
Internal Reservation| ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ; ಎಡಗೈ ಸಮುದಾಯ ಸರ್ವಾನುಮತದ ನಿರ್ಣಯ
ಉಪಚುನಾವಣೆ ನಡೆಯುವ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕವಾಗಿದ್ದು, ಎಡಗೈ ಸಮುದಾಯವು ಸಂಘಟಿತವಾಗಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದರೆ ಸರ್ಕಾರದ ಅಸ್ತಿತ್ವ ಮತ್ತು ವರ್ಚಸ್ಸಿಗೆ ದೊಡ್ಡ ಹೊಡೆತ ನೀಡಲಿದೆ.
ರಾಜ್ಯ ರಾಜಕಾರಣದಲ್ಲಿ 35 ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಒಳ ಮೀಸಲಾತಿ ಹೋರಾಟ ಇದೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ʼಮಾಡು ಇಲ್ಲವೇ ಮಡಿʼ ಹೋರಾಟ ಆರಂಭಿಸಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯವು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿದೆ.
ಒಳ ಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಮುದಾಯದ ಮತಬ್ಯಾಂಕ್ ಮೂಲಕವೇ ತಕ್ಕಪಾಠ ಕಲಿಸಲು ನಿರ್ಧರಿಸಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ಪ್ರಚಾರ ಆರಂಭಿಸಲು ಒಳ ಮೀಸಲಾತಿ ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ.
ಈ ಸಂಬಂಧ ಶನಿವಾರ ಜೂಮ್ ಮೀಟಿಂಗ್‌ನಲ್ಲಿ ಸಭೆ ನಡೆಸಿದ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕರ ತಂಡ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿ, ಆ ಪಕ್ಷದ ಅಭ್ಯರ್ಥಿಗಳನ್ನು ಮಣಿಸಲು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ಈ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಸುತ್ತಾ ಶಾಶ್ವತ ಮತಬ್ಯಾಂಕ್‌ನಂತಿದ್ದ ಎಡಗೈ ಸಮುದಾಯವು ಇದೀಗ ತನ್ನ ವಿರುದ್ಧವೇ ರಾಜಕೀಯವಾಗಿ ಮತಬ್ಯಾಂಕ್ ಅಸ್ತ್ರ ಬಳಸಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷದ ಆತಂಕಕ್ಕೆ ಕಾರಣವಾಗಿದೆ.
ಫಲಿತಾಂಶ ನೀಡದ ಆಯೋಗಗಳ ವರದಿ
ಒಳ ಮೀಸಲಾತಿ ಹಂಚಿಕೆ ವಿಚಾರದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದಿಂದ ಹಿಡಿದು ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗದವರೆಗೂ ಎಡಗೈ ಸಮುದಾಯವನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಮುದಾಯ ನಿರ್ಧರಿಸಿದೆ.
ಸಂಘಟನೆಗಳು ರಾಜಕೀಯವಾಗಿ ಇಬ್ಭಾಗವಾಗಿರುವ ಕಾರಣ ಒಳ ಮೀಸಲಾತಿ ಹೋರಾಟ ಸಮಿತಿಯೇ ಈ ಪ್ರಮುಖ ನಿರ್ಣಯ ಕೈಗೊಂಡಿದ್ದು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತೀರ್ಮಾನಿಸಿದೆ ಎಂದು ರಾಜ್ಯ ಸಂಚಾಲಕರ ಸಮಿತಿಯ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ನ್ಯಾ. ಎ.ಜೆ. ಸದಾಶಿವ ಆಯೋಗ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ ಒಳ ಮೀಸಲಾತಿಗೆ ಶಿಫಾರಸು ಮಾಡಿ ವರ್ಷಗಳೇ ಉರುಳಿದರೂ, ಯಾವುದೇ ಸರ್ಕಾರ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಧೈರ್ಯ ತೋರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರವು ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದರೂ ಮೀಸಲಾತಿ ವರ್ಗೀಕರಣದ ವಿಚಾರವನ್ನು ಕಾನೂನು ಸಂಘರ್ಷಕ್ಕೆ ದೂಡಿದ ಸರ್ಕಾರದ ನಿಲುವು ಒಳ ಮೀಸಲಾತಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದ ನಂತರವೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಸಮುದಾಯದ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ. ಒಳ ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿಯಲ್ಲೇ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವಿನ ಹಿತಾಸಕ್ತಿ ಸಂಘರ್ಷ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಎಡಗೈ ಸಮುದಾಯಕ್ಕೆ ಒಳ ಮೀಸಲಾತಿ ನೀಡಿದರೆ ಬಲಗೈ ಸಮುದಾಯದ ಅಸಮಾಧಾನ ಎದುರಿಸಬೇಕಾಗುತ್ತದೆ ಎಂಬ ಭೀತಿಯಲ್ಲಿ ಸರ್ಕಾರ ಸಮಿತಿಗಳ ಮೇಲೆ ಸಮಿತಿಗಳನ್ನು ರಚಿಸುತ್ತಿದೆ. ಆದರೆ, ಈಗ ಎಡಗೈ ಸಮುದಾಯವು ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸದಿಂದ ವಿಮುಖವಾಗುವ ದಿಟ್ಟ ನಿರ್ಧಾರ ಕೈಗೊಂಡಿದ್ದು, ಉಪಚುನಾವಣೆಯಿಂದ ʼಕೈʼ ವಿರೋಧಿ ನಿಲುವು ತಳೆಯಲು ನಿರ್ಧಸಿರುವುದು ಆಘಾತ ಮೂಡಿಸಿದೆ.
ಕಾಂಗ್ರೆಸ್‌ನಿಂದ ಎಡಗೈ ದೂರ; ಆಗುವ ಪರಿಣಾಮಗಳೇನು?
ಉಪಚುನಾವಣೆ ನಡೆಯುವ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕವಾಗಿದ್ದು, ಎಡಗೈ ಸಮುದಾಯವು ಸಂಘಟಿತವಾಗಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದರೆ ಸರ್ಕಾರದ ಅಸ್ತಿತ್ವ ಮತ್ತು ವರ್ಚಸ್ಸಿಗೆ ದೊಡ್ಡ ಹೊಡೆತ ನೀಡಲಿದೆ.
"ಸರ್ಕಾರ ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದೆ. ನಮಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ. ಈ ಉಪಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿಯೇ ತೀರುತ್ತೇವೆ. ಹಾಗಂತ ಇಂತಹದ್ದೇ ಪಕ್ಷಕ್ಕೆ ಮತ ನೀಡಿ ಎಂದು ಕೇಳುವುದಿಲ್ಲ. ಅಂತಿಮವಾಗಿ ಯಾರಿಗೆ ಮತ ಹಾಕಬೇಕೆಂಬುದನ್ನು ಮತದಾರರೇ ತೀರ್ಮಾನಿಸಲಿ ಎಂದು ಕೇಶವಮೂರ್ತಿ ಹೇಳಿದರು.

