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿರುವ ಹೈಕೋರ್ಟ್, ವಿದ್ಯಾರ್ಥಿ ಸಂಘಟನೆಗೆ ಹಲವು ಷರತ್ತುಗಳನ್ನು ವಿಧಿಸಿದೆ.
ಪ್ರತಿಭಟನೆಯಲ್ಲಿ ಕೇವಲ 100 ಜನರು ಮಾತ್ರ ಭಾಗವಹಿಸಬೇಕು. ಪಾಲ್ಗೊಳ್ಳುವವರ ಸಂಪೂರ್ಣ ಮಾಹಿತಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ಒದಗಿಸಬೇಕು. ಅರ್ಜಿಯೊಂದಿಗೆ ಸಲ್ಲಿಸುವ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ಭಾಗವಹಿಸಬೇಕು. ಪಟ್ಟಿಯಲ್ಲಿ ಇಲ್ಲದವರು ಅಥವಾ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ವ್ಯಕ್ತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬೇಕು.
ಮುನ್ನೆಚ್ಚರಿಕೆ ಕ್ರಮವಾಗಿ ಅನುಮತಿ ನಿರಾಕರಣೆ
ಹೈಕೋರ್ಟ್ ಆದೇಶದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ʼಹಿಂದಿನ ಪ್ರತಿಭಟನೆಗಳ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಕಳೆದ ಬಾರಿ ನಡೆದ ಹೋರಾಟದಲ್ಲಿ 17 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಈ ಸಂಬಂಧ 6 ಪ್ರಕರಣಗಳು ದಾಖಲಾಗಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಪರ್ಧಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲʼ ಎಂದು ಸ್ಪಷ್ಟಪಡಿಸಿದರು.
"ನ್ಯಾಯಾಲಯವು ನಮಗೆ ವಿವರಣೆ ನೀಡಲು ಎರಡು ದಿನಗಳ ಕಾಲಾವಕಾಶ ನೀಡಿತ್ತು. ನಾವು ವಾಸ್ತವಾಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಅದರಂತೆ ಈಗ ಕೋರ್ಟ್ ಕೆಲವು ಷರತ್ತುಗಳೊಂದಿಗೆ ನೆಹರು ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿದೆ," ಎಂದು ತಿಳಿಸಿದರು.
ಸ್ಪರ್ಧಾರ್ಥಿಗಳ ಬೇಡಿಕೆಗಳೇನು?
ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆ ನೀಡಿ ತಿಂಗಳು ಕಳೆದರೂ ನೇಮಕಾತಿ ಅಧಿಸೂಚನೆ ಆರಂಭಿಸದ ರಾಜ್ಯ ಸರ್ಕಾರದ ವಿರುದ್ಧ ಸ್ಪರ್ಧಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಧಾರವಾಡದಲ್ಲಿ ಕರೆ ನೀಡಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ಹಿನ್ನೆಲೆ ವಿದ್ಯಾರ್ಥಿ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.
ಖಾಲಿ ಹುದ್ದೆಗಳ ಭರ್ತಿ, ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಫಲಿತಾಂಶದ ಅಕ್ರಮ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆದಿರುವ ಎಲ್ಲಾ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು.
ಬಜೆಟ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಂದು ತಿಂಗಳೊಳಗಾಗಿ 56,432 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆ ನೀಡಿದ್ದರು. ಆದರೆ, ತಿಂಗಳು ಕಳೆದರೂ ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರ ಕೇವಲ ಸ್ಪರ್ಧಾರ್ಥಿಗಳಿಗೆ ಭರವಸೆಯನ್ನಷ್ಟೇ ನೀಡುತ್ತಿದೆ. ಕಾರ್ಯರೂಪಕ್ಕೆ ತರುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಆರ್. ಕಾಂತಕುಮಾರ್ ತಿಳಿಸಿದ್ದಾರೆ.
ಹೈಕೋರ್ಟ್ ಪ್ರತಿಭಟನೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಶೀಘ್ರವೇ ವಿದ್ಯಾರ್ಥಿ ಸಂಘಟನೆಗಳು, ಆಕಾಂಕ್ಷಿಗಳೊಂದಿಗೆ ಚರ್ಚಿಸಿ ಪ್ರತಿಭಟನೆಯ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.

