
Jal Jeevan Mission Scam|ಜೆಜೆಎಂ ಹಗರಣ; ಒಂದೇ ಬಿಡ್, ಒಬ್ಬರಿಗೇ ಬಹು ಗುತ್ತಿಗೆ
ತ್ರಿಪಕ್ಷೀಯ ಒಪ್ಪಂದ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೇ ನಿರಾಸಕ್ತಿ ವಹಿಸಿದೆ ಎನ್ನಲಾಗಿದೆ. 2025 ಮೇ ತಿಂಗಳಲ್ಲಿ ರಾಜ್ಯ ಆದೇಶ ಹೊರಡಿಸಿ, ತ್ರಿಪಕ್ಷೀಯ ಒಪ್ಪಂದ ಕಾರ್ಯಸಾಧುವಲ್ಲ ಎಂದು ಹೇಳಿತ್ತು.
ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯು ಕರ್ನಾಟಕದಲ್ಲಿ ಕುಂಟುತ್ತಾ ಸಾಗಿದೆ. ಕಳಪೆ ಕಾಮಗಾರಿ, ಹಣ ದುರುಪಯೋಗದ ಆರೋಪಗಳ ನಡುವೆಯೇ ಒಬ್ಬರೇ ಗುತ್ತಿಗೆದಾರರಿಗೆ ಹತ್ತಾರು ಕಾಮಗಾರಿ ನೀಡುವುದರೊಂದಿಗೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಸಿಎಜಿ ವರದಿ ಉಲ್ಲೇಖಿಸಿದೆ.
ಜಲಜೀವನ್ ಮಿಷನ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಒಬ್ಬರೇ ಬಿಡ್ ಸಲ್ಲಿಸಿ, ಗುತ್ತಿಗೆ ಪಡೆದಿರುವ ಸಾವಿರಾರು ಕಾಮಗಾರಿಗಳಿವೆ. ತಾಂತ್ರಿಕ ಸಾಮರ್ಥ್ಯ ಹಾಗೂ ಯೋಜನೆ ಕಾರ್ಯಗತದ ಸಾಮರ್ಥ್ಯ ನಿರ್ಣಯಿಸದೇ ಗುತ್ತಿಗೆ ನೀಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ದೂರಲಾಗಿದೆ.
ರಾಜ್ಯಾದ್ಯಂತ ಎಲ್ಲ ಗ್ರಾಮಗಳಲ್ಲಿ ಅಂತಿಮಗೊಳಿಸಲಾದ ಒಟ್ಟು 38,231 ಕಾಮಗಾರಿಗಳಲ್ಲಿ ಬರೋಬ್ಬರಿ 9,342 ಕಾಮಗಾರಿಗಳು ಏಕ ವ್ಯಕ್ತಿ ಅಥವಾ ಗುತ್ತಿಗೆದಾರರ ಪಾಲಾಗಿವೆ. ಬಿಡ್ ಪ್ರಕ್ರಿಯೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲದ ಸಂದರ್ಭದಲ್ಲಿ ಕೇಂದ್ರ ವಿಚಕ್ಷಣಾ ಆಯೋಗದ (ಸಿವಿಸಿ) ಮಾರ್ಗಸೂಚಿಯಂತೆ ವಿವರವಾದ ಸಮರ್ಥನೆಯೊಂದಿಗೆ ಪ್ರಾಧಿಕಾರದ ಅನುಮೋದನೆ ಪಡೆಯಬೇಕು. ಆಗ ಮಾತ್ರ ಒಂದೇ ಬಿಡ್ ಅಥವಾ ಒಬ್ಬರೇ ಗುತ್ತಿಗೆದಾರರಿಗೆ ಕಾಮಗಾರಿ ನೀಡಬಹುದು. ಆದರೆ, ಇಲ್ಲಿ ಅಂತಹ ಯಾವುದೇ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿಲ್ಲ ಎಂದು ವರದಿ ಹೇಳಿದೆ.
ಉದಾಹರಣೆಗೆ ಎಸ್42250 ಸಂಖ್ಯೆಯ ಬಿಡ್‌ದಾರರ ಲಾಗಿನ್ ಐಡಿಯು(ಗುರುತಿನ ಸಂಖ್ಯೆ) ಒಟ್ಟು 210 ಗುತ್ತಿಗೆ ಕಾಮಗಾರಿಗಳನ್ನು ಪಡೆದಿದೆ. ಈ ಪೈಕಿ 108 ಗುತ್ತಿಗೆಗಳಿಗೆ ಒಬ್ಬರೇ ಬಿಡ್‌ದಾರರಾಗಿದ್ದಾರೆ. ಅದೇ ರೀತಿ ಎಸ್18394 ಲಾಗಿನ್ ಐಡಿಯು 190 ಗುತ್ತಿಗೆ ಕಾಮಗಾರಿಗಳನ್ನು ಪಡೆದಿದೆ. ಇದರಲ್ಲಿ 100 ಕಾಮಗಾರಿಗಳಿಗೆ ಒಬ್ಬರೇ ಬಿಡ್‌ದಾರರು ಇದ್ದುದನ್ನು ಸಿಎಜಿ ಪತ್ತೆ ಮಾಡಿದೆ. ಕುತೂಹಲಕಾರಿ ಸಂಗತಿಯೆಂದರೆ ಹಲವು ಕಾಮಗಾರಿಗಳನ್ನು ವಹಿಸಿಕೊಂಡಿದ್ದ 10 ಅಗ್ರ ಗುತ್ತಿಗೆದಾರರ ಪೈಕಿ ಆರು ಮಂದಿ ಗುತ್ತಿಗೆದಾರರು ಶೇ 50ಕ್ಕೂ ಹೆಚ್ಚು ಕಾಮಗಾರಿಗಳಿಗೆ ಏಕೈಕ ಬಿಡ್‌ದಾರರಾಗಿದ್ದಾರೆ.
ಸರ್ಕಾರದ ಸಮರ್ಥನೆ ಏನು?
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಮತ್ತು ಯೋಜನೆ ಪೂರ್ಣಗೊಳಿಸುವ ಅವಧಿ ಕಡಿಮೆ ಇರುವ ಹಿನ್ನೆಲೆ ತ್ವರಿತವಾಗಿ ಯೋಜನೆ ಅನುಷ್ಠಾನಗೊಳಿಸಲು ಒಬ್ಬರೇ ಗುತ್ತಿಗೆದಾರರರಿಗೆ ಕಾಮಗಾರಿ ನೀಡಲಾಗಿದೆ. ಗುತ್ತಿಗೆ ನೀಡುವ ಮುನ್ನ ಹಣಕಾಸು ಇಲಾಖೆಯ ನಿರ್ದೇಶನದಂತೆ ಒಂದೇ ಬಿಡ್ ಅನ್ನು ಗುತ್ತಿಗೆಗೆ ಪರಿಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ 2025 ಮೇ ತಿಂಗಳಲ್ಲಿ ಹೇಳಿತ್ತು.
ಕಾರ್ಯಗತವಾಗದ ತ್ರಿಪಕ್ಷೀಯ ಒಪ್ಪಂದ
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಾಲುದಾರರಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸಮನ್ವಯತೆ ಖಚಿತಪಡಿಸಿಕೊಳ್ಳಲು ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಮಾರ್ಗಸೂಚಿಗಳಲ್ಲಿ ಹೇಳಲಾಗಿತ್ತು. ಆದಾಗ್ಯೂ, ಹಲವು ಜಿಲ್ಲೆಗಳಲ್ಲಿ ತ್ರಿಪಕ್ಷೀಯ ಒಪ್ಪಂದ ಪಾಲನೆಯಾಗದಿರುವುದನ್ನು ಸಿಎಜಿ ವರದಿ ಪತ್ತೆ ಹಚ್ಚಿದೆ.
ಕೆಲವು ಜಿಲ್ಲೆಗಳಲ್ಲಿ ತಾಂತ್ರಿಕ ಬೆಂಬಲ, ಸಾಮರ್ಥ್ಯ ವೃದ್ಧಿಯನ್ನು ನಿರ್ಣಯಿಸುವ ಜಿಲ್ಲಾ ಜಲ ಮತ್ತು ನೈರ್ಮಲ್ಯ ಮಿಷನ್, ಗ್ರಾಮ ಪಂಚಾಯಿತಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ, ಅಂತಾರಾಷ್ಟ್ರೀಯ ಲೆಕ್ಕಪರಿಶೋಧನಾ ಮಾನದಂಡ(ಐಎಸ್ಎ) ಮತ್ತು ಇತರೆ ಸಹವರ್ತಿ ಸಂಸ್ಥೆಗಳು ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿ ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಈ ಒಪ್ಪಂದಗಳು ಅನುಷ್ಠಾನವಾಗದ ಕಾರಣ ಯೋಜನೆಯನ್ನು ದುರ್ಬಲಗೊಳಿಸಿವೆ ಎಂದು ದೂರಲಾಗಿದೆ.
ತ್ರಿಪಕ್ಷೀಯ ಒಪ್ಪಂದಗಳ ನಿರ್ಲಕ್ಷ್ಯದಿಂದಲೇ ಯೋಜನೆ ವಿಳಂಬ ಮತ್ತು ಸಮನ್ವಯತೆ ವೈಫಲ್ಯಕ್ಕೆ ಕಾರಣವಾಗಿದೆ. ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಯೋಜನೆ ಕಾರ್ಯಗತಗೊಳಿಸುವ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿಗಳ ನಡುವಿನ ವಿವಾದಗಳು ಹಲವಾರು ಸಂದರ್ಭಗಳಲ್ಲಿ ಪ್ರಗತಿಯನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದಿವೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.
ತ್ರಿಪಕ್ಷೀಯ ಒಪ್ಪಂದಕ್ಕೆ ಸರ್ಕಾರ ನಿರಾಕರಣೆ
ರಾಜ್ಯದಲ್ಲಿ ತ್ರಿಪಕ್ಷೀಯ ಒಪ್ಪಂದಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೇ ನಿರಾಸಕ್ತಿ ವಹಿಸಿದೆ ಎನ್ನಲಾಗಿದೆ. 2025 ಮೇ ತಿಂಗಳಲ್ಲಿ ರಾಜ್ಯ ಸರ್ಕಾರವೇ ಈ ಸಂಬಂಧ ಆದೇಶ ಹೊರಡಿಸಿ, ತ್ರಿಪಕ್ಷೀಯ ಒಪ್ಪಂದ ಕಾರ್ಯಸಾಧುವಲ್ಲ ಎಂದು ಹೇಳಿತ್ತು.
ಜಲಜೀವನ್ ಮಿಷನ್ನಡಿ ಕೈಗೊಳ್ಳುವ ಗ್ರಾಮೀಣ ಮೂಲಸೌಕರ್ಯ ಕಾರ್ಯಗಳು ವಿಡಬ್ಲ್ಯೂಎಸ್ಸಿಯಿಂದ ಅನುಮೋದಿತವಾದ ಗ್ರಾಮ ಕ್ರಿಯಾ ಯೋಜನೆ ಪ್ರಕಾರ ಆರ್ಡಿಡಬ್ಲ್ಯೂಎಸ್ಡಿಯಿಂದ ಅನುಷ್ಠಾನವಾಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಆಯಾ ವಿಡಬ್ಲ್ಯೂಎಸ್ಸಿಗೆ ಹಸ್ತಾಂತರಿಸಲಾಗುವುದು. ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರ ಮೂಲಕ ಕಾಯಾಚರಣೆ ಮತ್ತು ನಿರ್ವಹಣೆ (ಒ&ಎಂ) ಜೊತೆಗೆ ಆರ್ಡಿಡಬ್ಲ್ಯೂಎಸ್ಡಿಯು ಬೃಹತ್ ಪ್ರಮಾಣದ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸುತ್ತದೆ ಎಂದು ಹೇಳಿತ್ತು.
ಪಾಲನೆಯಾಗದ ಷರತ್ತು?
ಟೆಂಡರ್ ಆಹ್ವಾನಿಸುವ ಪ್ರಾಧಿಕಾರಕ್ಕೆ (ಟಿಐಎ) ಮೊದಲ ಆಯ್ಕೆಯು ಟೆಂಡರ್ ಅನ್ನು ಹಿಂಪಡೆಯುವುದು ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಟೆಂಡರ್ ಪ್ರೀಮಿಯಂ ಶೇಕಡಾ ಐದಕ್ಕಿಂತ ಹೆಚ್ಚಿದ್ದರೆ ಟಿಐಎ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಬಿಡ್‌ದಾರರೊಂದಿಗೆ ಮಾತುಕತೆ ನಡೆಸಬಹುದು ಎಂದು ಹಣಕಾಸು ಇಲಾಖೆ ಷರತ್ತು ವಿಧಿಸಿವೆ.
9,342 ಪ್ರಕರಣಗಳಲ್ಲಿ, ಟೆಂಡರ್ ಪ್ರೀಮಿಯಂ ಶೇಕಡಾ ಐದುಕ್ಕಿಂತ ಹೆಚ್ಚಿರುವ 791 ನಿದರ್ಶನಗಳಿವೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಟೆಂಡರ್ ಪ್ರೀಮಿಯಂ ಶೇಕಡಾ ಐದರಿಂದ ಶೇಕಡಾ 61 ರವರೆಗಿನ ಎಲ್ಲಾ 791 ಪ್ರಕರಣಗಳಿಗೆ ಮಿಷನ್ ಮೋಡ್ ಉಲ್ಲೇಖಿಸುವುದನ್ನು ವಿನಾಯಿತಿಯಾಗಿ ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಸರ್ಕಾರದ ಸಮರ್ಥನೆ ಸ್ವೀಕಾರಾರ್ಹವಲ್ಲ ಎಂದು ಸಿಎಜಿ ತಿರುಗೇಟು ನೀಡಿದೆ.
ಅಲ್ಲದೇ ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಲಭ್ಯವಿರುವ ಟೆಂಡರ್ ಸಾಮರ್ಥ್ಯವನ್ನು ಪರಿಗಣಿಸಿದ ನಂತರವಷ್ಟೇ ಕಾಮಗಾರಿಗಳನ್ನು ನೀಡಲಾಗುತ್ತಿದೆಯೇ ಎಂಬುದು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ರಾಜ್ಯದ ಹಲವೆಡೆ ಕಳಪೆ ಕಾಮಗಾರಿ
ಬೀದರ್, ಕಲಬುರಗಿ, ಯಾದಗಿರಿ ಮತ್ತು ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಜೆಎಂ ಕಾಮಗಾರಿ ಅತ್ಯಂತ ಕಳಪೆಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಪೈಪ್ಲೈನ್ ಅಳವಡಿಸದಿರುವುದು ಹಾಗೂ ನೀರು ಸರಬರಾಜಿಗೆ ಮೊದಲೇ ನಲ್ಲಿಗಳು ಹಾಳಾಗುತ್ತಿವೆ ಎಂದು ಆರೋಪಿಸಲಾಗಿದೆ.
ಉದ್ದೇಶಿತ ಗುರಿ ತಲುಪುವಲ್ಲಿ ಯೋಜನೆ ವಿಳಂಬವಾಗುತ್ತಿದ್ದು, ಶಿವಮೊಗ್ಗ ಮತ್ತು ಮಂಗಳೂರು ಭಾಗಗಳಲ್ಲಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಕೆಲವು ಕಡೆ ಕಾಮಗಾರಿ ಮುಗಿಯುವ ಮೊದಲೇ ಅನುದಾನ ಖಾಲಿಯಾಗಿದೆ.
ಜೆಜೆಎಂ ಯೋಜನೆ ಏನು, ಎತ್ತ?
ಗ್ರಾಮೀಣ ಭಾರತದ ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಮಹತ್ವಕಾಂಕ್ಷೆಯ ಯೋಜನೆ ಜಲಜೀವನ್ ಮಿಷನ್. 2024ರ ವೇಳೆಗೆ ಯೋಜನೆ ಪೂರ್ಣಗೊಳಿಸಬೇಕಿತ್ತು. ಆದರೆ, ಗುರಿ ಸಾಧನೆ ಕಡಿಮೆಯಾಗಿರುವ ಹಿನ್ನೆಲೆ 2028 ರವರೆಗೆ ಯೋಜನೆ ಅನುಷ್ಠಾನವನ್ನು ವಿಸ್ತರಿಸಲಾಗಿದೆ. ಈ ಯೋಜನೆಯಡಿ ಪ್ರತಿ ವ್ಯಕ್ತಿಗೂ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಉದ್ದೇಶ ಹೊಂದಿದೆ.
ಗ್ರಾಮೀಣ ಪ್ರದೇಶದ ಜನವಸತಿ ಪ್ರದೇಶಗಳು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಇದೆ. ಇದಕ್ಕಾಗಿ ಸುಮಾರು 3.60 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 50:50 ಅನುಪಾತದಲ್ಲಿ ಅನುಷ್ಠಾನವಾಗುತ್ತಿದೆ.

